ಆಪಲ್ ಐಫೋನ್ SE 2020 ಈಗ ಅಧಿಕೃತವಾಗಿ ಭಾರತದಲ್ಲೇ ಜೋಡಣೆ ಆಗಲಿದೆ. ಯು.ಎಸ್.ನ ಕ್ಯಾಲಿಫೋರ್ನಿಯಾದಲ್ಲಿ ಇರುವ ಕುಪರ್ಟಿನೋ ಮೂಲದ ಆಪಲ್ ಕಂಪೆನಿ ಈಚೆಗಷ್ಟೇ ಮಾರುಕಟ್ಟೆ ಬಂಡವಾಳ $ 2 ಟ್ರಿಲಿಯನ್ (ಎರಡು ಲಕ್ಷ ಕೋಟಿ ಅಮೆರಿಕನ್ ಡಾಲರ್) ಮುಟ್ಟಿ ದಾಖಲೆ ಬರೆದಿತ್ತು. ಇದೀಗ ಕಂಪೆನಿಯಿಂದಲೇ ಖಾತ್ರಿಯಾಗಿದೆ, ಆಪಲ್ ಐಫೋನ್ SE 2020 ಭಾರತದಲ್ಲೇ ಜೋಡಣೆ ಆಗುತ್ತದೆ.
ಆಪಲ್ ಸರಬರಾಜುದಾರ ಕಂಪೆನಿಗಳಲ್ಲಿ ಒಂದಾದ ವಿಸ್ಟ್ರಾನ್ ಆಪಲ್ ಐಫೋನ್ SE 2020 ಅನ್ನು ಕರ್ನಾಟಕದಲ್ಲಿ ಜೋಡಣೆ ಮಾಡುತ್ತದೆ. ಜನಪ್ರಿಯವಾದ ಅಳತೆಯ, ಉತ್ತಮ ಸಾಮರ್ಥ್ಯದ ಹೊಂದಿದ, ಕೈಗೆಟುಕುವ ಬೆಲೆಯ ಮೊಬೈಲ್ ಫೋನ್ ಆಪಲ್ ಐಫೋನ್ SE 2020. ಅದನ್ನು ಸ್ಥಳೀಯ ಗ್ರಾಹಕರಿಗಾಗಿ ಭಾರತದಲ್ಲೇ ಉತ್ಪಾದಿಸುತ್ತಿರುವುದು ಸಂತೋಷವಾಗಿದೆ ಎಂದು ತಿಳಿಸಿದೆ.
ಈ ನಡೆಯಿಂದ ಆಪಲ್ ಕಂಪೆನಿ 20% ಆಮದು ಸುಂಕ ಉಳಿಸಲು ಸಹಾಯ ಆಗುತ್ತದೆ. ಇದು ಸರ್ಕಾರವು ಮೊಬೈಲ್ ಫೋನ್ ಗಳ ಆಮದಿನ ಮೇಲೆ ವಿಧಿಸುವ ಸುಂಕ. ಇನ್ನು ಭಾರತದಲ್ಲೇ ಜೋಡಣೆ ಆಗುವುದರಿಂದ ಚೀನಾ ಮೊಬೈಲ್ ಫೋನ್ ಗಳಿಗಿಂತ ಇವುಗಳ ಮೇಲೆ ನಂಬಿಕೆ ಹೆಚ್ಚಾಗಲಿದೆ.

ಈ ರೀತಿ ಜೋಡಣೆಯನ್ನು ಭಾರತದಲ್ಲೇ ಮಾಡುವುದರಿಂದ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತದೆ. ಇದೀಗ ಆಪಲ್ ಐಫೋನ್ SE 2020 ಎಲ್ಲ ಮಾಡೆಲ್ ಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 64GB ಸಾಮರ್ಥ್ಯದ ಫೋನ್ 35,999 ರುಪಾಯಿಗೆ ದೊರೆಯುತ್ತಿದೆ. ಭಾರತದಲ್ಲಿ ಈ ಫೋನ್ ಬಿಡುಗಡೆ ಮಾಡಿದ್ದು 42,500 ರುಪಾಯಿಗೆ.
128 GB ಹಾಗೂ 256 GB ಸಾಮರ್ಥ್ಯದ ಫೋನ್ ಬೆಲೆ ಕ್ರಮವಾಗಿ 47,800 ಹಾಗೂ 58,300 ರುಪಾಯಿ ಇದೆ. ಆಪಲ್ ಐಫೋನ್ SE 2020 ಹೊರತಾಗಿ ಐಫೋನ್ 11 ಕೂಡ ಭಾರತದಲ್ಲೇ ತಯಾರು ಮಾಡಲಾಗುತ್ತಿದೆ. ಐಫೋನ್ ನ ಈ ಹಿಂದಿನ ತಲೆಮಾರಿನ ಮಾಡೆಲ್ ಗಳಾದ ಐಫೋನ್ XR, ಐಫೋನ್ 8 ಮುಂತಾದವು ಭಾರತದಲ್ಲೇ ತಯಾರಿಸಲಾಗುವುದು.


Click it and Unblock the Notifications