ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ(ಇಪಿಎಫ್‌ಒ) ಮುಂಬೈ ಪ್ರಾದೇಶಿಕ ಕಚೇರಿಯಲ್ಲಿ ಭಾರೀ ವಂಚನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಶಾಮೀಲು ಮೂಲಕ ಹಲವಾರು ಕೋಟಿ ರೂಪಾಯಿ ಇಪಿಎಫ್ ಉಳಿತಾಯವನ್ನು ಬರಿದು ಮಾಡಲಾಗಿದೆ.
ಕಳೆದ ಬುಧವಾರದ ವೇಳೆಗೆ ಇಪಿಎಫ್‌ನಿಂದ ಭಾಗಶಃ ಹಿಂಪಡೆಯುವಕೆ (Partial withdrawal) ಮೂಲಕ 37 ಕೋಟಿ ರೂಪಾಯಿಗಳನ್ನು ವಿತ್‌ಡ್ರಾ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಸಂಬಂಧ ಇಲ್ಲಿಯವರೆಗೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಮತ್ತು ಕಾಂಡಿವಾಲಿಯ ಪ್ರಾದೇಶಿಕ ಇಪಿಎಫ್ ಕಚೇರಿಯಲ್ಲಿ ವಹಿವಾಟು ದಾಖಲೆಗಳನ್ನು ಪರಿಶೀಲಿಸಲು ಇಪಿಎಫ್‌ಒನ ಆಡಿಟ್ ತಂಡವನ್ನು ಕಳುಹಿಸಲಾಗಿದೆ.
ಇಪಿಎಫ್ ಹಣವನ್ನು ಅಕ್ರಮವಾಗಿ ಕ್ಲೈಮ್ ಮಾಡಿ ವಿತ್‌ಡ್ರಾ ಮಾಡಿರುವುದರ ಜೊತೆಗೆ ಈ ವಿಷಯದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಲಾಗಿದೆ ಎಂದು ಇಪಿಎಫ್‌ಒ ದೃಢಪಡಿಸಿದೆ.
ದೀರ್ಘಕಾಲದಿಂದ ಹಣ ಕ್ರೆಡಿಟ್ ಆಗದೆ ಖಾತೆಗಳೇ ಟಾರ್ಗೆಟ್
ಈ ಕುರಿತು ತಿಳಿದಿರುವ ಮೂಲಗಳ ಪ್ರಕಾರ ಇಪಿಎಫ್‌ಒನಲ್ಲಿ ತುಂಬಾ ಸಮಯದಲ್ಲಿ ಕ್ಲೈಮ್ ಮಾಡದೆ ಉಳಿದಿರುವ ಖಾತೆಗಳ ವಿರುದ್ಧ ನಕಲಿ ಕ್ಲೈಮ್ ವಿನಂತಿಗಳನ್ನು ರೂಪಿಸುವುದು ಸೇರಿದೆ. ಯಾವ ಖಾತೆಗೆ ದೀರ್ಘಕಾಲದಿಂದ ಹಣ ಕ್ರೆಡಿಟ್ ಆಗುವುದಿಲ್ಲ ಅಂತಹ ಖಾತೆಗಳನ್ನು ಟಾರ್ಗೆಟ್ ಮಾಡಿ, ನಕಲಿ ಕ್ಲೈಮ್ ಮೂಲಕ ಹಣ ವಿತ್‌ಡ್ರಾ ಮಾಡಲಾಗಿದೆ.
ದೀರ್ಘಕಾಲದಿಂದ ಕ್ರೆಡಿಟ್ ಆಗದ ಖಾತೆ ಎಂದರೆ ಉದಾಹರಣೆಗೆ ಉದ್ಯೋಗಿಯೊಬ್ಬ ವಿದೇಶಕ್ಕೆ ತೆರಳಿರುವುದು ಅಥವಾ ಆತ ಸಾವನ್ನಪ್ಪಿರಬಹುದು ಅಥವಾ ಇಪಿಎಫ್ ಖಾತೆಗಳನ್ನು ಕ್ರೂಡೀಕರಿಸದೆ ಉದ್ಯೋಗಗಳನ್ನು ಬದಲಾಯಿಸಿರುವ ಕಾರಣದಿಂದ ಖಾತೆಯಲ್ಲಿ ಹಣ ಹಾಗೆಯೇ ಉಳಿದಿರಬಹುದು.
