ಅಮೆರಿಕ ಒಡೆತನದ ಕಂಪನಿ ಅಮೆಜಾನ್ ಕಂಪನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಟೆಕ್ ದೈತ್ಯ ಕಂಪನಿ ಅಮೆಜಾನ್ ಭಾರೀ ಗ್ರಾಹಕರನ್ನು ಹೊಂದಿದ್ದು, ಭಾರತದಲ್ಲೂ ಹಲವಾರು ಕಡೆಗಳಲ್ಲಿ ಕಚೇರಿಗಳನ್ನು ಹೊಂದಿದೆ. ಇದೀಗ ಅಮೆರಿಕದ ಇ-ಕಾಮರ್ಸ್ ದೈತ್ಯ ಕಂಪನಿಯಾಗಿರುವ ಅಮೆಜಾನ್ (Amazon), ಬೆಂಗಳೂರಿನ ಉತ್ತರ ಭಾಗದಲ್ಲಿ ತನ್ನ ಹೊಸ ಕಾರ್ಪೊರೇಟ್ ಕ್ಯಾಂಪಸ್ ಅನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದೆ. ಇದು ಏಷ್ಯಾದಲ್ಲೇ ಅಮೆಜಾನ್‌ನ ಎರಡನೇ ಅತಿದೊಡ್ಡ ಕಚೇರಿಯಾಗಿದೆ. ಈ ಕಚೇರಿ 11 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ.

ಅಮೆಜಾನ್‌ನ ಅತಿದೊಡ್ಡ ಕಟ್ಟಡ!
ಅಮೆಜಾನ್ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದ ಹೊಸ ಕ್ಯಾಂಪಸ್ 12 ಅಂತಸ್ತಿನ ಕಟ್ಟಡವಾಗಿದ್ದು, ಸುಮಾರು 1.1 ಮಿಲಿಯನ್ ಅಂದರೆ 11 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 5 ಎಕರೆ ಜಾಗದಲ್ಲಿ ಈ ಕಚೇರಿಯನ್ನು ನಿರ್ಮಿಸಲಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿ.ಮೀ ದೂರದಲ್ಲಿ ಯಲಹಂಕ ಸಮೀಪದ ವಿನಾಯಕ ನಗರ ಪ್ರದೇಶದಲ್ಲಿದೆ.
ಕರ್ನಾಟಕ ಸಚಿವರಿಂದ ಉದ್ಘಾಟನೆ
ಕರ್ನಾಟಕ ಸರ್ಕಾರದ ದೊಡ್ಡ ಮತ್ತು ಮಧ್ಯಮ ಉದ್ಯಮಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ ಪಾಟೀಲ್ ಅವರು ಈ ಅಮೆಜಾನ್ ಕ್ಯಾಂಪಸ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾ ದೇಶದ ಮ್ಯಾನೇಜರ್ ಸಮೀರ್ ಕುಮಾರ್ ಸೇರಿದಂತೆ ಕಂಪನಿಯ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎನ್ನಲಾಗಿದೆ.
ಅಮೆಜಾನ್ ಕ್ಯಾಂಪಸ್‌ನ ವಿಶೇಷತೆಗಳು:
ಏಷ್ಯಾದ ಅಮೆಜಾನ್ ಕಚೇರಿಗಳಲ್ಲಿ ಎರಡನೇ ಅತಿದೊಡ್ಡ ಕಚೇರಿ ಇದಾಗಿದೆ. ಈ ಕ್ಯಾಂಪಸ್‌ನಲ್ಲಿ 7,000 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇ-ಕಾಮರ್ಸ್, ಆಪರೇಷನ್ಸ್, ಪೇಮೆಂಟ್ಸ್, ಟೆಕ್ನಾಲಜಿ, ಸೆಲ್ಲರ್ ಸರ್ವೀಸಸ್, ಲೀಡರ್‌ಶಿಪ್ ಸೇರಿದಂತೆ ಅಮೆಜಾನ್‌ನ ಎಲ್ಲಾ ಕೆಲಸಗಳನ್ನು ಒಂದೇ ಕಡೆ ಮಾಡುವ ಗುರಿಯೊಂದಿಗೆ ಈ ಕಟ್ಟಡ ನಿರ್ಮಿಸಲಾಗಿದೆ. ಈ ಮೂಲಕ ಭಾರತ ಕೂಡಾ ಐಟಿ ಹಬ್‌ನಲ್ಲಿ ವಿಶೇಷ ಪಾತ್ರವಾಗಲು ಸಹಕಾರಿಯಾಗಲಿದೆ.
ಭಾರತದಲ್ಲಿ ಅಮೆಜಾನ್ ಹೂಡಿಕೆ!
ಈ ಹೊಸ ಕ್ಯಾಂಪಸ್ ಆರಂಭಿಸುವ ಮೂಲಕ ಅಮೆಜಾನ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ದೃಢಪಡಿಸಿದೆ. ಕಂಪನಿ ಈಗಾಗಲೇ ಭಾರತದಲ್ಲಿ $40 ಬಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆ ಮಾಡಿದ್ದು, 2030 ರವರೆಗೆ ಹೆಚ್ಚುವರಿ $35 ಬಿಲಿಯನ್ ಹೂಡಿಕೆ ಮಾಡಲಿದೆ ಎಂದು ಭರವಸೆ ನೀಡಿದೆ. ಈ ಮೂಲಕ ಎಐ, ಡಿಜಿಟಲ್ ಸೇವೆ, ಉದ್ಯೋಗ ಸೃಷ್ಟ, ಉದ್ಯಮಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.
10ನೇ ಅಮೆಜಾನ್ ಕಾರ್ಪೋರೇಟ್ ಆಫೀಸ್!
ಇನ್ನು ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಅಮೆಜಾನ್ ಈ ಮೂಲಕ ಹತ್ತನೇ ಕಾರ್ಪೋರೇಟ್ ಕಚೇರಿಗೆ ಚಾಲನೆ ನೀಡಿದೆ. ಅಮೆಜಾನ್ ಮತ್ತು ಕರ್ನಾಟಕ ಸುಮಾರು 2 ದಶಕಗಳಿಂದ ಉತ್ತಮ ಸಂಬಂಧ ಹೊಂದಿದೆ. ಅಲ್ಲದೇ ಮುಂದಿನ 4 ವರ್ಷಗಳಳ್ಲಿ ಭಾರತದಲ್ಲಿ ಅಮೆಜಾನ್ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.


Click it and Unblock the Notifications