ಇತ್ತೀಚೆಗೆ ತರಕಾರಿಯನ್ನ ಕೂಡ ಆರೋಗ್ಯಕರ ಪದಾರ್ಥ ಎಂದು ಪರಿಗಣಿಸೋಕೆ ಆಗಲ್ಲ. ಯಾಕಂದ್ರೆ ಕಾಲ ಬದಲಾಗಿದೆ. ತಿನ್ನೋ ವಸ್ತು ಇಂದ ಹಿಡಿದು ಎಲ್ಲವೂ ಕೆಮಿಕಲ್ ಮಯವಾಗಿದೆ. ಹೀಗಿರೋವಾಗ ತರಕಾರಿ ಮಾತ್ರ ಆರೋಗ್ಯಕರ, ಡಯಟ್‌ಗೆ ಉಪಯುಕ್ತ, ತರಕಾರಿ ತಿನ್ನೋದ್ರಿಂದ ಲೈಫ್‌ಸ್ಟೈಲ್ ಚೆನ್ನಾಗಿರುತ್ತೆ ಅಂದುಕೊಳ್ಳೋಕಾಗಲ್ಲ. ಅದರಲ್ಲೂ ಈಗ ಆಗಿರೋ ಬೆಳವಣಿಗೆಯಿಂದ ತರಕಾರಿ ತಿನ್ನೋದಕ್ಕೂ ಹೆದರೋ ಪರಿಸ್ಥಿತಿ ಬಂದಿದೆ.

ಹೌದು, ಬೇರೆಲ್ಲೂ ಅಲ್ಲ...ನಮ್ಮ ಕರ್ನಾಟಕದಲ್ಲೇ ತರಕಾರಿಗಳಲ್ಲಿ ಭಾರ ಲೋಹಗಳು ಮತ್ತು ಕೀಟನಾಶಕಗಳ ಮಾಲಿನ್ಯ ಕುರಿತಂತಹ ಆತಂಕಕಾರಿ ಬೆಳವಣಿಗೆ ಮತ್ತೊಮ್ಮೆ ಹೊರಬಂದಿದೆ. ಅಂದರೆ ಕಳೆದೆರಡು ವರ್ಷಗಳ ಹಿಂದೆ ನಡೆದ ಅಧ್ಯಯನದ ನಂತರ, ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಹೊಸ ಪರೀಕ್ಷೆಗಳನ್ನು ನಡೆಸಿದ್ದು, ಅದರ ಫಲಿತಾಂಶಗಳು ಸಾರ್ವಜನಿಕರಲ್ಲಿ ಚಿಂತೆಯನ್ನು ಮೂಡಿಸಿವೆ. ಈ ಪರೀಕ್ಷೆಗಳು ಕೆಲವು ತರಕಾರಿಗಳಲ್ಲಿ ಅತಿ ವಿಷಕಾರಿ ಲೋಹವಾದ ಸೀಸ (ಲೆಡ್) ಹಾಗೂ ನಿಷೇಧಿತ ಕೀಟನಾಶಕಗಳ ಅವಶೇಷಗಳಿರುವುದನ್ನು ದೃಢಪಡಿಸಿವೆ.
ಇನ್ನು ಹಳೆಯ ಅಧ್ಯಯನದಲ್ಲಿ ಸುಮಾರು 400ಕ್ಕೂ ಹೆಚ್ಚು ಮಾದರಿಗಳನ್ನು ಪರಿಶೀಲಿಸಲಾಗಿತ್ತು. ಅದರ ನಂತರ ಸಂಬಂಧಿಸಿದ ಅಧಿಕಾರಿಗಳು ಮತ್ತಷ್ಟು ಪರಿಶೀಲನೆಗಾಗಿ ವಿಶೇಷ ಸಮಿತಿಯನ್ನು ರಚಿಸಿದರು. ಅಧ್ಯಯನಕ್ಕೋಸ್ಕರ ಈ ಸಮಿತಿ ಒಟ್ಟು 72 ತರಕಾರಿಗಳ ಮಾದರಿಗಳನ್ನು ಮಾರುಕಟ್ಟೆ ಮತ್ತು ಕೃಷಿ ಕ್ಷೇತ್ರಗಳಿಂದ ಸಂಗ್ರಹಿಸಿತು. ಈಗ ಪರೀಕ್ಷಾ ಫಲಿತಾಂಶಗಳಲ್ಲಿ 19 ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆ.
ಇನ್ನೂ ಒಂದು ಭಯದ ಸಂಗತಿ ಏನು ಗೊತ್ತಾ? ಸಾವಯವ ತರಕಾರಿಗಳು ಎಂದು ಮಾರಾಟವಾಗುತ್ತಿದ್ದ ತರಕಾರಿಗಳಲ್ಲಿ ಕೂಡ ಈ ಟಾಕ್ಸಿಕ್ ಅಂಶ ಕಂಡುಬಂದಿದೆ. ಅಧ್ಯಯನದ್ಲಿ ಬದನೆಕಾಯಿಯ ಮಾದರಿಯೊಂದನ್ನ ಪರಿಶೀಲಿಸಲಾಯ್ತು. ಅದರಲ್ಲಿ ಸೀಸದ ಪ್ರಮಾಣ ನಿಗದಿತ ಮಿತಿಗೂ ಹೆಚ್ಚು ಕಂಡುಬಂದಿದೆ.