ಖಾತೆಯಲ್ಲಿರುವ ಶೇಕಡಾ 30ರಷ್ಟು ಹಣ ವಿತ್‌ಡ್ರಾ
"ಈ ರೀತಿಯ ವಂಚನೆಗೊಳಗಾಗಿರುವ ಖಾತೆಗಳಲ್ಲಿನ ಸುಮಾರು ಶೇ. 25 ರಿಂದ 30ರಷ್ಟು ಬ್ಯಾಲೆನ್ಸ್ ಹಣವನ್ನು ಹಿಂಪಡೆಯಲಾಗಿದೆ. ಇದನ್ನು NEFT ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ವರ್ಗಾಯಿಸಲಾಗಿದೆ. ಈ ವಿತ್‌ಡ್ರಾ ಪ್ರಕ್ರಿಯೆಯನ್ನು ಸಾಮಾಜಿಕ ಭದ್ರತಾ ಸಹಾಯಕರು ಸೇರಿದಂತೆ ಕಿರಿಯ ಮತ್ತು ಕ್ಲೆರಿಕಲ್ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಾರೆ, "ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿ ಹೇಳಿದ್ದಾರೆ.
ಈ ಹಗರಣ ಬಯಲಿಗೆ ಬಂದ ನಂತರ ಮುಂಬೈ ಪ್ರದೇಶದ ಇಪಿಎಫ್ ಕಚೇರಿಗಳು ವಿತ್‌ಡ್ರಾ ಪ್ರಕ್ರಿಯೆಗಳನ್ನು ಬಿಗಿಗೊಳಿಸಿವೆ. ಜೊತೆಗೆ ಈ ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿ ಕ್ಲೈಮ್‌ಗಳ ಕುರಿತಾಗಿ ಹೊಸ ದುರುಪಯೋಗ ಆಗದಂತೆ ತಪ್ಪಿಸಲು ಸಲಹೆಗಳನ್ನು ನೀಡಲಾಗಿದೆ.
ಇಪಿಎಫ್ ಸದಸ್ಯರ ಹಣ ಸುರಕ್ಷಿತವಾಗಿದೆ
ಈ ವಿಷಯದ ಕುರಿತು ದಿ ಹಿಂದೂ ಪತ್ರಿಕೆಯ ವಿವರವಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಪಿಎಫ್ ಆಯುಕ್ತ ಸುನಿಲ್ ಬಾರ್ಥ್ವಾಲ್ '' ಕಚೇರಿಯ ಆಂತರಿಕ ತನಿಖೆಯನ್ನು ಒಪ್ಪಿಕೊಂಡಿದ್ದು, 'ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ' ಬಾಕಿ ಹಣವನ್ನು ಹಿಂಪಡೆಯಲಾಗಿದೆ. ಆದರೆ ಯಾವುದೇ ಸದಸ್ಯರ ಖಾತೆಯಲ್ಲಿ ಇಪಿಎಫ್ ಬ್ಯಾಲೆನ್ಸ್ ಅನ್ನು ವಂಚನೆಯಿಂದ ಹಿಂಪಡೆಯಲಾಗಿಲ್ಲ' ಎಂದು ಒತ್ತಿ ಹೇಳಿದರು. ಹೀಗಾಗಿ ಇಪಿಎಫ್ ಸದಸ್ಯರ ಬ್ಯಾಲೆನ್ಸ್ ಸುರಕ್ಷಿತವಾಗಿದೆ.
ಆದಾಗ್ಯೂ ಆಂತರಿಕ ವಿಚಾರಣೆ ಬಳಿಕ ಕೆಲವು ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿರುವುದನ್ನು ಹಾಗೂ ಯಾವುದೇ ಇಪಿಎಫ್ ಸದಸ್ಯರಿಗೆ ಸಂಬಂಧಿಸದ ಹಣವನ್ನು ಅಕ್ರಮವಾಗಿ ಕ್ಲೈಮ್ ಮಾಡುವ ಮೂಲಕ ವಿತ್‌ಡ್ರಾ ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಎಚ್ಚರಿಕೆ
ಇಂತಹ ವಂಚನೆಗಳು ಮರುಕಳಿಸುವುದನ್ನು ತಡೆಯಲು, ಕ್ಲೇಮ್ ಇತ್ಯರ್ಥ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಯಾವುದೇ ಸಿಬ್ಬಂದಿಗಳು ಈ ರೀತಿಯಾಗಿ ಅಕ್ರಮ ಪಾತ್ರಗಳನ್ನು ಹೊಂದಿರಬಾರದು ಮತ್ತು ಯಾವುದೇ ಸಿಬ್ಬಂದಿ ಇತರೆ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.


Click it and Unblock the Notifications