ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಭಾರತಕ್ಕೆ ಸ್ಟಾರ್‌ಲಿಂಕ್ ಸೆಟಲೈಟ್ ಬ್ರಾಡ್‌ಬ್ಯಾಂಡ್ ಅನ್ನು ತರುವ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಈ ಹೇಳಿಕೆಯ ಬೆನ್ನಲ್ಲೇ ಭಾರತದ ಬಿಲಿಯನೇರ್ ಮತ್ತು ವಿಶ್ವದ ಬಿಲಿಯನೇರ್ ನಡುವೆ ಸಮಯ ಉಂಟಾಗಿದೆ. ಎಲಾನ್ ಮಸ್ಕ್‌ನ ಈ ಪ್ರಸ್ತಾಪಕ್ಕೆ ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋವನ್ನು ನಡೆಸುತ್ತಿರುವ ಏಷ್ಯಾದ ಶ್ರೀಮಂತ ಮುಕೇಶ್ ಅಂಬಾನಿ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಯುಎಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಎಲಾನ್ ಮಸ್ಕ್ ಸಭೆ ನಡೆಸಿದ್ದಾರೆ. ಆ ಸಭೆಯ ಬಳಿಕ ಎಲಾನ್ ಮಸ್ಕ್ ಭಾರತದಲ್ಲಿ ಸ್ಟಾರ್‌ಲಿಂಕ್ ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಇದು ಇಂಟರ್‌ನೆಟ್ ಇಲ್ಲದ ಅಥವಾ ಹೆಚ್ಚಿನ ವೇಗದ ಸೇವೆಗಳ ಕೊರತೆಯಿರುವ ದೂರದ ಹಳ್ಳಿಗಳಲ್ಲಿ "ನಂಬಲಾಗದಷ್ಟು ಸಹಾಯಕವಾಗಬಹುದು" ಎಂದು ಕೂಡಾ ಹೇಳಿಕೊಂಡಿದ್ದಾರೆ.

ಸರ್ಕಾರದ ಉಪಗ್ರಹ ಬ್ರಾಡ್‌ಬ್ಯಾಂಡ್ ಸ್ಪೆಕ್ಟ್ರಮ್ ವಿತರಣೆಯ ಕುರಿತು ಸ್ಟಾರ್‌ಲಿಂಕ್, ಮುಕೇಶ್ ಅಂಬಾನಿಯ ರಿಲಯನ್ಸ್ (RELI.NS) ನೊಂದಿಗೆ ಹೇಗೆ ಭಿನ್ನಾಭಿಪ್ರಾಯ ಹೊಂದಿದೆ ಎಂಬುದರ ಕುರಿತು ಎಲಾನ್ ಮಸ್ಕ್ ಮಾತನಾಡಲಿಲ್ಲ. ಆದರೆ ವಿಶ್ವದ ಇಬ್ಬರು ಶ್ರೀಮಂತ ವ್ಯಕ್ತಿಗಳ ನಡುವಿನ ಯುದ್ಧಕ್ಕೆ ವೇದಿಕೆ ಮಾತ್ರ ಸಜ್ಜಾಗುತ್ತಿದೆ. ಸ್ಟಾರ್‌ಲಿಂಕ್ ಹಾಗೂ ರಿಲಯನ್ಸ್ ಬಗ್ಗೆ, ಬಿಲಿಯನೇರ್‌ಗಳ ಸಮರದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಸ್ಪೆಕ್ಟ್ರಮ್ ಹರಾಜು ವಿಚಾರದಲ್ಲಿ ವಾದ-ವಿವಾದ
ಸ್ಪೆಕ್ಟ್ರಮ್ ಅನ್ನು ಹರಾಜು ಹಾಕದಂತೆ ಸ್ಟಾರ್‌ಲಿಂಕ್ ಭಾರತಕ್ಕೆ ಲಾಬಿ ಮಾಡುತ್ತಿದೆ. ಬದಲಾಗಿ ಪರವಾನಗಿಯನ್ನು ನೀಡಬೇಕು ಎಂದು ಹೇಳುತ್ತಿದೆ. ಇದು ಕಂಪನಿಗಳು ಹಂಚಿಕೊಳ್ಳಬೇಕಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಹರಾಜು ನಿರ್ಬಂಧಗಳಿಗೆ ಎಡೆ ಮಾಡಿಕೊಡುತ್ತದೆ. ಇದರಿಂದಾಗಿ ವೆಚ್ಚವು ಅಧಿಕವಾಗುತ್ತದೆ ಎಂದು ಕೂಡಾ ಸ್ಟಾರ್‌ಲಿಂಕ್ ಹೇಳಿಕೊಳ್ಳುತ್ತಿದೆ. ಈ ಬಗ್ಗೆ ಕಂಪನಿ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಭಾರತ ಸರ್ಕಾರ ಈ ಪತ್ರವನ್ನು ಬಹಿರಂಗಗೊಳಿಸಿದೆ.
