ಫೇಸ್‌ಬುಕ್ ಮಾಲೀಕ ಸಂಸ್ಥೆಗೆ ಅಮೆರಿಕದ ಕೋರ್ಟ್‌ನಿಂದ ಬಿತ್ತು ಭಾರೀ ದಂಡ
ವಾಷಿಂಗ್ಟನ್, ಅ. 27: ಅಮೆರಿಕದ ಪ್ರಚಾರ ದೇಣಿಗೆ ಸಂಬಂಧಿಸಿದ ಕಾನೂನಿನ ನಿಯಮಗಳನ್ನು ಮುರಿದ ಆರೋಪದ ಮೇಲೆ ಫೇಸ್‌ಬುಕ್ ಮಾಲೀಕ ಸಂಸ್ಥೆ ಮೆಟಾಗೆ ಇಲ್ಲಿನ ನ್ಯಾಯಾಲಯವೊಂದು 24.7 ಮಿಲಿಯನ್ ಡಾಲರ್ (ಸುಮಾರು 200 ಕೋಟಿ ರೂಪಾಯಿ) ದಂಡ ವಿಧಿಸಿದೆ. ಭಾರತದಲ್ಲಿ ಸ್ಪರ್ಧಾ ಆಯೋಗವು ಗೂಗಲ್‌ಗೆ ಹಾಕಿರುವ ಸಾವಿರಾರು ಕೋಟಿ ರೂ ದಂಡಕ್ಕೆ ಹೋಲಿಸಿದರೆ ಇದು ಅಲ್ಪವಾದರೂ ಅಮೆರಿಕದಲ್ಲಿ ಪ್ರಚಾರ ದೇಣಿಗೆ ನಿಯಮ ಉಲ್ಲಂಘನೆಯ ಪ್ರಕರಣವೊಂದಕ್ಕೆ ಬಿದ್ದಿರುವ ಅತಿ ದೊಡ್ಡ ಮೊತ್ತದ ದಂಡವೆನಿಸಿದೆ.
ವಾಷಿಂಗ್ಟನ್ ರಾಜ್ಯದ ಕಿಂಗ್ ಕೌಂಟಿಯ ಸುಪೀರಿಯರ್ ಕೋರ್ಟ್‌ನ ನ್ಯಾಯಾಧೀಶ ಡೌಗ್ಲಾಸ್ ನಾರ್ತ್ ನಿನ್ನೆ ಬುಧವಾರ ಮೆಟಾಗೆ ದಂಡ ವಿಧಿಸುವ ತೀರ್ಪಿತ್ತರು. 1972ರ ವಾಷಿಂಗ್ಟನ್ ರಾಜ್ಯದ ಫೇರ್ ಕೆಂಪೈನ್ ಪ್ರಾಕ್ಟಿಸಸ್ ಆ್ಯಕ್ಟ್ ಅಡಿಯಲ್ಲಿ 800ಕ್ಕೂ ಹೆಚ್ಚು ಉಲ್ಲಂಘನೆಗಳಾಗಿರುವುದು ಸಾಬೀತಾಗಿದೆ. ಈ ಅಪರಾಧಕ್ಕೆ ನಿಗದಿಯಾಗಿರುವ ಗರಿಷ್ಠ ಮಟ್ಟದ ದಂಡ ವಿಧಿಸಲಾಗಿದೆ.
ಮೆಟಾಗೆ ಗರಿಷ್ಠ ದಂಡ ವಿಧಿಸಲು ಕಾರಣ ಇದೆ. 2018ರಲ್ಲಿ ಇದೇ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಫೇಸ್‌ಬುಕ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು. ಈಗ ಮತ್ತೆ ಅದೇ ಅಪರಾಧವನ್ನು ಕಂಪನಿ ಎಸಗಿರುವುದರಿಂದ ಗರಿಷ್ಠ ಮಟ್ಟದ ಶಿಕ್ಷೆ ನೀಡಲು ಕೋರ್ಟ್ ನಿರ್ಧರಿಸಿತು.

