ಅದಾನಿ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ವಂಚನೆಯಲ್ಲಿ ತೊಡಗಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ, ಷೇರು ಮಾರುಕಟ್ಟೆಯಲ್ಲಿ ಹಲವಾರು ಬೆಳವಣಿಗೆಗಳು ನಡೆದಿದೆ. ಅದಾನಿ ಗ್ರೂಪ್ ನಿರಂತರವಾಗಿ ನಷ್ಟವನ್ನು ಕಂಡಿದೆ. ಅದಾನಿ ಗ್ರೂಪ್‌ಗೆ ಸಾಲವನ್ನು ನೀಡಿರುವ ಬ್ಯಾಂಕ್‌ಗಳು, ಸಂಸ್ಥೆಗಳು ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದೆ.
ಅದಾದ ಬಳಿಕ ಸರ್ಕಾರ ಹಾಗೂ ಸಂಸ್ಥೆಗಳು ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿದೆ. ಈ ನಡುವೆ ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಚೇರ್‌ಮನ್ ಅದಾನಿ ಗ್ರೂಪ್‌ನ ಮುಖ್ಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಹಿಂಡನ್‌ಬರ್ಗ್ ವರದಿಯ ಬಳಿಕ ಉಂಟಾದ ಎಲ್ಲ ಬೆಳವಣಿಗೆಗಳ ಬಗ್ಗೆ ಸ್ಪಷ್ಟಣೆಯನ್ನು ಪಡೆಯುವ ನಿಟ್ಟಿನಲ್ಲಿ ಅದಾನಿ ಗ್ರೂಪ್‌ನ ಹಿರಿಯ ಅಧಿಕಾರಿಗಳನ್ನು ಎಲ್‌ಐಸಿ ಚೇರ್‌ಮನ್ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಹಿಂಡನ್‌ಬರ್ಗ್ ವರದಿಯಾಗಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದ, ವಂಚನೆ ಯೋಜನೆಯಲ್ಲಿ ಭಾಗಿಯಾದ ಆರೋಪವನ್ನು ಹಿಂಡನ್‌ಬರ್ಗ್ ಮಾಡಿದೆ. ಅದಾನಿ ಗ್ರೂಪ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸುವ ಬಗ್ಗೆ ಎಲ್‌ಐಸಿ ಚೇರ್‌ಮನ್ ಎಂ ಆರ್ ಕುಮಾರ್ ಖಚಿತಪಡಿಸಿದ್ದಾರೆ. ಈ ಎಲ್ಲ ಬಿಕ್ಕಟ್ಟನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಅದಾನಿ ಗ್ರೂಪ್‌ಗೆ ಪ್ರಶ್ನಿಸಲಾಗುತ್ತದೆ ಎಂದು ಕೂಡಾ ಹೇಳಿದ್ದಾರೆ.

ಎಲ್ಐಸಿ ಚೇರ್‌ಮನ್ ಎಂ ಆರ್ ಕುಮಾರ್ ಮಾಹಿತಿ
"ಈಗಾಗಲೇ ನಮ್ಮ ಹೂಡಿಕೆದಾರರ ತಂಡವು ಅದಾನಿ ಸಂಸ್ಥೆಯ ಸ್ಪಷ್ಟಣೆಯನ್ನು ಕೇಳಿದೆ. ನಮ್ಮ ಹಿರಿಯ ಅಧಿಕಾರಿಗಳ ತಂಡವು ಅದಾನಿ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಲಿದೆ. ನಾವು ಶೀರ್ಘ್ರವೇ ಅವರೊಂದಿಗೆ ಸಭೆ ನಡೆಸುತ್ತೇವೆ, ಈ ಬಗ್ಗೆ ವಿವರಣೆ ನೀಡಲು ಹೇಳುತ್ತೇವೆ. ಮಾರುಕಟ್ಟೆಯಲ್ಲಿ ಏನು ಬೆಳವಣಿಗೆ ಇದೆ, ಗ್ರೂಪ್‌ನ ಬೆಳವಣಿಗೆ ಏನಿದೆ ಎಂಬುವುದನ್ನು ನಾವು ತಿಳಿಯಲು ಬಯಸುತ್ತೇವೆ. ಅದಾನಿ ಗ್ರೂಪ್ ಈ ಬಿಕ್ಕಟ್ಟನ್ನು ಹೇಗೆ ನಿರ್ವಹಣೆ ಮಾಡುತ್ತದೆ ಎಂಬುವುದನ್ನು ನಾವು ಪ್ರಶ್ನಿಸಲಿದ್ದೇವೆ," ಎಂದು ತಿಳಿಸಿದ್ದಾರೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ವಿರುದ್ಧ ಯುಎಸ್ ಮೂಲದ ಹಿಂಡನ್‌ಬರ್ಗ್ ಆರೋಪವನ್ನು ಮಾಡಿದೆ. ಇದಾದ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ನಿರಂತರವಾಗಿ ಇಳಿಯುತ್ತಿದೆ. ಅದಾನಿ ಷೇರುಗಳಲ್ಲಿ ಎಲ್‌ಐಸಿ ಕೂಡಾ ಹೂಡಿಕೆ ಮಾಡಿದೆ. ಇದರಿಂದ ಎಲ್‌ಐಸಿ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ಹೂಡಿಕೆದಾರರು ಟೀಕೆ ಮಾಡಿದ್ದಾರೆ. ಸಂಸ್ಥೆಯು ಷೇರುಗಳ ಬೆಲೆಯ ಮೇಲೆ ಪ್ರಭಾವ ಬೀರುತ್ತಿದೆ, ಷೇರು ಮಾರುಕಟ್ಟೆಯಲ್ಲಿ ವಂಚನೆ ನಡೆಸುತ್ತಿದೆ.
ಎಲ್‌ಐಸಿ ದೇಶದ ಅತೀ ದೊಡ್ಡ ವಿಮಾ ಸಂಸ್ಥೆಗಳಲ್ಲಿ ಒಂದಾಗಿದೆ. ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಅತೀ ದೊಡ್ಡ ಷೇರುದಾರ ಸಂಸ್ಥೆ ಎಲ್‌ಐಸಿ ಆಗಿದೆ. ಜನವರಿ 27 ರ ಹೊತ್ತಿಗೆ 36,474.78 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದೆ. ಶೇಕಡಾವಾರು ಲೆಕ್ಕದಲ್ಲಿ ಒಟ್ಟು ಸಾರ್ವಜನಿಕ ಹಿಡುವಳಿಯ ಶೇಕಡಾ 4.23 ರಷ್ಟಿದೆ. ಜನವರಿ 27 ರ ಹೊತ್ತಿಗೆ, ಈ ಹೂಡಿಕೆಯು 56,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಎಲ್ಐಸಿ ಜನವರಿ 30 ರಂದು ಹೇಳಿದೆ. ಆದರೆ ಅಂದಿನಿಂದ ಈ ಷೇರುಗಳು ಮತ್ತಷ್ಟು ನಷ್ಟ ಕಂಡಿದೆ. ಒಟ್ಟಾರೆಯಾಗಿ ಸುಮಾರು 100 ಬಿಲಿಯನ್‌ಗೂ ಅಧಿಕ ಷೇರು ನಷ್ಟವಾಗಿದೆ.


Click it and Unblock the Notifications