ಒಬ್ಬೊಬ್ಬರ ಬಯಕೆ ಒಂದೊಂದು ರೀತಿಯದಾಗಿರುತ್ತದೆ. ಕೆಲವರದು ಬಲು ಅಗ್ಗ. ಮತ್ತೆ ಕೆಲವರದು ಪರಮ ದುಬಾರಿ. ಈಗ ಅಮೆರಿಕನ್ Rapper ಲಿಲ್ ಉಜಿ ವರ್ಟ್ ಉದಾಹರಣೆಯನ್ನೇ ಹೇಳುವುದಾದರೆ, ಆತನ ಹಣೆಯ ಮೇಲೊಂದು ಪಿಂಕ್ ಡೈಮಂಡ್ ಅಳವಡಿಸಿಕೊಂಡಿದ್ದು, ದೂರದಿಂದ ನೋಡುವವರಿಗೆ ಇದೇನು ಹೀಗೆ ಹೊಳೆಯುತ್ತಿದೆ ಅಂತಷ್ಟೇ ಅನಿಸುತ್ತದೆ. ಆದರೆ ಅದರ ಬೆಲೆ ಕೇಳಿದಾಗಲೇ ನಿಜವಾಗಲೂ ಗಾಬರಿ ಆಗೋದು.
ಎಂಟಿವಿ ವಿಡಿಯೋ ಮ್ಯೂಸಿಕ್ ಪ್ರಶಸ್ತಿ ವಿಜೇತ Rapper ಲಿಲ್ ಉಜಿ ವರ್ಟ್ ಈ ವಜ್ರಕ್ಕಾಗಿ 2.4 ಕೋಟಿ ಅಮೆರಿಕನ್ ಡಾಲರ್ ಪಾವತಿಸಿದ್ದಾರಂತೆ. ಭಾರತದ ರುಪಾಯಿ ಲೆಕ್ಕದಲ್ಲಿ 143 ಕೋಟಿಗೂ ಹೆಚ್ಚಾಗುತ್ತದೆ. 2017ನೇ ಇಸವಿಯಿಂದಲೂ ಹಣ ನೀಡುತ್ತಾ ಬಂದಿದ್ದಾರೆ ಉಜಿ.
ಅಂದ ಹಾಗೆ ಉಜಿ ನಿಜವಾದ ಹೆಸರು ಸೈಮರ್ ವುಡ್ಸ್. ಪಿಂಕ್ ವಜ್ರವನ್ನು ಹಣೆಯ ಮೇಲೆ ಧರಿಸಿದ ವಿಡಿಯೋವೊಂದನ್ನು ಆತ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, "ಸೌಂದರ್ಯದ ನೋವು" ಎಂಬ ಶೀರ್ಷಿಕೆ ನೀಡಿದ್ದಾರೆ. ಹಣೆಯ ಮೇಲೆ ವಜ್ರವನ್ನು ಹಾಕಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಮೇಲೆ ಆತನನ್ನು ಯಾವ್ಯಾವುದೋ ಮಾರ್ವೆಲ್ ಪಾತ್ರಗಳಿಗೆ ಹೋಲಿಕೆ ಮಾಡಿ, ಕಾಮೆಂಟ್ ಬರುತ್ತಿದೆ.

ನಾವು ಭಾರತೀಯರು. ಆದ್ದರಿಂದ ಮಹಾಭಾರತದ ಈ ಪಾತ್ರ ಹೆಚ್ಚು ಪರಿಚಿತ. ದ್ರೋಣಾಚಾರ್ಯರ ಮಗ ಅಶ್ವತ್ಥಾಮನ ಹಣೆಯ ಮೇಲೆ ಮಣಿಯೊಂದು ಇತ್ತಂತೆ. ಅದು ಆತನಿಗೆ ಅಪಾರ ಶಕ್ತಿ ನೀಡುತ್ತಿತ್ತಂತೆ. ಹಸಿವು, ನೀರಡಿಕೆ ಮತ್ತು ಆಯಾಸ ಆಗದಂತೆ ಅವನನ್ನು ಕಾಪಾಡುತ್ತಿತ್ತಂತೆ. ಆ ನಂತರ ಮಣಿಯನ್ನು ವಾಪಸ್ ಪಡೆದು, ಕೃಷ್ಣನು ಅಶ್ವತ್ಥಾಮನನ್ನು ಶಪಿಸಿದನಂತೆ.
ವೆಲ್ತಿ ಗೊರಿಲ್ಲಾ ವರದಿ ಪ್ರಕಾರ, ಲಿಲ್ ಉಜಿ ನಿವ್ವಳ ಆಸ್ತಿ ಮೌಲ್ಯ 1.6 ಕೋಟಿ ಅಮೆರಿಕನ್ ಡಾಲರ್. ಉಜಿಯ ಈ ಹೊಸ ಅವತಾರವನ್ನು ನೋಡಿ ಕೆಲವರು ಇಷ್ಟ ಪಟ್ಟಿದ್ದರೆ, ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ. ಇರಲಿ ಬಿಡಿ, ಲೋಕ ಭಿನ್ನ ರುಚಿಃ. ಒಬ್ಬೊಬ್ಬರಿಗೆ ಒಂದೊಂದು ಇಷ್ಟವಾಗುತ್ತದೆ.


Click it and Unblock the Notifications