ಏನಿದು ಪ್ರಕರಣ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್‌ಬುಕ್‌ನಲ್ಲಿ ಬಹಳಷ್ಟು ರಾಜಕೀಯ ಜಾಹೀರಾತುಗಳು ಪ್ರಕಟವಾಗಿದ್ದವು. ಆದರೆ, ಈ ಜಾಹೀರಾತುಗಳ ವಿವರವನ್ನು ಫೇಸ್‌ಬುಕ್ ಬಹಿರಂಗಪಡಿಸಿಲ್ಲದಿರುವುದು ಕಾನೂನು ಉಲ್ಲಂಘನೆ ಎನಿಸಿದೆ.
ಜಾಹೀರಾತು ಮಾರಾಟಗಾರರು ತಮ್ಮ ರಾಜಕೀಯ ಜಾಹೀರಾತುಗಳನ್ನು ಖರೀದಿಸುವ ವ್ಯಕ್ತಿ ಮತ್ತು ಸಂಸ್ಥೆಗಳ ಹೆಸರು ಮತ್ತು ವಿಳಾಸಗಳನ್ನು ಸಾರ್ವತ್ರಿಕಗೊಳಿಸಬೇಕು. ಇಂಥ ರಾಜಕೀಯ ಜಾಹೀರಾತುಗಳ ಟಾರ್ಗೆಟ್, ಆ ಜಾಹೀರಾತುಗಳಿಗೆ ಹೇಗೆ ಹಣ ಪಾವತಿ ಆಗಿದೆ, ಆ ಜಾಹೀರಾತುಗಳಿಗೆ ಎಷ್ಟು ವೀಕ್ಷಣೆ ಸಿಕ್ಕಿದೆ ಇತ್ಯಾದಿ ಎಲ್ಲಾ ವಿವರಗಳನ್ನೂ ಅಗತ್ಯ ಸಂದರ್ಭದಲ್ಲಿ ಬಹಿರಂಗಪಡಿಸಬೇಕು ಎಂದು 1972ರ ಫೇರ್ ಕೆಂಪೇನ್ ಪ್ರಾಕ್ಟಿಸಸ್ ಕಾಯ್ದೆಯ ನಿಯಮಗಳು ಹೇಳುತ್ತವೆ. ಸಾಂಪ್ರದಾಯಿಕ ಮಾಧ್ಯಮಗಳಿಗೂ ಇದೇ ಕಾನೂನು ಅನ್ವಯ ಆಗುತ್ತದೆ.
ಫೇಸ್‌ಬುಕ್‌ನಲ್ಲಿ ಚುನಾವಣೆಯ ವೇಳೆ ಬಹಳಷ್ಟು ಎಲೆಕ್ಷನ್ ಕೆಂಪೇನ್ ಆ್ಯಡ್‌ಗಳು ಪ್ರಕಟವಾಗಿದ್ದವು. ಈ ಜಾಹೀರಾತುಗಳ ಬಗ್ಗೆ ಫೇಸ್‌ಬುಕ್ ಸಂಗ್ರಹ ಇಟ್ಟುಕೊಳ್ಳುತ್ತದಾದರೂ ಕಾನೂನಿನ ಪ್ರಕಾರ ಈ ಜಾಹೀರಾತುಗಳ ವಿವರಗಳನ್ನು ಸಾರ್ವತ್ರಿಕಗೊಳಿಸಲು ಮೆಟಾ ಮೊದಲಿಂದಲೂ ನಿರಾಕರಿಸುತ್ತಾ ಬಂದಿದೆ. ಈ ನಿಯಮಗಳನ್ನು ಪಾಲಿಸುವುದು ಬಹುತೇಕ ಅಸಾಧ್ಯ ಎಂದೇ ಮೆಟಾ ಹೇಳುತ್ತದೆ. ಕೋರ್ಟ್‌ನಲ್ಲೂ ಇದೇ ವಾದ ಮಾಡುತ್ತಾ ಬಂದಿದೆ.

