ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ಸಂಶೋಧನಾ ವರದಿಯು ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಆರೋಪಗಳನ್ನು ಮಾಡಿದೆ. ಈ ಬಗ್ಗೆ ಸೆಬಿ ತನಿಖೆ ನಡೆಯುತ್ತಿರುವಾಗಲೇ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಗೌತಮ್ ಅದಾನಿ ಕುಟುಂಬವು "ಅಪಾರದರ್ಶಕ" (opaque) ಮಾರಿಷಸ್ ಫಂಡ್‌ಗಳ ಮೂಲಕ ತನ್ನದೇ ಆದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಆರೋಪವನ್ನು ಹೊತ್ತಿದೆ.
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್‌ಪಿ) ಅದಾನಿ ಗ್ರೂಪ್ ವಿರುದ್ಧ ಮಾಡಿದ ಈ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಈ ಆರೋಪವನ್ನು ಈ ಹಿಂದೆ ಹಿಂಡನ್‌ಬರ್ಗ್ ವರದಿಯಲ್ಲಿಯೇ ಮಾಡಲಾಗಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಗ್ರೂಪ್‌ನ ಸ್ಪಷ್ಟತೆಯ ಹೊರತಾಗಿಯೂ ಸಂಸ್ಥೆಯ ಷೇರುಗಳು ಆರಂಭಿಕ ವಹಿವಾಟಿನಲ್ಲಿಯೇ ಭಾರೀ ಕುಸಿತವನ್ನು ಕಂಡಿದೆ. ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ.

ಅದಾನಿ ಸ್ಟಾಕ್ ಹೇಗಿದೆ?
ಆಗಸ್ಟ್ 31 ರಂದು ಈ ಸಮಯಕ್ಕೆ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಶೇಕಡ 2.61 ರಷ್ಟು ಕುಸಿತ ಕಂಡಿದೆ, ಅದಾನಿ ಪೋರ್ಟ್ಸ್ ಶೇಕಡ 2.90 ನಷ್ಟು ಇಳಿಕೆಯಾಗಿದೆ. ಅದಾನಿ ಟೋಟಲ್ ಗ್ಯಾಸ್ ಸುಮಾರು ಶೇಕಡ 2.09 ರಷ್ಟು ಕುಗ್ಗಿದೆ. ಆದರೆ ಈ ನಡುವೆ ಅದಾನಿ ಗ್ರೀನ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಕ್ರಮವಾಗಿ ಶೇಕಡ 3.19 ಮತ್ತು ಶೇಕಡ 1.85 ರಷ್ಟು ಇಳಿಕೆಯನ್ನು ಕಂಡಿದೆ.
ಈ ನಡುವೆ ಅದಾನಿ ವಿಲ್ಮಾರ್ ಷೇರುಗಳು ಶೇಕಡ 1.90 ನಷ್ಟು ಕುಸಿದಿದೆ. ಅದಾನಿ ಗ್ರೂಪ್‌ನ ಸಿಮೆಂಟ್ ಸ್ಟಾಕ್ ಅಂಬುಜಾ ಸಿಮೆಂಟ್ಸ್ ಸಹ ಶೇಕಡ 2.65 ನಷ್ಟು ಇಳಿಕೆಯಾಗಿದೆ. ಈ ನಡುವೆ ಅದಾನಿ ಸಂಸ್ಥೆಯ ಇನ್ನೊಂದು ಸಿಮೆಂಟ್ ಸ್ಟಾಕ್ ಆದ ಎಸಿಸಿ ಶೇಕಡ 1.53 ರಷ್ಟು ಕುಸಿತಗೊಂಡಿದೆ. ಸಂಸ್ಥೆಯ ಮಾಧ್ಯಮ ಸ್ಟಾಕ್ ಆದ ಎನ್‌ಡಿಟಿವಿ ಶೇಕಡ 1.64ರಷ್ಟು ಇಳಿದಿದೆ. ಅದಾನಿ ಪವರ್ ಶೇಕಡ 2.83 ರಷ್ಟು ನಷ್ಟ ಕಂಡಿದೆ.
