ಮಾರುಕಟ್ಟೆಯಲ್ಲಿ ಸೆಬಿ ನಡೆಸಿದ ತನಿಖೆಯನ್ನು ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯು ಇಂದು ನಡೆಯಲಿದೆ. ಇದಕ್ಕೂ ಮುನ್ನ ಮಂಗಳವಾರದ ಆರಂಭಿಕ ವಹಿವಾಟಿನ ಅವಧಿಯಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಜಿಗಿತವನ್ನು ಕಂಡಿದೆ. ದೇಶದ ಸರ್ವೋಚ್ಚ ನ್ಯಾಯಾಲಯವು ಇಂದು ಅದಾನಿ ಹಿಂಡನ್‌ಬರ್ಗ್ ವಿಷಯದಲ್ಲಿ ವಿಚಾರಣೆಯನ್ನು ನಡೆಸಲಿದೆ.
ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ, ಮೋಸದ ವಹಿವಾಟುಗಳನ್ನು ನಡೆಸಿದೆ ಮತ್ತು ಇತರ ಹಣಕಾಸಿನ ವಂಚನೆಗಳನ್ನು ಮಾಡಿದೆ ಎಂದು ಆರೋಪಿಸಿ ಜನವರಿ ತಿಂಗಳಿನಲ್ಲಿ ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಮಾಡಿದೆ. ಆದರೆ ಗೌತಮ್ ಅದಾನಿ ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಅದಾನಿ ಗ್ರೂಪ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಹಾಗೆಯೇ ಬಿಲಿಯನ್ ಡಾಲರ್ ಮೌಲ್ಯದ ಸಂಘಟಿತ ಸಂಸ್ಥೆಗಳ ವಿರುದ್ಧ ಹಿಂಡನ್‌ಬರ್ಗ್ ಮಾಡಿದ ಆರೋಪಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಕೋರಲಾಗಿದೆ. ಈ ಬೆನ್ನಲ್ಲೇ ತನಿಖೆ ನಡೆಸಿ ವರದಿ ಸಲ್ಲಿಸಲು ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅದಾನಿ ಗ್ರೂಪ್ ಮತ್ತು ಹಿಂಡನ್‌ಬರ್ಗ್ ವಿವಾದದ ಬಗ್ಗೆ ಮಾರುಕಟ್ಟೆ ನಿಯಂತ್ರಕ ಸೆಬಿ ತನಿಖೆ ನಡೆಸುತ್ತಿದ್ದು ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ಸೆಬಿಯು ಅದಾನಿ ಗ್ರೂಪ್ ವಿರುದ್ದದ 24 ತನಿಖೆಗಳಲ್ಲಿ 22 ಸಂಶೋಧನೆಗಳನ್ನು ಸಲ್ಲಿಸಿದೆ. ಉಳಿದ ಎರಡು ತನಿಖೆಗಳಿಗಾಗಿ ಬಾಹ್ಯ ಏಜೆನ್ಸಿಗಳಿಂದ ಡೇಟಾವನ್ನು ನಿರೀಕ್ಷಿಸುತ್ತಿದೆ. ಅದಾನಿ ಹಿಂಡನ್‌ಬರ್ಗ್ ಪ್ರಕರಣದಲ್ಲಿ ತನಿಖೆಯು ಬಹುತೇಕ ಅಂತಿಮ ಹಂತವನ್ನು ತಲುಪಿದೆ ಎಂದು ಸೆಬಿ ಹೇಳಿದೆ.
ಇದಕ್ಕೂ ಮೊದಲು, ಆಗಸ್ಟ್ 14 ರಂದು, ಸೆಬಿ ಅದಾನಿ-ಹಿಂಡನ್‌ಬರ್ಗ್ ವಿವಾದದ ವರದಿಗಾಗಿ 15 ದಿನಗಳಿಗಿಂತ ಹೆಚ್ಚು ಕಾಲಾವಕಾಶ ಕೇಳಿತ್ತು. ಸೆಬಿ ತನ್ನ ತನಿಖಾ ವರದಿಯನ್ನು 12 ದಿನಗಳೊಳಗೆ ನೀಡಿದೆ. ಈ ಹಿಂದೆ ಜನವರಿಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂಬ ಆರೋಪದಲ್ಲಿ ವರದಿಯನ್ನು ಮಾಡಿದೆ. ಅದಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ನಿರಂತರವಾಗಿ ಇಳಿಕೆ ಕಾಣುತ್ತಾ ಬಂದಿದೆ. ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನ ಅದಾನಿ ಸ್ಟಾಕ್ ಹೇಗಿದೆ ಎಂದು ತಿಳಿಯಿರಿ
ಅದಾನಿ ಸ್ಟಾಕ್ ಹೇಗಿದೆ?
ಆಗಸ್ಟ್ 29 ರಂದು ಈ ಸಮಯಕ್ಕೆ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಶೇಕಡ 1.59 ರಷ್ಟು ಜಿಗಿತ ಕಂಡಿದೆ, ಅದಾನಿ ಪೋರ್ಟ್ಸ್ ಶೇಕಡ 1.39 ನಷ್ಟು ಏರಿಕೆಯಾಗಿದೆ. ಅದಾನಿ ಟೋಟಲ್ ಗ್ಯಾಸ್ ಸುಮಾರು ಶೇಕಡ 0.41 ರಷ್ಟು ಹೆಚ್ಚಳವಾಗಿದೆ. ಆದರೆ ಈ ನಡುವೆ ಅದಾನಿ ಗ್ರೀನ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಕ್ರಮವಾಗಿ ಶೇಕಡ 1.14 ಮತ್ತು ಶೇಕಡ 0.0058 ರಷ್ಟು ಇಳಿಕೆಯನ್ನು ಕಂಡಿದೆ.
ಈ ನಡುವೆ ಅದಾನಿ ವಿಲ್ಮಾರ್ ಷೇರುಗಳು ಶೇಕಡ 0.013 ನಷ್ಟು ಹೆಚ್ಚಳವಾಗಿದೆ. ಅದಾನಿ ಗ್ರೂಪ್‌ನ ಸಿಮೆಂಟ್ ಸ್ಟಾಕ್ ಅಂಬುಜಾ ಸಿಮೆಂಟ್ಸ್ ಸಹ ಶೇಕಡ 1.15 ನಷ್ಟು ಏರಿಕೆಯಾಗಿದೆ. ಈ ನಡುವೆ ಅದಾನಿ ಸಂಸ್ಥೆಯ ಇನ್ನೊಂದು ಸಿಮೆಂಟ್ ಸ್ಟಾಕ್ ಆದ ಎಸಿಸಿ ಶೇಕಡ 0.048 ರಷ್ಟು ಕುಸಿತಗೊಂಡಿದೆ. ಸಂಸ್ಥೆಯ ಮಾಧ್ಯಮ ಸ್ಟಾಕ್ ಆದ ಎನ್‌ಡಿಟಿವಿ ಶೇಕಡ 0.43ರಷ್ಟು ಜಿಗಿದಿದೆ. ಅದಾನಿ ಪವರ್ ಶೇಕಡ 2.92 ರಷ್ಟು ಲಾಭವನ್ನು ಗಳಿಸಿದೆ.


Click it and Unblock the Notifications