ಇನ್ನು ತೊಂಡೆಕಾಯಿ, ಬೀನ್ಸ್, ಸೊಪ್ಪು, ಎಲೆಕೋಸು ಸೇರಿದಂತೆ ಹಲವು ತರಕಾರಿಗಳಲ್ಲೂ ಮಿತಿಗಿಂತ ಹೆಚ್ಚಾದ ಸೀಸ ಪತ್ತೆಯಾಗಿದೆ. ಸೌತೆಕಾಯಿ, ಕ್ಯಾಪ್ಸಿಕಂ, ಬೀಟ್ರೂಟ್, ಹಾಗಲಕಾಯಿ, ಕುಂಬಳಕಾಯಿ ಮತ್ತು ಮೆಣಸಿನಕಾಯಿ ಬಜ್ಜಿ ಮಾದರಿಗಳಲ್ಲಿಯೂ ಹೆಚ್ಚುವರಿ ಪ್ರಮಾಣ ಕಂಡುಬಂದಿದೆ.
ತರಕಾರಿಯಷ್ಟೆ ಅಲ್ಲ. ತರಕಾರಿ ಬೆಳೆದ ಮಣ್ಣನ್ನು ಕೂಡ ಪರಿಶೀಲನೆ ನಡೆಸಲಾಗಿದ್ದು, ಇನ್ನೂ ಕಳವಳಕಾರಿಯಾಗಿದೆ. ಅಂದರೆ . ಸಂಗ್ರಹಿಸಿದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ಕಲುಷಿತವಾಗಿರುವುದು ತಿಳಿದುಬಂದಿದೆ. ಇದರಿಂದ ತರಕಾರಿ ಬೆಳೆಸುವ ಭೂಮಿಯ ಗುಣಮಟ್ಟದ ಕುರಿತು ಪ್ರಶ್ನೆಗಳು ಮೂಡಿವೆ. ತಜ್ಞರ ಅಭಿಪ್ರಾಯದಂತೆ, ಇದು ಆರಂಭಿಕ ಹಂತದ ಪರಿಶೀಲನೆ ಮಾತ್ರ. ಸ್ಥಳೀಯ ಮಟ್ಟದಲ್ಲಿ ನಿಯಮಿತ ಮತ್ತು ಸಮಗ್ರ ಅಧ್ಯಯನಗಳನ್ನು ನಡೆಸುವುದು ಅಗತ್ಯವಾಗಿದೆ.
ಇನ್ನೂ ಒಂದು ವಿಷಯ ಏನೆಂದ್ರೆ 12 ವಿಧದ ಕೀಟನಾಶಕ ಅವಶೇಷಗಳು, ನಿಗದಿತ ಮಿತಿಯನ್ನು ಮೀರಿರುವುದು ಪತ್ತೆಯಾಗಿದೆ. ಅದರಲ್ಲೂ ಕ್ಯಾಪ್ಸಿಕಂ, ಮೆಣಸಿನಕಾಯಿ ಬಜ್ಜಿ, ಶುಂಠಿ ಮತ್ತು ಸೌತೆಕಾಯಿ ಮಾದರಿಗಳಲ್ಲೇ ಈ ವಿಶಕಾರಿ ಅಂಶ ಹೆಚ್ಚಾಗಿ ಕಂಡುಬಂದಿದೆ. ಇನ್ನು ಅತ್ಯಂತ ವಿಷಕಾರಿ ಮತ್ತು ಈಗಾಗಲೇ ನಿಷೇಧಿತವಾಗಿರುವ ಮಾನೋಕ್ರೋಟೋಫೋಸ್ ಕೂಡ ಕೆಲವು ಮಾದರಿಗಳಲ್ಲಿ ಪತ್ತೆಯಾಗಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು.
ಈ ಬೆಳವಣಿಗೆಗಳು ರೈತರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳುತ್ತವೆ. ಸುರಕ್ಷಿತ ಕೃಷಿ ಪದ್ಧತಿಗಳನ್ನು ಅನುಸರಿಸುವುದು, ಕೀಟನಾಶಕಗಳ ಸರಿಯಾದ ಬಳಕೆ ಹಾಗೂ ಮಣ್ಣು ಮತ್ತು ನೀರಿನ ಗುಣಮಟ್ಟದ ನಿಯಮಿತ ಪರೀಕ್ಷೆ ನಡೆಸುವುದು ಬಹಳ ಮುಖ್ಯ. ಸರ್ಕಾರ, ಕೃಷಿ ಇಲಾಖೆ ಮತ್ತು ವಿಜ್ಞಾನಿಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಂಡುಹಿಡಿಯಲು ಸಾಧ್ಯ.


Click it and Unblock the Notifications