ಭಾರತದ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಡಿಸೆಂಬರ್ 3ರಿಂದ ಜಾರಿಗೊಂಡ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿದ್ದ ಇತರೆ ನೆಟ್‌ವರ್ಕ್ ಮೇಲಿನ ಕರೆ ದರಗಳನ್ನು ತೆಗೆದುಹಾಕುವ ಮೂಲಕ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವನ್ನು ಘೋಷಿಸಿದೆ.
ಡಿಸೆಂಬರ್ 3ರಂದು ವೊಡಾಫೋನ್ ಐಡಿಯಾ ಹಾಗೂ ಏರ್‌ಟೆಲ್ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿತ್ತು. ಹಿಂದೆ ಇದ್ದ ಪ್ರಿಪೇಯ್ಡ್ ಯೋಜನೆಗಳಿಗಿಂತ ಹೆಚ್ಚಿನ ದರ ವಿಧಿಸಿತ್ತು. 28 ದಿನಗಳ ಯೋಜನೆಯಲ್ಲಿ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳ ಉಚಿತ ಕರೆ, 84 ದಿನಗಳ ಯೋಜನೆಯಲ್ಲಿ 3000 ನಿಮಿಷಗಳು, 1 ವರ್ಷದ ಯೋಜನೆಯಲ್ಲಿ 12,000 ನಿಮಿಷಗಳ ಉಚಿತ ಕರೆ ಸೌಲಭ್ಯವಿತ್ತು. ಈ ಮಿತಿ ದಾಟಿದ ನಂತರ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗಿತ್ತು.

'ನಾವು ನಿಮ್ಮನ್ನು ಕೇಳಿದ್ದೇವೆ! ಮತ್ತು ನಾವು ಬದಲಾವಣೆ ಮಾಡುತ್ತಿದ್ದೇವೆ. ನಾಳೆಯಿಂದ ಎಲ್ಲಾ ಅನ್‌ಲಿಮಿಟೆಡ್ ಯೋಜನೆಗಳಲ್ಲಿ ಇತರೆ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳನ್ನು ಆನಂದಿಸಿ. ಯಾವುದೇ ಷರತ್ತುಗಳು ಅನ್ವಯಿಸುವುದಿಲ್ಲ' ಎಂದು ಭಾರತಿ ಏರ್‌ಟೆಲ್ ಟ್ವೀಟ್ ಮಾಡಿದೆ. ವೊಡಾಫೋನ್ ಐಡಿಯಾ ಕೂಡ ಟ್ವಿಟರ್‌ನಲ್ಲಿ ಇದೇ ರೀತಿಯ ಆಫರ್ ಘೋಷಿಸಿದೆ.
ಏರ್‌ಟೆಲ್, ವೊಡಾಫೋನ್ ಐಡಿಯಾ ಡಿಸೆಂಬರ್ 3ರಲ್ಲಿ ಹೊಸ ಪ್ರಿಪೇಯ್ಡ್ ಯೋಜನೆ ಘೋಷಿಸಿದ ಬಳಿಕ ಡಿಸೆಂಬರ್ 6ರಂದು ರಿಲಯನ್ಸ್ ಜಿಯೋ ಕಂಪನಿ ಆಲ್ ಇನ್ ಒನ್ ಪ್ರಿಪೇಯ್ಡ್ ಯೋಜನೆಗಳನ್ನ ಬಿಡುಗಡೆಗೊಳಿಸಿತು. ಗ್ರಾಹಕರಿಗೆ ಶೇಕಡಾ 300ರಷ್ಟು ಪ್ರಯೋಜನ ನೀಡಲಿವೆ ಎಂದು ತಿಳಿಸಿತ್ತು. ಇತರೆ ನೆಟ್‌ವರ್ಕ್‌ಗೆ ನಿಗದಿತ ಉಚಿತ ಕರೆಗಳು ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿತು. ಅಲ್ಲದೆ ಬೇರೆ ನೆಟ್‌ವರ್ಕ್‌ಗೆ ಹೋಲಿಸಿದರೆ 15 ರಿಂದ 25 ಪರ್ಸೆಂಟ್ ದರ ಕಡಿಮೆ ಇದೆ ಎಂದು ಹೇಳಿಕೊಂಡಿತ್ತು.
ಆದ್ರೀಗ ಏರ್‌ಟೆಲ್, ವೊಡಾಫೋನ್ ಐಡಿಯಾ ಅನ್‌ಲಿಮಿಟೆಡ್ ಯೋಜನೆಗಳಲ್ಲಿ ಅನ್‌ಲಿಮಿಟೆಡ್ ಕರೆ ಸೌಲಭ್ಯ ನೀಡಿರುವುದರಿಂದ ಜಿಯೊ ಕಂಪನಿ ಸ್ವಲ್ಪ ಮಟ್ಟಿಗೆ ತಲೆಕೆಡಿಸಿಕೊಂಡಿದೆ.


Click it and Unblock the Notifications