ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಈಗಾಗಲೇ ಉದ್ಯೋಗ ಕಡಿತವನ್ನು ಮಾಡಿದೆ. ಆದರೆ ಈ ಉದ್ಯೋಗ ಕಡಿತ ಪ್ರಕ್ರಿಯೆಯು ಇನ್ನೂ ಕೂಡಾ ಮುಗಿದಿಲ್ಲ. ಈಗ ಅಮೆಜಾನ್ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ. ಯುಎಸ್‌ನಲ್ಲಿ ರಚನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಅಮೆಜಾನ್ ತಾಜಾ ದಿನಸಿ ಸ್ಟೋರ್‌ಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ.
ಕಂಪನಿಯು "ಝೋನ್ ಲೀಡ್" ಸ್ಥಾನವನ್ನು ತೆಗೆದುಹಾಕುತ್ತಿದೆ. ಮೇಲ್ವಿಚಾರಣೆ ಮತ್ತು ಉದ್ಯೋಗಿ ತರಬೇತಿಯನ್ನು ಒಳಗೊಂಡಿರುವ ಪ್ರತ್ಯೇಕ ಜವಾಬ್ದಾರಿಯನ್ನು ಹೊಂದಿರುವ ಸ್ಟೋರ್‌ಗಳಲ್ಲಿರುವ ಹುದ್ದೆಯೇ "ಝೋನ್ ಲೀಡ್" ಆಗಿದೆ. ನಿರ್ದಿಷ್ಟವಾಗಿ ಎಷ್ಟು ಮಂದಿಯು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಎಂಬ ಬಗ್ಗೆ ಅಮೆಜಾನ್ ಬಹಿರಂಗಪಡಿಸಿಲ್ಲ. ಆದರೆ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

"ಯಾವುದೇ ರಿಟೇಲ್ ವ್ಯಾಪಾರಿಗಳಂತೆ ನಾವು ಸಮಯಕ್ಕೆ ಅನುಗುಣವಾಗಿ ನಮ್ಮ ಸ್ಟೋರ್‌ಗಳ ಅಗತ್ಯವನ್ನು ನಿರ್ಣಯ ಮಾಡುತ್ತೇವೆ. ನಮ್ಮ ಉದ್ಯೋಗಿಗಳ ದಕ್ಷತೆಯನ್ನು ಹೆಚ್ಚಿಸಲು, ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡಲು ಸಾಧ್ಯವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಅಮೆಜಾನ್ ವಕ್ತಾರ ಜೆಸ್ಸಿಕಾ ಮಾರ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಮ್ಮ ಗ್ರಾಹಕರು ಮತ್ತು ತಂಡಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ನಮ್ಮ ಸ್ಟೋರ್ ಸಿಬ್ಬಂದಿ ಮತ್ತು ಮತ್ತು ಕಾರ್ಯಾಚರಣೆಯ ಮಾದರಿಯನ್ನು ಬದಲಾವಣೆ ಮಾಡಲು ನಾವು ನಿರ್ಧಾರ ಮಾಡಿದ್ದೇವೆ," ಎಂದು ಅಮೆಜಾನ್ ವಕ್ತಾರ ಜೆಸ್ಸಿಕಾ ಮಾರ್ಟಿನ್ ಹೇಳಿದ್ದಾರೆ. ಈ ಉದ್ಯೋಗ ಕಡಿತವು ನೂರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
ಮಂಗಳವಾರದಿಂದಲೇ ಉದ್ಯೋಗದ ಕೊನೆಯ ದಿನವಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ. ಆದರೆ ಇತರೆ ಸಂಸ್ಥೆಗಳಲ್ಲಿ ನೀಡುವಂತೆ ಅಮೆಜಾನ್‌ನಲ್ಲಿ ಉದ್ಯೋಗಿಗಳಿಗೆ ಇತರೆ ಕಡೆ ಕೆಲಸಕ್ಕೆ ಸಹಾಯ ಮಾಡಲಾಗುತ್ತಿದೆ, ಹಾಗೆಯೇ ಪರಿಹಾರ ಧನವನ್ನು ನೀಡಲಾಗುತ್ತಿದೆ.
ಅಮೆಜಾನ್ ದೇಶಾದ್ಯಂತ 44 ತಾಜಾ ದಿನಸಿ ಸ್ಟೋರ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಅವುಗಳಲ್ಲಿ ಹೆಚ್ಚಿನವು ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ವರ್ಜಿನಿಯಾ ಮತ್ತು ವಾಷಿಂಗ್ಟನ್‌ನಲ್ಲಿದೆ. ಅಮೆಜಾನ್ ಗೋ ಬ್ರ್ಯಾಂಡ್ ಅಡಿಯಲ್ಲಿ ಯುಎಸ್‌ನಲ್ಲಿ 20 ಕ್ಕೂ ಹೆಚ್ಚು ಕ್ಯಾಷಿಯರ್ ಫ್ರೀ ಸ್ಟೋರ್‌ಗಳನ್ನು ನಿರ್ವಹಿಸುತ್ತಿದೆ. 2017 ರಲ್ಲಿ ಇದನ್ನು ಅಮೆಜಾನ್ 13.7 ಶತಕೋಟಿ ಡಾಲರ್‌ಗೆ ಖರೀದಿ ಮಾಡಿದೆ.
ಕಳೆದ ವರ್ಷ ಜಾಗತಿಕವಾಗಿ ಆರಂಭವಾದ ಉದ್ಯೋಗ ಕಡಿತ ಈಗಲೂ ಮುಂದುವರಿದಿದೆ. ಹಲವಾರು ಸಂಸ್ಥೆಗಳು ವೆಚ್ಚ ಕಡಿತ ಮಾಡುವ ನೆಪದಲ್ಲಿ ಉದ್ಯೋಗ ಕಡಿತ ಮಾಡುತ್ತಾ ಇದೆ. ಇನ್ನು ಕೆಲವು ಸಂಸ್ಥೆಗಳು ಉದ್ಯೋಗ ಕಡಿತ ಮಾಡುವಾಗ ತನ್ನ ಉದ್ಯೋಗಿಗಳಿಗೆ ಉತ್ತಮ ಆಫರ್ ಅನ್ನು ಕೂಡಾ ನೀಡಿದೆ. ಅಂತಹ ಸಂಸ್ಥೆಗಳಲ್ಲಿ ಅಮೆಜಾನ್ ಕೂಡಾ ಒಂದಾಗಿದೆ.
ಅಮೆಜಾನ್‌ನಲ್ಲಿ ಆರಂಭಿಕವಾಗಿ 18 ಸಾವಿರ ಉದ್ಯೋಗ ಕಡಿತ ಮಾಡಲಾಗಿದೆ. ಅದಾದ ಬಳಿಕ ಕಳೆದ ತಿಂಗಳು ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಒಟ್ಟಾಗಿ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಸಂಸ್ಥೆಯಲ್ಲಿ ಒಟ್ಟಾಗಿ ಸುಮಾರು 27 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಮತ್ತೆ ಸಾವಿರಾರು ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರವನ್ನು ಸಂಸ್ಥೆ ಮಾಡಿದೆ.


Click it and Unblock the Notifications