ಅಟಾರ್ನಿ ಜನರಲ್ ತರಾಟೆ
ವಾಷಿಂಗ್ಟನ್‌ನ ಅಟಾರ್ನಿ ಜನರಲ್ ಬಾಬ್ ಫರ್ಗೂಸನ್ ಅವರು ಫೇಸ್‌ಬುಕ್ ಮತ್ತು ಮೆಟಾದ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ವಾಷಿಂಗ್ಟನ್ ರಾಜ್ಯದ ಚುನಾವಣಾ ಪಾರದರ್ಶಕತೆ ಕಾನೂನುಗಳನ್ನು ಅದು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ. ಆ ಕಾನೂನುಗಳನ್ನು ಅಸಂವಿಧಾನಿಕವೆಂದು ಘೋಷಿಸುವಂತೆ ಕೋರ್ಟ್‌ನಲ್ಲೇ ಫೇಸ್‌ಬುಕ್ ವಾದಿಸಿದ್ದು ಸೋಜಿಗ. ಎಲ್ಲಿ ಹೋಯಿತು ಕಾರ್ಪೊರೇಟ್ ಜವಾಬ್ದಾರಿ?" ಎಂದು ಬಾಬ್ ಫರ್ಗೂಸನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2018ರಲ್ಲಿ ಫೇಸ್‌ಬುಕ್ ವಿರುದ್ಧ ಬಾಬ್ ಫರ್ಗೂಸನ್ ಕಾನೂನು ಮೊಕದ್ದಮೆ ಹಾಕಿದ್ದರು. ಆಗ ಫೇಸ್ಬುಕ್‌ಗೆ 2.38 ಲಕ್ಷ ಡಾಲರ್ (ಸುಮಾರು 2 ಕೋಟಿ ರೂಪಾಯಿ) ದಂಡ ಹಾಕಲಾಗಿತ್ತು. ಪ್ರಚಾರ ಹಣ ಮತ್ತು ರಾಜಕೀಯ ಜಾಹೀರಾತಿನ ವಿಚಾರದಲ್ಲಿ ಪಾರದರ್ಶಕತೆ ತೋರಲು ಆಗ ಫೇಸ್‌ಬುಕ್ ಒಪ್ಪಿಕೊಂಡಿತ್ತು. ಆದರೂ ಕೂಡ ರಾಜಕೀಯ ಜಾಹೀರಾತುಗಳನ್ನು ಫೇಸ್‌ಬುಕ್ ಮಾರುವುದು ಮಾತ್ರ ನಿಲ್ಲಲಿಲ್ಲ.
ರಾಜಕೀಯ ಜಾಹೀರಾತುಗಳ ಮಾರಾಟವನ್ನೇ ಬೇಕಾದರೆ ನಿಲ್ಲಿಸುತ್ತೇವೆ. ಆದರೆ, ಕಾನೂನಿನ ಪ್ರಕಾರ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಮೆಟಾ ಸಂಸ್ಥೆ ಹಲವು ಬಾರಿ ಹೇಳಿಕೊಂಡಿದ್ದಿದೆ.

ಮೂರು ಪಟ್ಟು ಹೆಚ್ಚು ದಂಡ
ವಾಷಿಂಗ್ಟನ್‌ನ ಪಾರದರ್ಶಕತೆ ಕಾಯ್ದೆ ಪ್ರಕಾರ ಒಂದು ಕಾನೂನು ಉಲ್ಲಂಘನೆಗೆ 10 ಸಾವಿರ ಡಾಲರ್ ದಂಡ ಹಾಕಬಹುದು. ಉದ್ದೇಶಪೂರ್ವಕವಾಗಿ, ಅಂದರೆ ಅಕ್ರಮ ಎಂದು ಗೊತ್ತಿದ್ದರೂ ಬೇಕಂತಲೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದನಿಸಿದರೆ ಮೂರು ಪಟ್ಟು ಹೆಚ್ಚು ಮೊತ್ತದ ದಂಡ ವಿಧಿಸಬಹುದು.
ಈ ಪ್ರಕರಣದಲ್ಲಿ ಫೇಸ್ಬುಕ್‌ನಿಂದ 822 ನಿಯಮ ಉಲ್ಲಂಘನೆಗಳಾಗಿರುವುದು ಸಾಬೀತಾಗಿದೆ. ಪ್ರತಿಯೊಂದು ಉಲ್ಲಂಘನೆಗೂ 30 ಸಾವಿರ ಡಾಲರ್‌ನಂತೆ ನ್ಯಾಯಾಧೀಶರು ಒಟ್ಟು 24.7 ಮಿಲಿಯನ್ ಡಾಲರ್ ಮೊತ್ತದ ದಂಡವನ್ನು ಮೆಟಾಗೆ ಹೇರಿದ್ದಾರೆ.