ಈ ಆರೋಪಗಳನ್ನು ನಿರಾಕರಿಸಿದ ಅದಾನಿ ಗ್ರೂಪ್
ಅದಾನಿ ಸಮೂಹವು ಈ ಒಸಿಸಿಆರ್‌ಪಿ ಆರೋಪವನ್ನು ನಿರಾಕರಿಸಿದೆ. ಭಾರತದ ಸ್ಟಾಕ್ ಮಾರುಕಟ್ಟೆಯ ಆರಂಭಿಕ ಗಂಟೆಯ ಮುಂಚೆಯೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಹಿಂಡನ್‌ಬರ್ಗ್ ಮಾಡಿದ್ದ ಆರೋಪಗಳನ್ನು ಮತ್ತೆ ಕೆದಕುವ ನಿಟ್ಟಿನಲ್ಲಿ ಸೊರೊಸ್-ಫಂಡ್ ಹಿತಾಸಕ್ತಿಗಳು ಮಾಡಿರುವ ಸಂಘಟಿತ ಸಂಚು ಇದಾಗಿದೆ ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.
"ಈ ಆರೋಪಗಳು ಒಂದು ದಶಕದ ಹಿಂದೆ ರೆವಿನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ (ಡಿಆರ್‌ಐ) ಓವರ್ ಇನ್‌ವಾಯ್ಸ್, ವಿದೇಶಕ್ಕೆ ಹಣ ವರ್ಗಾವಣೆ, ಸಂಬಂಧಿತ ಪಕ್ಷದ ವಹಿವಾಟುಗಳು ಮತ್ತು ಎಫ್‌ಪಿಐಗಳ ಮೂಲಕ ಹೂಡಿಕೆಯ ಆರೋಪಗಳನ್ನು ತನಿಖೆ ಮಾಡಿ ಮುಚ್ಚಿದ ಪ್ರಕರಣವನ್ನು ಆಧರಿಸಿದೆ," ಎಂದು ಹೇಳಿದೆ.
"ಪ್ರಾಧಿಕಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಯು ಯಾವುದೇ ಹೆಚ್ಚಿನ ಸಾಕ್ಷಿ ಹೊಂದಿಲ್ಲ, ಕಾನೂನಿಗೆ ಅನುಸಾರವಾಗಿ ವ್ಯವಹಾರ ನಡೆದಿದೆ ಎಂದು ದೃಢಪಡಿಸಿದೆ. ಮಾರ್ಚ್ 2023 ರಲ್ಲಿ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದಾಗ ಈ ವಿಷಯವು ಅಂತಿಮ ಹಂತವನ್ನು ತಲುಪಿದೆ. ಈ ಹಣ ವರ್ಗಾವಣೆಯ ಆರೋಪಗಳಿಗೆ ಯಾವುದೇ ಆಧಾರವಿಲ್ಲ" ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.
ನಮ್ಮ ಷೇರು ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಲಾಭವನ್ನು ಗಳಿಸುವ ನಿಟ್ಟಿನಲ್ಲಿ ಈ ರೀತಿ ಆರೋಪಗಳನ್ನು ಮಾಡಲಾಗುತ್ತಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ಮತ್ತು ಸೆಬಿ ಈ ವಿಷಯಗಳನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ, ನಡೆಯುತ್ತಿರುವ ನಿಯಂತ್ರಣ ಪ್ರಕ್ರಿಯೆಯನ್ನು ಗೌರವಿಸುವುದು ಅತ್ಯಗತ್ಯ. ಕಾನೂನಿನ ಮೇಲೆ ನಮಗೆ ಸಂಪೂರ್ಣವಾದ ನಂಬಿಕೆಯಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.


Click it and Unblock the Notifications