ಆಪಲ್ ಕಂಪೆನಿಯ ಮಾರುಕಟ್ಟೆ ಮೌಲ್ಯ 2.3 ಲಕ್ಷ ಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಆ ಮೂಲಕ ಯುನೈಟೆಡ್ ಕಿಂಗ್ ಡಮ್ ನಲ್ಲಿನ ಫೈನಾನ್ಷಿಯಲ್ ಟೈಮ್ಸ್ ಸ್ಟಾಕ್ ಎಕ್ಸ್ ಚೇಂಜ್ 100 ಸೂಚ್ಯಂಕದ (FTSE 100) ಎಲ್ಲ ಕಂಪೆನಿಗಳ ಮಾರುಕಟ್ಟೆ ಮೌಲ್ಯವನ್ನು ಒಗ್ಗೂಡಿಸಿದರೆ ಎಷ್ಟು ಆಗುತ್ತದೋ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಆಪಲ್ ತಲುಪಿದೆ.
ಮೊದಲೇ ಹೇಳಿದಂತೆ 2.3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಅಂದರೆ, 1.7 ಲಕ್ಷ ಕೋಟಿ ಪೌಂಡ್ಸ್ ಗೆ ಸಮವಾಗುತ್ತದೆ. FTSE 100ರಲ್ಲಿ ಇರುವ ಎಲ್ಲ ಕಂಪೆನಿಗಳ ಒಟ್ಟು ಮೌಲ್ಯ ಸೇರಿದರೂ 1.5 ಲಕ್ಷ ಕೋಟಿ ಪೌಂಡ್ ಆಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ. ಆಪಲ್ ಕಂಪೆನಿ ಷೇರಿನ ಮೌಲ್ಯ ಬುಧವಾರದಂದು ಕುಸಿತ ಕಂಡಿದೆ. ಆದರೂ ದಿನಾಂತ್ಯಕ್ಕೆ ಲಂಡನ್ ಸೂಚ್ಯಂಕಕ್ಕಿಂತ ಮುಂದಿದೆ.
ಆಪಲ್ ಷೇರುಗಳ ಮುಖಬೆಲೆ ಸೀಳಿಕೆ ನಿರ್ಧಾರದಿಂದ ವೈಯಕ್ತಿಕ ಹೂಡಿಕೆದಾರರಿಂದ ಬೇಡಿಕೆ ಹೆಚ್ಚಾಗಿದೆ. ಆಪಲ್ ಕಂಪೆನಿಯ ಆಡಳಿತ ಮಂಡಳಿ ನಿರ್ದೇಶಕರು ಒಂದು ಷೇರನ್ನು ನಾಲ್ಕರಂತೆ ಸೀಳಿಕೆ ಮಾಡಿದರು. ಅದು ಆಗಸ್ಟ್ 31ರಿಂದಲೇ ಜಾರಿಗೆ ಬಂದಿದೆ.

ಕೊರೊನಾ ಬಿಕ್ಕಟ್ಟಿನ ಮಧ್ಯೆ ಅಮೆರಿಕನ್ ಷೇರು ಮಾರುಕಟ್ಟೆಯಲ್ಲಿ ಆಪಲ್ ಕಂಪೆನಿ ಹೊಸ ದಾಖಲೆ ಬರೆಯಿತು. ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಅಮೆರಿಕನ್ ಡಾಲರ್ ತಲುಪಿದ ಮೊದಲ ಕಂಪೆನಿ ಎನಿಸಿಕೊಂಡಿತು. ಎರಡು ವರ್ಷಗಳ ಹಿಂದೆ ಕಂಪೆನಿಯ ಮಾರುಕಟ್ಟೆ ಮೌಲ್ಯ $ 1 ಟ್ರಿಲಿಯನ್ ದಾಟಿತ್ತು.
ಆಪಲ್ ಮಾರುಕಟ್ಟೆ ಮೌಲ್ಯದಷ್ಟು ಹಣ ಒಂದು ದೇಶದ ಬಳಿ ಇದ್ದಿದ್ದರೆ ಅದು ಒಂಬತ್ತನೇ ಶ್ರೀಮಂತ ಎನಿಸಿಕೊಂಡಿರುತ್ತಿತ್ತು. ಹಾಗಿದ್ದರೆ ಭಾರತದ ರುಪಾಯಿ ಲೆಕ್ಕದಲ್ಲಿ ಆದರೆ ಎಷ್ಟು ಹಣ ಗೊತ್ತಾ? 165.60 ಲಕ್ಷ ಕೋಟಿ ರುಪಾಯಿ. ಕರ್ನಾಟಕದಂಥ ರಾಜ್ಯಕ್ಕೆ ಇನ್ನು ಎಂಬತ್ತು ವರ್ಷ ಕಾಲ ಯಾವುದೇ ಆದಾಯ ಇಲ್ಲದಿದ್ದರೂ ರಾಜ್ಯ ನಡೆಸಿಕೊಂಡು ಹೋಗಬಹುದು ಅಷ್ಟು ಇದೆ ಆಪಲ್ ಕಂಪೆನಿ ಮಾರುಕಟ್ಟೆ ಮೌಲ್ಯ.


Click it and Unblock the Notifications