ನವದೆಹಲಿ, ನ. 2: ದೇಶದ ಎಲ್ಲಾ ತೆರಿಗೆ ಪಾವತಿದಾರರಿಗೆ ಸಾಮಾನ್ಯವಾಗಿರುವ ಐಟಿಆರ್ ಫಾರ್ಮ್ ಅನ್ನು ತರಲು ಕೇಂದ್ರದ ಸಿಬಿಡಿಟಿ ಮಂಡಳಿ ಕರಡು ಪ್ರಸ್ತಾವ ಮುಂದಿಟ್ಟಿದೆ. ಹಲವು ಐಟಿಆರ್ ಫಾರ್ಮ್‌ಗಳನ್ನು ವಿಲೀನಗೊಳಿಸುವ ಯೋಜನೆ ಇದೆ. ಐಟಿಆರ್ 1, ಐಟಿಆರ್ 4 ಮತ್ತು ಐಟಿಆರ್ 7 ಬಿಟ್ಟು ಉಳಿದೆಲ್ಲವೂ ಒಂದೇ ಫಾರ್ಮ್ ಅಡಿ ಬರುತ್ತವೆ.
ಸದ್ಯ ಐಟಿ ರಿಟರ್ನ್‌ಗಳನ್ನು 7 ಐಟಿಆರ್ ಫಾರ್ಮ್‌ಗಳ ಮೂಲಕ ಸಲ್ಲಿಸಲಾಗುತ್ತಿದೆ. ತೆರಿಗೆ ಪಾವತಿದಾರರು ಬೇರೆ ವಿಭಾಗಕ್ಕೆ ಸೇರಿದರೂ, ಆದಾಯ ಗುಂಪು ಬೇರೆಯೇ ಇದ್ದರೂ ಎಲ್ಲಾ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕು.
ಆದರೆ, ಹೊಸ ಪ್ರಸ್ತಾವದ ಪ್ರಕಾರ ಹಲವು ಫಾರ್ಮ್‌ಗಳನ್ನು ತುಂಬಿಸುವ ರಗಳೆ ತಪ್ಪುತ್ತದೆ. ರಿಪರ್ನ್ ಫೈಲ್ ಮಾಡಲು ತಮಗೆ ಅಗತ್ಯವಾದ ನಿರ್ದಿಷ್ಟ ಫಾರ್ಮ್ ತುಂಬಿಸುವ ಅವಕಾಶ ಇರುತ್ತದೆ. ಐಟಿ ರಿಟರ್ನ್ ಸಲ್ಲಿಸುವವರು ಈಗಿರುವ ಐಟಿಆರ್ 1 ಅಥವಾ ಐಟಿಆರ್ 4 ಫಾರ್ಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಇನ್ನೊಂದು ಕಾಮನ್ ಫಾರ್ಮ್ ಅನ್ನು ಆರಿಸಿಕೊಳ್ಳಬಹುದು.

