ಖಾಸಗಿ ವಲಯದ ಉದ್ಯೋಗಿಗಳಿಗೆ ಆಂಧ್ರಪ್ರದೇಶ ಸರ್ಕಾರ ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಅದೇನೆಂದರೆ ಖಾಸಗಿ ವಲಯದ ಉದ್ಯೋಗಿಗಳಿಗೆ ಗರಿಷ್ಠ ಕೆಲಸದ ಸಮಯವನ್ನು ಹೆಚ್ಚಿಸುವಂತೆ, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿದೆ. ಇದರ ಉದ್ದೇಶ ಹೂಡಿಕೆ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವುದಾಗಿದೆ.

ಹೌದು, ಖಾಸಗಿ ಕೆಲಸದ ಅವಧಿ ಸಾಮಾನ್ಯವಾಗಿ 9 ಗಂಟೆ ಇರುತ್ತದೆ. ಆದರೆ ಇದೀಗ ಆಂಧ್ರಪ್ರದೇಶ ಸರ್ಕಾರ, ಈ ಅವಧಿಯನ್ನ ಹತ್ತು ಗಂಟೆಗೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ, ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಿದೆ.
ಎಲ್ಲಾ ಖಾಸಗಿ ಸಂಸ್ಥೆಗಳಿಗೂ ಅನ್ವಯ:
ಈ ಹೊಸ ನಿಯಮವು ಆಂಧ್ರಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಈ ಕುರಿತ ತಿದ್ದುಪಡಿಯನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ.ಪಾರ್ಥಸಾರಥಿ ಅವರು ಘೋಷಣೆ ಮಾಡಿದ್ದಾರೆ. ಈ ಬದಲಾವಣೆಗಳು ಸರ್ಕಾರದ ವಿಶಾಲವಾದ, ವ್ಯವಹಾರ ಮಾಡುವ ಸುಲಭ ನೀತಿಯ ಭಾಗವಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ವಿಶ್ರಾಂತಿ ಅವಧಿಗೂ ಕೊಕ್ಕೆ:
ಇನ್ನು ಈ ನಿರ್ಧಾರವನ್ನು ಸೆಕ್ಷನ್ 54ರ ಕಾಯಿದೆಯ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೇನೆಂದರೆ, ಸೆಕ್ಷನ್ 55ರ ಅಡಿಯಲ್ಲಿ ನಿಗದಿಪಡಿಸಲಾದ, ವಿರಾಮದ ಅವಧಿಯನ್ನು ಕೂಡ ಬದಲಿಸಲಾಗಿದೆ. ಅಂದರೆ ಹಿಂದಿನ ನಿಯಮದ ಪ್ರಕಾರ, ಪ್ರತಿ 5 ಗಂಟೆಗಳ ಕೆಲಸದ ನಂತರ ಒಂದು ಗಂಟೆ ವಿಶ್ರಾಂತಿ ಅವಧಿ ಇತ್ತು. ಈಗ ಇದು ಆರು ಗಂಟೆಗಳ ಕೆಲಸದ ನಂತರ ಒಂದು ಗಂಟೆ ಕಾಲ ವಿಶ್ರಾಂತಿ ನೀಡಲಾಗುವ ಬಗ್ಗೆ ತಿಳಿಸಿದ್ದಾರೆ. ಈ ಕಾಯಿದೆಯು ಪ್ರಸ್ತುತ ದಿನಕ್ಕೆ ಗರಿಷ್ಠ ಒಂಬತ್ತು ಕೆಲಸದ ಸಮಯವನ್ನು ಅನುಮತಿಸುತ್ತದೆ, ಐದು ಗಂಟೆಗಳ ನಿರಂತರ ಕೆಲಸದ ನಂತರ ಕಡ್ಡಾಯವಾಗಿ 30 ನಿಮಿಷಗಳ ವಿರಾಮವನ್ನು ನೀಡುತ್ತದೆ.