ಆದರೆ ರಿಲಯನ್ಸ್ ಸಂಸ್ಥೆಯು ಸ್ಟಾರ್‌ಲಿಂಕ್‌ನ ಈ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದೆ. ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಬೇಕು ಎಂದು ರಿಲಯನ್ಸ್ ಸಂಸ್ಥೆ ಹೇಳುತ್ತದೆ. ವಿದೇಶಿ ಉಪಗ್ರಹ ಸೇವಾ ಪೂರೈಕೆದಾರರು ಭಾರತದಲ್ಲಿ ಧ್ವನಿ ಮತ್ತು ಡೇಟಾ ಸೇವೆಗಳನ್ನು ನೀಡಬಹುದು. ಸಾಂಪ್ರದಾಯಿಕ ಟೆಲಿಕಾಂ ಪ್ಲೇಯರ್‌ಗಳೊಂದಿಗೆ ಸ್ಪರ್ಧಿಸಬಹುದು. ಇದಕ್ಕಾಗಿ ಹರಾಜು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಸ್ಟಾರ್‌ಲಿಂಕ್ ಅನ್ನು ಪ್ರಾರಂಭಿಸಲು 2021ರಿಂದ ಎಲಾನ್ ಮಸ್ಕ್ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈಗ ಟೆಸ್ಲಾವನ್ನು ಭಾರತದ ಮಾರುಕಟ್ಟೆಗೆ ತರುವ ಮಾತುಕತೆಯನ್ನು ಕೂಡಾ ಎಲಾನ್ ಮಸ್ಕ್ ನಡೆಸುತ್ತಿದ್ದಾರೆ. ಈ ನಡುವೆ ಭಾರತದಲ್ಲಿ ತನ್ನ ಕಬಂಧ ಬಾಹುವನ್ನು ಎಲ್ಲ ವಲಯಕ್ಕೆ ಚಾಚುತ್ತಿರುವ ಅಂಬಾನಿಗೆ ವಿದೇಶಿ ಬ್ರಾಡ್‌ಬ್ಯಾಂಡ್‌ನ ಸ್ಪರ್ಧೆಯು ಮತ್ತೊಂದು ಶಾಕ್ ಆಗಿದೆ.
ರಿಲಯನ್ಸ್ ಜಿಯೋ ಈಗಾಗಲೇ 439 ಮಿಲಿಯನ್ ಟೆಲಿಕಾಂ ಬಳಕೆದಾರರನ್ನು ಹೊಂದಿದೆ. ಮಾರುಕಟ್ಟೆಯಲ್ಲೇ ರಿಲಯನ್ಸ್ ಜಿಯೋ ಅತೀ ಪ್ರಮುಖ ಸ್ಥಾನ ಹೊಂದಿದೆ. 8 ಮಿಲಿಯನ್ ವೈರ್ಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳು, ಶೇಕಡ 25ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೆ ಈಗ ವಿದೇಶಿ ಸಂಸ್ಥೆಯ ಎಂಟ್ರಿಯು ಅಂಬಾನಿಗೆ ತಲೆ ನೋವಾಗಬಹುದು ಎಂಬ ಅಭಿಪ್ರಾಯವಿದೆ. ಈ ನಡುವೆ ಅಂಬಾನಿ ಸ್ಟಾರ್‌ಲಿಂಕ್ ಭಾರತಕ್ಕೆ ತರುವ ಮಸ್ಕ್ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹರಾಜಿನ ಬಗ್ಗೆ ಸ್ಟಾರ್‌ಲಿಂಕ್‌ನ ಅಭಿಪ್ರಾಯವನ್ನು ಅಮೆಜಾನ್‌ನ ಸಾಟೆಲೈಂಟ್ ಇಂಟರ್‌ನೆಟ್, ಪ್ರಾಜೆಕ್ಟ್ ಕೈಪರ್ ಮತ್ತು ಬ್ರಿಟಿಷ್ ಸರ್ಕಾರದ ಬೆಂಬಲಿತ ಒನ್‌ವೆಬ್ ಕೂಡಾ ಹೊಂದಿದೆ ಎಂಬ ಮಾಹಿತಿಯಿದೆ. ಆದರೆ ಅಮೆಜಾನ್ ಇದನ್ನು ನಿರಾಕರಿಸಿದೆ. ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಒನ್‌ವೆಬ್, ಸ್ಟಾರ್‌ಲಿಂಕ್ ಪೋಷಕ ಸಂಸ್ಥೆ ಸ್ಪೇಸ್‌ಎಕ್ಸ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications