ನವದೆಹಲಿ, ಜೂನ್ 25: ದೇಶದಲ್ಲಿ ಕೊರೊನಾ ಹಾವಳಿ ನಿಲ್ಲುತ್ತಿಲ್ಲವಾದ್ದರಿಂದ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್ 12 ರವರೆಗೆ ವಿಶೇಷ ರೈಲುಗಳನ್ನು ಹೊರತುಪಡಿಸಿ, ಎಲ್ಲ ಪ್ಯಾಸೆಂಜರ್, ಎಕ್ಸಪ್ರೆಸ್, ರೈಲುಗಳನ್ನು ಓಡಿಸದಿರಲು ನಿರ್ಧಾರ ಕೈಗೊಂಡಿದೆ.
ಜುಲೈ 1 ರಿಂದ ಆಗಸ್ಟ್ 12 ರವರೆಗೆ ಕಾಯ್ದಿರಿಸಿದ ಎಲ್ಲ ಟಿಕೆಟ್‌ಗಳು ರದ್ದಾಗುತ್ತವೆ. ರದ್ದಾದ ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ಪೂರ್ತಿಯಾಗಿ ಪಾವತಿಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಗುರುವಾರ ತಿಳಿಸಿದೆ.
ಸದ್ಯ ಕಾರ್ಮಿಕರನ್ನು ಕಳುಹಿಸಲು ಶ್ರಮಿಕ್ ರೈಲುಗಳು ಹಾಗೂ ಎಸಿ ರೈಲುಗಳನ್ನು ಹೊರತುಪಡಿಸಿ ಕೆಲವೇ ಕೆಲವು ರೈಲುಗಳು ಸಂಚಾರ ನಡೆಸುತ್ತಿದ್ದು, ಜುಲೈ 1 ರಿಂದ ಎಲ್ಲ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಮಂಡಳಿ ಈ ಮೊದಲು ಹೇಳಿತ್ತು. ಆದರೆ, ಕೊರೊನಾವೈರಸ್ ಹಾವಳಿ ನಿಲ್ಲುತ್ತಿಲ್ಲವಾದ್ದರಿಂದ ಮುಂಜಾಗ್ರತೆ ಕ್ರಮವಾಗಿ ರೈಲ್ವೆ ಮಂಡಳಿ ಆಗಸ್ಟ್ 12 ರವರೆಗೆ ರೈಲುಗಳನ್ನು ಓಡಿಸದೇ ಇರಲು ತೀರ್ಮಾನಿಸಿದೆ.

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಇತ್ತೀಚಿನ ಅಂಕಿ ಸಂಖ್ಯೆಗಳ ಪ್ರಕಾರ 4.73 ಲಕ್ಷ ಜನರಿಗೆ ಮಾರಕ ಸೋಂಕು ತಗುಲಿದ್ದು ದೃಢಪಟ್ಟಿದೆ. 14,894 ಜನ ಮೃತಪಟ್ಟಿದ್ದಾರೆ. 2.72 ಲಕ್ಷ ಜನ ಚೇತರಿಸಿಕೊಂಡಿದ್ದಾರೆ.


Click it and Unblock the Notifications