ನಮ್ಮ ಮೊಟ್ರೋ ನಿಲ್ದಾಣಗಳಲ್ಲಿ 'ಅಮುಲ್' ಮಳಿಗೆ! ಸೇವ್ 'ನಂದಿನಿ' ಎಂದವರೇ ರಿವಸ್ ಗೇರ್. ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಹಾಗೂ ನಂದಿನಿ ಮಳಿಗೆಗಳ ವಿಚಾರವಾಗಿ ರಾಜಕೀಯ ಶುರುವಾಗಿದೆ. ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸುವುದಕ್ಕೆ ಬಿಎಂಆರ್‌ಸಿಎಲ್ ಹಾಗೂ ಅಮುಲ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂಬ ವರದಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ವಿಚಾರನ್ನು ತಿಳಿಯುತ್ತಿದ್ದಂತೆಯೇ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಮತ್ತೊಂದೆಡೆ 'ಅಮುಲ್' ಹಾಲನ್ನು ವಿರೋಧಿಸಿ 'ನಂದಿನಿ' ಹಾಲನ್ನು ಬೆಂಬಲಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು 'ಎರಡು ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ 'ಅಮುಲ್' ಅವಕಾಶ ನೀಡಲಾಗಿದೆ ಎಂದು ಹೇಳಿಕೆ ನೀಡಿ ಮತ್ತೆ ರಾಜಕೀಯ ವಿರೋಧಕ್ಕೆ ನಾಂದಿ ಹಾಡಿದ್ದಾರೆ.
ಎರಡು ವರ್ಷಗಳ ಹಿಂದೆ 'ಅಮೂಲ್' ವಿರುದ್ಧ ಪ್ರತಿಭಟಿಸಿ ಸ್ಥಳೀಯ 'ನಂದಿನಿ' ಬ್ರ್ಯಾಂಡ್ ಬೆಂಬಲಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಎರಡು ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ 'ಅಮೂಲ್' ಅವಕಾಶ ನೀಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್( ಬಿಎಂಆರ್‌ಸಿಎಲ್) ಜಾಗತಿಕ ಟೆಂಡರ್ ಕರೆದಿತ್ತು ಆಗ ಅಮುಲ್ ಏಕೈಕ ಅರ್ಜಿದಾರರಾಗಿತ್ತು. ನಾವು ಕೆಎಂಎಫ್ ತನ್ನ ಅರ್ಜಿಯನ್ನು ಬಿಎಂಆರ್‌ಸಿಎಲ್‌ಗೆ ಸಲ್ಲಿಸುವಂತೆ ನಾವು ಸೂಚನೆಯನ್ನು ಸಹ ಕೊಟ್ಟಿದ್ದೇವೆ. ಅಮುಲ್ ಈಗಾಗಲೇ ಎರಡು ಮೆಟ್ರೋ ನಿಲ್ದಾಣಗಳಲ್ಲಿ ತನ್ನ ಮಳಿಗೆಗಳನ್ನು ತರೆಯಲು ಅವಕಾಶವನ್ನು ನೀಡಲಾಗಿದೆ. ಉಳಿದ 8 ಮೆಟ್ರೋ ನಿಲ್ದಾಣಗಳಲ್ಲಿ ಕೆಎಂಎಫ್‌ಗೆ ನಂದಿನಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವಂತೆ ನಾವು ಬಿಎಂಆರ್‌ಸಿಎಲ್‌ಗೆ ತಿಳಿಸಿದ್ದೇವೆ ಎಂದು ಡಬಲ್ ಸ್ಟ್ಯಾಂಡರ್ಡ್ ತೆಗೆದುಕೊಂಡವರಂತೆ ಮಾತನಾಡಿದ್ದಾರೆ.
ಮೆಟ್ರೋಗಳಲ್ಲಿ 8 ನಂದಿನಿ ಮಳಿಗೆ ತೆರೆಯಲು ಸೂಚನೆ
ಬಿಎಂಆರ್ ಸಿಎಲ್ ಅವರು ಟೆಂಡರ್ ಕರೆದಿದ್ದು, ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದು, ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮೂಲ್ ಅವರು ಜಾಗತಿಕ ಟೆಂಡರ್ ನಲ್ಲಿ ಅರ್ಜಿ ಹಾಕಿ ಮಳಿಗೆ ತೆರೆದಿದ್ದಾರೆ. ತೆರೆಯಲಾಗಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ 8 ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ಧಾರೆ.
ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ 10 ಕಿಯೋಸ್ಕ್‌ಗಳನ್ನು ತೆರೆಯಲು ಅವಕಾಶ ನೀಡುವ ನಿರ್ಧಾರವು ಡೈರಿ ಮತ್ತು ಪಾನೀಯ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಅಲ್ಲಾಡಿಸಿದೆ ಮಾತ್ರವಲ್ಲದೆ ಕರ್ನಾಟಕದಲ್ಲಿ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.
ಜೂನ್ 16 ರಂದು, ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್), ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಅಮುಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಬಿಎಂಆರ್ ಸಿಎಲ್
ಘೋಷಿಸಿತು.
ಡಿ.ಕೆ ಶಿವಕುಮಾರ್ ಈ ಹಿಂದೆ ಹೇಳಿದ್ದೇನು ?
ಡಿ.ಕೆ ಶಿವಕುಮಾರ್ ನಂದನಿ ಹಾಲಿನ ಉತ್ಪನ್ನಗಳ ಅಸ್ಮಿತೆ ಬಗ್ಗೆ ಈ ಹಿಂದೆ ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ, ನಮ್ಮ ಸ್ವಾಭಿಮಾನ ಅಡವಿಡಲು ಸಿದ್ಧರಿಲ್ಲ ನಂದಿನಿ ಕನ್ನಡಿಗರ ನಾಡಿ ಮಿಡಿತ ಬಿಜೆಪಿಯ ಕೊನೆಗಾಲ ಸನ್ನಿಹಿತ #SaveNandini ಅಂತ ಡಿ.ಕೆ ಶಿವಕುಮಾರ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ವಿರೋಧ ಮಾಡಿದ್ದರು.
ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಶನ್‌ಗಳ ಪೈಕಿ 80% ಸ್ಟೇಶನ್‌ಗಳಲ್ಲಿ ನಂದಿನಿ ಹಾಲು ಉತ್ಪಾದನೆಯ ಪ್ರಾಡಕ್ಟ್‌ಗಳ ಕಿಯಾಸ್ಕ್‌ಗಳು ಮತ್ತು 20% ರಷ್ಟು ಅಮುಲ್ ಉತ್ಪಾದನೆಯ ಕಿಯಾಸ್ಕ್‌ಗಳು ಬರಲಿವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದರು. ಈ ಬಗ್ಗೆ ಎಂಎಲ್ ಸಿ ಸಿ.ಟಿ ರವಿ ಮಾತನಾಡಿ, ನಂದಿನಿ ಮತ್ತು ಅಮುಲ್ ಎರಡೂ ರೈತರ ಸಂಸ್ಥೆಗಳು, ಒಂದು ರಾಜ್ಯದ ಸಂಸ್ಥೆ, ಮತ್ತೊಂದು ದೇಶದ ಸಂಸ್ಥೆ, ಈ ಕುರಿತು ನಾನು ರಾಜಕೀಯ ಮಾಡಲಾರೆ, ಎರಡೂ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications