ಕೋವಿಡ್-19 ಮಹಾಮಾರಿಯ ಕಾಟದ ನಡುವೆ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಏಪ್ರಿಲ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ಒಟ್ಟು ಸಂಗ್ರಹವಾದ ಜಿಎಸ್‌ಟಿ ಆದಾಯವು 1.41 ಲಕ್ಷ ಕೋಟಿ ರೂಪಾಯಿನಷ್ಟಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಶನಿವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಒಟ್ಟು ಜಿಎಸ್‌ಟಿ ಆದಾಯ 1,41,384 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) 27,837 ಕೋಟಿ ಆಗಿದ್ದರೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) 35,621 ಕೋಟಿ ರೂಪಾಯಿನಷ್ಟಿದೆ.

ಹೆಚ್ಚುವರಿಯಾಗಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 68,481 ಕೋಟಿ ರೂಪಾಯಿ ಮತ್ತು ಸೆಸ್ 9,445 ಕೋಟಿ ರೂಪಾಯಿನಷ್ಟಿದೆ (ಸರಕುಗಳ ಆಮದಿಗೆ ಸಂಗ್ರಹಿಸಿದ 981 ಕೋಟಿ ಸೇರಿದಂತೆ).
ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರದ ಅತಿ ಹೆಚ್ಚು ಆದಾಯ ಸಂಗ್ರಹ ಇದಾಗಿದ್ದು, ಸತತ ಏಳನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಮಾರ್ಚ್ 2021ಕ್ಕೆ ಹೋಲಿಸಿದರೆ ಜಿಎಸ್‌ಟಿ ಆದಾಯ ಶೇಕಡಾ 14ರಷ್ಟು ಹೆಚ್ಚಾಗಿದೆ.


Click it and Unblock the Notifications