ಬೆಂಗಳೂರು: ವೇಗದ ಪ್ರಯಾಣ ಮತ್ತು ಅತ್ಯುತ್ತಮ ಸೇವೆಯಿಂದಾಗಿ ಭಾರೀ ಬೇಡಿಕೆಯಲ್ಲಿರುವ ವಂದೇ ಭಾರತ್ ರೈಲು, ಇದೀಗ ದೇಶವ್ಯಾಪಿ ವಿಸ್ತರಿಸಿದೆ. ಈಗಾಗಲೇ ದೇಶದೆಲ್ಲೆಡೆ ಹಲವಾರು ನಗರಗಳನ್ನು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಸಂಪರ್ಕಿಸಿದೆ. ಇದೀಗ ವಂದೇ ಭಾರತ್ ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಪ್ರಯಾಣಿಕರ ಪ್ರಯಾಣದ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ರೈಲ್ವೇ ಇಲಾಖೆ (Railway Department) ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೇ ಸಚಿವಾಲಯ, ಕೆಎಸ್‌ಆರ್ ಬೆಂಗಳೂರು ಮತ್ತು ಎರ್ನಾಕುಲಂ (Bengaluru-Ernakulam) ನಡುವೆ ಕೋಯಮತ್ತೂರು ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾರಂಭಕ್ಕೆ ಅನುಮೋದನೆ ನೀಡಿದೆ. ಈ ರೈಲು ಸೇವೆ ದಕ್ಷಿಣದ ಎರಡು ಪ್ರಮುಖ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದ ಪ್ರಯಾಣಿಕರಿಗೆ ಸಂಪರ್ಕಿಸಲಿದೆ. ಅಲ್ಲದೇ ಕಡಿಮೆ ಸಮಯದಲ್ಲಿ ಪ್ರಯಾಣ, ಆರಾಮದಾಯಕ ಪ್ರಯಾಣ ಮಾಡಬಹುದು.
ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸಮಯ:
ಹೊಸದಾಗಿ ಕಾರ್ಯಾರಂಭ ಮಾಡಲಿರುವ ವಂದೇ ಭಾರತ್ ರೈಲು ವಾರದಲ್ಲಿ ಆರು ದಿನಗಳು ಸಂಚರಿಸಲಿದೆ. ಅದರಲ್ಲಿ ಬುಧವಾರ ರಜಾ ದಿನವಾಗಿದೆ. ರೈಲು ಸಂಖ್ಯೆ, 26651 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಬೆಳಿಗ್ಗೆ 5:10 ಕ್ಕೆ ಹೊರಟು ಮಧ್ಯಾಹ್ನ 1:50 ಕ್ಕೆ ಎರ್ನಾಕುಲಂ ತಲುಪುತ್ತದೆ. ಆದರೆ ಅದೇ ರಿಟರ್ನ್ ರೈಲ ಸಂಖ್ಯೆ 26652 ಆಗಿದ್ದು, ಎರ್ನಾಕುಲಂನಿಂದ ಮಧ್ಯಾಹ್ನ 2:20ಕ್ಕೆ ಹೊರಟರೆ, ರಾತ್ರಿ 11:00 ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತದೆ. ಇದರ ಜೊತೆಗೆ ಈ ವಂದೇ ಭಾರತ್ ರೈಲು ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್‌ನಲ್ಲಿ ನಿಲುಗಡೆಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಈ ಅರೆ-ಹೈಸ್ಪೀಡ್ ಸೇವೆ ಕರ್ನಾಟಕ ಮತ್ತು ಕೇರಳ ನಡುವಿನ ಸಂಪರ್ಕವನ್ನು ಸುಧಾರಿಸಿ, ಪ್ರಯಾಣ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಆದ್ದರಿಂದ ಬಹಳ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ಕೊನೆಗೂ ಪ್ರಯಾಣಿಕರಿಗೆ ಸಿಗುತ್ತಿದೆ.
ಸಚಿವಾಲಯವು ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ವಲಯಗಳಿಗೆ ಕೂಡಲೇ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ನಿರ್ದೇಶಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭವನ್ನು ಈ ಹಿಂದೆ ದೃಢಪಡಿಸಿದ್ದು, ನವೆಂಬರ್ ಮಧ್ಯದೊಳಗೆ ಸೇವೆ ಶುರುವಾಗಲಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದರು. ಇದೀಗ 2026 ರಲ್ಲಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಇನ್ನು ಬೆಂಗಳೂರು ಮತ್ತು ಮಂಗಳೂರಿಗೂ ವಂದೇ ಭಾರತ್ ರೈಲು ಸಂಪರ್ಕಿಸುವ ಸುದ್ದಿಗಳು ಹರಿದಾಡುತ್ತಲೇ ಇದೆ. ಈಗಾಗಲೇ ಬೆಂಗಳೂರು-ಸುಬ್ರಹ್ಮಣ್ಯ ನಡುವಿನ ವಿದ್ಯುದ್ದೀಕರಣ ಕಾರ್ಯ ಸಂಪೂರ್ಣಗೊಂಡಿದೆ. ಈ ಬೆನ್ನಲ್ಲೇ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣ ಪ್ರತಿಕ್ರಿಯೆ ಭಾರೀ ವೈರಲ್ ಆಗುತ್ತಿದೆ.


Click it and Unblock the Notifications