ಬೆಂಗಳೂರು, ಜೂನ್ 6: ಕನಸಿನ ಮನೆ ಒಂದನ್ನು ನಿರ್ಮಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಹಾಗಿದ್ದರೆ ಬ್ಯಾಂಕ್ ನಿಂದ ಸಿಗುವ ಗೃಹ ಸಾಲದ ಮೊತ್ತ ಎಷ್ಟಿರುತ್ತದೆ? ನೀವು ನೀಡಬೇಕಾದ ದಾಖಲೆಗಳು ಯಾವುವು? ಡೌನ್ ಪೇಮೆಂಟ್ ಲೆಕ್ಕಾಚಾರ ಏನು? ಸಾಲದ ಎಲ್ ಟಿ ವಿ ರೇಷ್ಯೋ ಅಂದರೆ ಏನು? ಇದೆಲ್ಲವು ಗೊತ್ತಿರಬೇಕಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಪ್ರಕಾರ, ಬ್ಯಾಂಕ್ ಗಳು ಆಸ್ತಿ ಮೌಲ್ಯದ ಇಂತಿಷ್ಟು ಮಿತಿಯವರೆಗೆ ಮಾತ್ರ ಸಾಲ ನೀಡುವುದಕ್ಕೆ ಸಾಧ್ಯವಾಗುತ್ತದೆ. ಸಾಲವಾಗಿ ಸಿಗುವ ಮೊತ್ತ ಈ ಲೋನ್ ಟು ವ್ಯಾಲ್ಯೂ ರೇಷ್ಯೋ ಆಧರಿಸಿ ಇರುತ್ತದೆ. ಮನೆಯ ಮೌಲ್ಯ ಆಧರಿಸಿ ಎಷ್ಟು ಸಾಲ ಸಿಗತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ.

ಆರ್ ಬಿ ಐ ನಿಯಮಗಳ ಪ್ರಕಾರ, ಮನೆಯ ಮೌಲ್ಯ 30 ಲಕ್ಷ ರೂಪಾಯಿವರೆಗೆ ಇದ್ದರೆ, ಆಗ ಬ್ಯಾಂಕ್ ಗಳು ಶೇಕಡ 90 ರಷ್ಟು ಸಾಲ ಕೊಡಬಹುದು. ಮನೆಯ ಮೌಲ್ಯ 30 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಯಷ್ಟಿದ್ದರೆ, ಆಗ ಈ ಲೋನ್ ಟು ವ್ಯಾಲ್ಯೂ ರೇಷ್ಯೋ ಶೇಕಡ 80 ರಷ್ಟರವರೆಗೆ ಇರಬಹುದು. ಅದೇ ಆಸ್ತಿಯ ಮೌಲ್ಯ ಏನಾದ್ರೂ 75 ಲಕ್ಷ ರೂಪಾಯಿ ಮೇಲ್ಪಟ್ಟಿದ್ದರೆ, ಬ್ಯಾಂಕ್ ಗಳು ಮನೆಯ ಮೌಲ್ಯದ ಶೇಕಡ 75 ರಷ್ಟರವರೆಗೆ ಸಾಲ ಕೊಡಬಹುದು.
ನೀವು 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡುತ್ತೀರಾ ಎಂದು ಭಾವಿಸೋಣ. ಆರ್ ಬಿ ಐ ನಿಯಮಗಳ ಪ್ರಕಾರ, ಬ್ಯಾಂಕ್ ಗಳು ಶೇಕಡ 80 ರಷ್ಟರವರೆಗೆ ಲೋನ್ ಟು ವ್ಯಾಲ್ಯೂ ರೇಷ್ಯೋ ಕೊಡಬಹುದು. ಆದರೆ ಕೆಲವೊಂದು ಸಮಯ ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಬಹುದು. ಒಂದು ವೇಳೆ ಬ್ಯಾಂಕ್ ನ ಎಲ್ ಟಿ ವಿ ಶೇಕಡ 70 ರಷ್ಟಿದ್ದರೆ, ನಿಮಗೆ 42 ಲಕ್ಷ ರೂಪಾಯಿ ಮಾತ್ರ ಸಾಲ ಸಿಗುತ್ತದೆ. ಉಳಿದ 18 ಲಕ್ಷ ರೂಪಾಯಿಯನ್ನ ನೀವೇ ಭರಿಸಬೇಕಾಗುತ್ತದೆ. ಇದನ್ನೇ ಡೌನ್ ಪೇಮೆಂಟ್ ಎಂದು ಕರೆಯುತ್ತೇವೆ.
ನೀವು ಸಾಲಕ್ಕೆ ಅರ್ಜಿ ಕೊಟ್ಟರೆ, ನಿಮಗೆ ಎಷ್ಟು ಹಣದ ಅಗತ್ಯ ಇದೆಯೋ ಅಷ್ಟೂ ಮೊತ್ತಕ್ಕೆ ಸಾಲ ಬ್ಯಾಂಕ್ ನಿಂದ ಸಿಗುತ್ತದೆ ಎನ್ನುವ ನಂಬಿಕೆ ಇಟ್ಟುಕೊಳ್ಳಬೇಡಿ. ಈ ಎಲ್ ಟಿ ವಿ ರೇಷ್ಯೋ ನಿರ್ಧರಿಸುವುದಕ್ಕೆ ಬ್ಯಾಂಕ್ ಗಳು ಅನೇಕ ಅಂಶಗಳನ್ನ ಪರಿಗಣಿಸುವುದಿದೆ. ಅಂದರೆ ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯ, ಅವರ ಆದಾಯ, ಪ್ರಸ್ತುತ ಇರೋ ಸಾಲ, ವಯಸ್ಸು, ಹಾಗೇ ಖರೀದಿ ಮಾಡುತ್ತಿರುವ ಆಸ್ತಿಯ ಸ್ಥಿತಿಗತಿಯನ್ನ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಖರೀದಿದಾರರ ವಾರ್ಷಿಕ ಆದಾಯ, ವಯಸ್ಸು, ಕ್ರೆಡಿಟ್ ಹಿಸ್ಟರಿ ಕೂಡ ಲೋನ್ ಅಪ್ರೂವಲ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೃಹ ಸಾಲಕ್ಕೆ ಮುಂದಾಗುವ ಮುನ್ನ ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣ ಇಟ್ಟುಕೊಂಡಿರಬೇಕು. ನಿಮ್ಮ ಕ್ರೆಡಿಟ್ ಹಿಸ್ಟರಿ ಚೆನ್ನಾಗಿದ್ದರೆ ಬ್ಯಾಂಕ್ ನೊಂದಿಗೆ ಬಡ್ಡಿ ದರದಲ್ಲಿ ಚೌಕಾಶಿ ಮಾಡಬಹುದು. ಗೃಹ ಸಾಲದ ಹೆಸರಿನಲ್ಲಿ ದೊಡ್ಡ ಮೊತ್ತದ ಇಎಂಐ ಮೈಮೇಲೆ ಎಳೆದುಕೊಳ್ಳುವುದು ಜಾಣತನವಲ್ಲ.


Click it and Unblock the Notifications