ಅಹಮದಾಬಾದ್‌ನಲ್ಲಿ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿದೆ. ಈ ಪಂದ್ಯವನ್ನು ನೀವು ನೋಡಲು ಬಯಸಿದರೆ, ಅದು ದುಬಾರಿಯಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ.
ಅಹಮದಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರತ ಪಾಕಿಸ್ತಾನ ಪಂದ್ಯಕ್ಕೂ ಮುನ್ನವೇ ಮಾನ ದರಗಳು ಮತ್ತು ಹೋಟೆಲ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದ್ದರಿಂದಾಗಿ ನೀವು ಈ ಪಂದ್ಯವನ್ನು ನೋಡಲು ಬಯಸಿದರೆ, ಅಧಿಕ ವೆಚ್ಚ ಆಗುವುದು ಖಂಡಿತ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಹಮದಾಬಾದ್‌ನಲ್ಲಿರುವ ಹೋಟೆಲ್‌ಗಳು ಸಂಪೂರ್ಣವಾಗಿ ಬುಕ್ ಆಗಿವೆ ಅಥವಾ ಪ್ರೀಮಿಯಂ ದರದಲ್ಲಿ ಕೊಠಡಿಗಳನ್ನು ನೀಡಲಾಗುತ್ತಿದೆ. ಇನ್ನು ವಿಮಾನ ಪ್ರಯಾಣ ವಿಚಾರಕ್ಕೆ ಬಂದಾಗಲೂ ಕೂಡಾ ಪರಿಸ್ಥಿತಿಯು ಭಿನ್ನವಾಗಿಲ್ಲ.
ಕಳೆದ ತಿಂಗಳಲ್ಲಿ, ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್‌ಗೆ ಬರುವ ವಿಮಾನಗಳ ಬೆಲೆಗಳು ಗಗನಕ್ಕೇರಿವೆ. ವಿಮಾನಗಳ ಟಿಕೆಟ್ ದರವು ಸುಮಾರು ಶೇಕಡ 415 ರಷ್ಟು ಏರಿಕೆಯಾಗಿದೆ. ನಿಮ್ಮ ಟಿಕೆಟ್‌ಗಳನ್ನು 25-30 ದಿನಗಳ ಮುಂಚಿತವಾಗಿ ಕಾಯ್ದಿರಿಸುವ ಯೋಚನೆ ನಿಮಗಿದ್ದರೆ, ನೀವು ಪ್ರಯಾಣ ಆರಂಭ ಮಾಡುವ ನಗರವನ್ನು ಅವಲಂಬಿಸಿ, ಪ್ರತಿ ವ್ಯಕ್ತಿಗೆ 5,500 ರೂಪಾಯಿಯಿಂದ 12,000 ರೂಪಾಯಿವರೆಗೆ ದರವನ್ನು ಪಾವತಿಸ ಬೇಕಾಗುತ್ತದೆ.
ವಿಶ್ವಕಪ್ ಪಂದ್ಯವನ್ನು ನೋಡಲು ಕೊನೆಯ ನಿಮಿಷದಲ್ಲಿ ಪ್ರವಾಸವನ್ನು ಮಾಡಲು ಬಯಸುವವರಿಗೆ ಈ ಸನ್ನಿವೇಶವು ವಿಭಿನವಾಗುತ್ತದೆ. ವಿಮಾನ ದರಗಳು ಪ್ರಸ್ತುತ ಶೇಕಡ 104 ರಿಂದ ಶೇಕಡ 415 ರ ನಡುವೆ ಏರಿಕೆಯಾಗಿದೆ. ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಏರಿಕೆಯಾಗಬಹುದು.
ಪ್ರಯಾಣದ ನಿರ್ವಾಹಕರೊಬ್ಬರು ಹೆಚ್ಚುತ್ತಿರುವ ವೆಚ್ಚಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ಪಂದ್ಯದ ದಿನಗಳಲ್ಲಿ ಅಹಮದಾಬಾದ್‌ಗೆ ಭೇಟಿ ನೀಡುವುದು ದುಬಾರಿಯಾಗಿದೆ. ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರತಿ ರಾತ್ರಿಯೊಂದಕ್ಕೆ 80,000 ರೂಪಾಯಿಯಷ್ಟು ಅಧಿಕ ಶುಲ್ಕ ವಿಧಿಸುವ ಹೋಟೆಲ್‌ಗಳ ಬಗ್ಗೆಯೂ ನಮಗೆ ತಿಳಿದಿದೆ. ಈ ನಡುವೆ ವಿಮಾನ ದರವು ಕೂಡಾ ಹೆಚ್ಚಾಗುತ್ತದೆ," ಎಂದು ತಿಳಿಸಿದ್ದಾರೆ.
ಇನ್ನು ಈ ನಡುವೆ ಕುತೂಹಲಕಾರಿ ವಿಚಾರವೆಂದರೆ ಆರಂಭಿಕ ಪಂದ್ಯ ಅಥವಾ ಕ್ವಾಲಿಫೈಯರ್ ಮತ್ತು ಅಂತಿಮ ಪಂದ್ಯಗಳಿಗೆ ಎಷ್ಟು ವಿಮಾನ ದರ ಇರುತ್ತದೆಯೋ, ಅದಕ್ಕಿಂತ ಅಧಿಕ ವಿಮಾನ ಟಿಕೆಟ್ ದರವು ಭಾರತ ಪಾಕಿಸ್ತಾನ ಪಂದ್ಯದ ವೇಳೆ ಇರುತ್ತದೆ ಎಂಬುವುದು ಗಮನಾರ್ಹ. ಈ ಹಿನ್ನೆಲೆ ಅಹಮದಾಬಾದ್‌ಗೆ ಅಕ್ಟೋಬರ್ 13 ರಿಂದ 16 ರವರೆಗೆ ಬೇಡಿಕೆಗೆ ಅನುಗುಣವಾಗಿ ಟಿಕೆಟ್ ಒದಗಿಸುವಂತೆ ಟ್ರಾವೆಲ್ ಆಪರೇಟರ್‌ಗಳು ವಿಮಾನಯಾನ ಸಂಸ್ಥೆಗಳನ್ನು ಒತ್ತಾಯಿಸುತ್ತಿದ್ದಾರೆ.
ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಗುಜರಾತ್ ಅಧ್ಯಕ್ಷ ಅನುಜ್ ಪಾಠ ಹೆಚ್ಚುವರಿ ವಿಮಾನಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ. "ಅಭಿಮಾನಿಗಳು, ಬೆಂಬಲಿಗರು, ಪ್ರಾಯೋಜಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಪ್ರಪಂಚದಾದ್ಯಂತದ ಜನರು ಈ ಅತ್ಯಾಕರ್ಷಕ ಪಂದ್ಯಾಟಕ್ಕೆ ಬರುವ ಭರವಸೆ ಇದೆ," ಎಂದು ಉಲ್ಲೇಖಿಸಿದರು.


Click it and Unblock the Notifications