"ಅಂತಾರಾಷ್ಟ್ರೀಯವಾಗಿ ಇರುವ ಅತ್ಯುತ್ತಮ ಪದ್ಧತಿಯ ಅನುಸಾರವಾಗಿ ಭಾರತದಲ್ಲಿ ಐಟಿ ರಿಟರ್ನ್ ವ್ಯವಸ್ಥೆಯನ್ನು ಮಾರ್ಪಡಿಸುವ ಯೋಜನೆ ಇದೆ. ಐಟಿಆರ್-7 ಹೊರತುಪಡಿಸಿ ಉಳಿದೆಲ್ಲಾ ಫಾರ್ಮ್‌ಗಳನ್ನು ವಿಲೀನಗೊಳಿಸಿ ಒಂದು ಕಾಮನ್ ಐಟಿಆರ್ ತರಲಾಗುತ್ತದೆ. ಆದರೆ ಈಗಿರುವ ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳು ಮುಂದುವರಿಯುತ್ತವೆ. ಇದರಿಂದ ಟ್ಯಾಕ್ಸ್ ಪೇಯರ್‌ಗಳು ಈಗಿರುವ ಫಾರ್ಮ್ (ಐಟಿಆರ್-1 ಅಥವಾ ಐಟಿಆರ್-4) ಮೂಲಕ ರಿಟರ್ನ್ ಫೈಲ್ ಮಾಡಬಹುದು, ಅಥವಾ ಪ್ರಸ್ತಾವಿತ ಸಾಮಾನ್ಯ ಐಟಿಆರ್ ಫಾರ್ಮ್ ಮೂಲಕ ರಿಟರ್ನ್ ಸಲ್ಲಿಸಬಹುದು" ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಡಿಗೆ ಬರುವ ಸಿಬಿಡಿಟಿ ಹೇಳಿಕೆ ನೀಡಿದೆ.
"ಈಗಿರುವ ಐಟಿಆರ್‌ಗಳಲ್ಲಿ ತೆರಿಗೆ ಪಾವತಿದಾರರು ತಮಗೆ ಅನ್ವಯ ಆಗದಿದ್ದರೂ ಎಲ್ಲಾ ಸ್ಕೆಡ್ಯೂಲ್‌ಗಳನ್ನೂ ನೋಡಬೇಕಾಗುತ್ತದೆ. ಇದರಿಂದ ಐಟಿಆರ್‌ಗನ್ನು ಫೈಲ್ ಮಾಡಲು ಬಹಳ ಸಮಯ ಹಿಡಿಯುತ್ತದೆ. ಟ್ಯಾಕ್ಸ್ ಪೇಯರ್ಸ್‌ಗೆ ಅನಗತ್ಯ ಕಿರಿಕಿರಿ ಆಗುತ್ತದೆ" ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿನ್ನೆ ಮಂಗಳವಾರ ಸ್ಪಷ್ಟಪಡಿಸಿದೆ.

ಈಗಿರುವ ಐಟಿ ರಿಟರ್ನ್ ಫೈಲಿಂಗ್ ವ್ಯವಸ್ಥೆ ತುಸು ಸಂಕೀರ್ಣವಾಗಿರುವುದರಿಂದ ಬಹುತೇಕ ತೆರಿಗೆ ಪಾವತಿದಾರರು ಏಜೆಂಟ್‌ಗಳ ಮೂಲಕವೇ ರಿಟರ್ನ್ ಫೈಲ್ ಮಾಡುತ್ತಾರೆ. ಈಗ ಸಿಬಿಡಿಟಿಯ ಕರಡು ಪ್ರಸ್ತಾವವು ಐಟಿಆರ್ ಫೈಲಿಂಗ್ ವ್ಯವಸ್ಥೆಯನ್ನು ಸರಳಗೊಳಿಸಲಿದ್ದು, ಇದು ಜಾರಿಗೆ ಬಂದರೆ ತೆರಿಗೆ ಪಾವತಿದಾರರ ತಲೆನೋವು ಕಡಿಮೆಯಾಗಬಹುದು. ರಿಟರ್ನ್ ಫೈಲ್ ಮಾಡುವ ಸಮಯ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರ ಮುಂದಿಟ್ಟಿರುವ ಹೊಸ ಪ್ರಸ್ತಾವದ ಬಗ್ಗೆ ಜನರ ಅಭಿಪ್ರಾಯವನ್ನು ಆಧರಿಸಿ ಅದನ್ನು ಜಾರಿಗೆ ತರಬೇಕೋ ಬೇಡವೋ ಅಥವಾ ಬೇರೆನಿನ್ನೇದಾದರೂ ಮಾರ್ಪಾಡು ಮಾಡಬಹುದಾ ಎಂಬುದನ್ನು ನಿರ್ಧರಿಸಲಿದೆ.


Click it and Unblock the Notifications