ಅಧಿಕ ಅವಧಿ ಕೆಲಸವೂ ಹೆಚ್ಚಳ:
ಇದಿಷ್ಟೇ ಅಲ್ಲ..ಅಧಿಕ ಅವಧಿ ಕೆಲಸ..ಅಂದರೆ ಓವರ್ ಟೈಮ್ ಕೆಲಸದ ಮಿತಿಯನ್ನು 144 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಮೊದಲು ಇದು 75 ಗಂಟೆಗಳ ಕಾಲ ಇತ್ತು. ಇದೀಗ ಈ ನಿಮಯವನ್ನು ಕೂಡ ಸಡಿಲಗೊಳಿಸಿರುವುದರಿಂದ, ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಮಿಕ ಸಂಘಗಳು ಕೆಂಡಾಮಂಡಲ:
ಆದರೆ ಈ ಕ್ರಮಗಳು ಆಂಧ್ರಪ್ರದೇಶದ ಕಾರ್ಮಿಕ ಸಂಘಗಳ ಕೆಂಗಣ್ಣಿಗೆ ಗುರಿಯಾಗಿವೆ. ಇದೊಂದು ಟೀಕಾಸ್ತ್ರವಾಗಿದೆ ಎಂದರೂ ತಪ್ಪಾಗಲ್ಲ. ಇದು ಹೆಚ್ಚುವರಿ ಕೆಸಲದ ಸಮಯಕ್ಕೆ ಕೂಡ ಕಾರಣವಾಗಬಹುದು ಎಂದು ಎಚ್ಚರಿಸಿವೆ. ಇತ್ತ ಕೆಲವು ಉದ್ಯೋಗದಾತರು ಪರಿಷ್ಕೃತ ವೇಳಾಪಟ್ಟಿಯನ್ನೇ ಮೀರಿ ಕೆಲಸ ಮಾಡಲು ಕಾರ್ಮಿಕರನ್ನು ಒತ್ತಾಯಿಸಬಹುದು ಎನ್ನಲಾಗುತ್ತಿದೆ. ಮತ್ತು ಪ್ರಾಯೋಗಿಕವಾಗಿ ದೈನಂದಿನ ಪಾಳಿಗಳನ್ನು ಹನ್ನೆರಡು ಗಂಟೆಗಳಿಗಿಂತ ಹೆಚ್ಚು ಕಾಲ ತಳ್ಳಬಹುದು ಎಂದು ಭಯ ಕೂಡ ಪಡುತ್ತಿದ್ದಾರೆ.
ವಿರೋಧ ಪಕ್ಷದಿಂದ ಟೀಕೆಗಳ ಸುರಿಮಳೆ:
ಇನ್ನು ಈ ವಿಚಾರ ಕೇವಲ ಕಾರ್ಮಿಕ ಸಂಘಗಳ ಕೆಂಗಣ್ಣಿಗೆ ಮಾತ್ರ ಗುರಿಯಾಗಿಲ್ಲ. ಇದು ವಿರೋಧ ಪಕ್ಷಗಳ ಟೀಕೆಗಳಿಗೂ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ನಿರ್ಧಾರಕ್ಕೆ, ಟೀಕೆಗಳ ಮಳೆ ಸುರಿಯುತ್ತಿದೆ. ಅಲ್ಲದೇ ಸರ್ಕಾರದ ಈ ನೀತಿಯನ್ನು ಕಾರ್ಮಿಕ ವಿರೋಧಿ ಎಂದು ಕರೆದು ಕಿಡಿ ಕಾರುತ್ತಿದ್ದಾರೆ. ಜೊತೆಗೆ ಈ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯ ಕೂಡ ಮಾಡುತ್ತಿದ್ದಾರೆ.
ಅದೇನೇ ಆಗಲಿ, ಈ ಒಂದು ನಿರ್ಧಾರ ಎಲ್ಲರ ಪಾಲಿಗೂ ಖಂಡನೀಯವಾಗಿದೆ. ಕೆಲಸದ ಅವಧಿ ಹೆಚ್ಚಾದಷ್ಟು ಒತ್ತಡ ಹೆಚ್ಚಾಗುತ್ತದೆ. ಒತ್ತಡದಿಂದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯ ಹದಗೆಟ್ಟರೆ ಮನುಷ್ಯರ ಜೀವನ ಕಷ್ಟ ಕಷ್ಟ. ಹೀಗಿದ್ದರೂ ಆಂಧ್ರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ, ಖಾಸಗಿ ಉದ್ಯೋಗಿಗಳಿಗೆ ದೊಡ್ಡ ತಲೆನೋವಾಗಿದೆ. ಇದಕ್ಕೆ ರೆಸ್ಪಾನ್ಸ್ ಕೂಡಿಬರುತ್ತದೆ ಎಂದು ಕಾದುನೋಡಬೇಕಿದೆ.


Click it and Unblock the Notifications