ನವದೆಹಲಿ: ಕೋವಿಡ್ ಮಹಾಮಾರಿಗೆ ಆಯುರ್ವೇದ ಉತ್ಪನ್ನಗಳ ತಯಾರಿಕೆ ಸಂಸ್ಥೆಯಾದ ಪತಂಜಲಿ ಕೊರೊನಿಲ್ ಎಂಬ ಔಷಧಿ ಕಂಡು ಹಿಡಿದಿದ್ದೇವೆ ಎಂದು ನಿನ್ನೆಯಷ್ಟೇ ಹೇಳಿಕೊಂಡಿತ್ತು.
ಆದರೆ, ಪತಂಜಲಿಯ ಈ ನಡೆಗೆ ಆಯುಷ್ ಇಲಾಖೆ ಹಾಗೂ ಸರ್ಕಾರದಿಂದ ವಿರೋಧ ಕೇಳಿ ಬಂದಿದೆ. ಪತಂಜಲಿಗೆ ನೋಟಿಸ್ ಕೂಡ ನೀಡಲಾಗಿದೆ. ಇದರಿಂದ ಪತಂಜಲಿಯ ಮಹತ್ವಾಕಾಂಕ್ಷೆಯ ಕೊರೊನಿಲ್ ಮಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಉತ್ತರಾಖಂಡದ ಆಯುಷ್ ಸಚಿವಾಲಯವು ಹರಿದ್ವಾರದ ಪತಂಜಲಿಗೆ ನೋಟಿಸ್ ನೀಡಿದೆ. ರೋಗನಿರೋಧಕ ಬೂಸ್ಟರ್ ಕಿಟ್‌ಗಳು ಮತ್ತು ಜ್ವರದ ಔಷಧಿಗಳ ಉತ್ಪಾದನೆಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಕೋವಿಡ್‌ಗೆ ಔಷಧಿ ತಯಾರಿಸಲು ಪರವಾನಗಿ ನೀಡಿರಲಿಲ್ಲ ಎಂದು ಹೇಳಿದೆ.
ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ
ಪತಂಜಲಿ ದಿವ್ಯಾ ಫಾರ್ಮಸಿ ಕೊರೊನಾಗೆ ಸಂಬಂಧಿಸಿದ ಯಾವುದೇ ರೀತಿಯ ಔಷಧದ ಪರವಾನಗಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ ಅಥವಾ ಈ ನಿಟ್ಟಿನಲ್ಲಿ ಅವರಿಗೆ ಯಾವುದೇ ಪರವಾನಗಿ ನೀಡಲಾಗಿಲ್ಲ. ಪರವಾನಗಿ ನೀಡಿದ್ದು ರೋಗನಿರೋಧಕ ಬೂಸ್ಟರ್ ಕಿಟ್‌ಗಳಿಗೆ ಮಾತ್ರ. ಪತಂಜಲಿ ದಿವ್ಯಾ ಫಾರ್ಮಸಿಗೆ ನೋಟಿಸ್ ನೀಡಲಾಗುವುದು. ಅವರ ಉತ್ತರ ತೃಪ್ತಿಕರವಾಗಿಲ್ಲ ಎಂದರೆ ಆಗ ಅವರ ಪ್ರಸ್ತುತ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಉತ್ತರಾಖಂಡದ ಆಯುಷ್ ಸಚಿವಾಲಯ ಹೇಳಿದೆ.
ಮೊದಲು ಆಯುಷ್ ಸಚಿವಾಲಯಕ್ಕೆ ಬರಬೇಕಾಗಿದೆ
ಈ ಬಗ್ಗೆ ಇಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಬಾಬಾ ರಾಮದೇವ್ ಕೊರೊನಾವೈರಸ್‌ಗೆ ಔಷಧಿ ನೀಡಿರುವುದು ಒಳ್ಳೆಯದು. ಆದರೆ, ನಿಯಮಗಳ ಪ್ರಕಾರ ಅದು ಮೊದಲು ಆಯುಷ್ ಸಚಿವಾಲಯಕ್ಕೆ ಬರಬೇಕಾಗಿದೆ. ಪತಂಜಲಿಯವರು ವರದಿಯನ್ನು ನಮಗೆ ಕಳುಹಿಸಿದ್ದಾರೆ. ನಾವು ಅದನ್ನು ಪರಿಶೀಲಿಸುತ್ತೇವೆ ವರದಿಯನ್ನು ನೋಡಿದ ನಂತರ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಒಂದು ಮಾತ್ರೆಗೆ 545 ರುಪಾಯಿ
ಕೊರೊನಿಲ್ ಆಯುರ್ವೇದ ಮಾತ್ರೆಗಳ ಕಿಟ್‌ನ್ನು ಪತಂಜಲಿ ಕೋವಿಡ್ 19 ರೋಗಿಗಳಿಗೆ ರೂಪಿಸಿದೆ. ಈ ಕಿಟ್‌ನಲ್ಲಿ ಹತ್ತು ಮಾತ್ರೆಗಳು ಇರುತ್ತವೆ. ಒಂದು ಮಾತ್ರೆಗೆ 545 ರುಪಾಯಿ. ಈ ಮಾತ್ರೆಗಳು ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ಸಮರ್ಥವಾಗಿದೆ ಎಂದು ಬಾಬಾ ರಾಮದೇವ್ ಅವರು ಹೇಳಿದ್ದಾರೆ.
ಇಲಿಗಳ ಮೇಲೆ ಸಂಶೋಧನೆ
ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಶೋಧಕರು ಹಾಗೂ ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಜಂಟಿಯಾಗಿ Coronil ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎನ್ನಲಾಗಿದೆ. ಪತಂಜಲಿ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ಕೈಗೊಂಡು ಕಳೆದ 6 ತಿಂಗಳ ನಿರಂತರ ಪರಿಶ್ರಮದಿಂದ ಕೋವಿಡ್‌ಗೆ ಮದ್ದು ಅರಿದಿದ್ದಾರೆ.


Click it and Unblock the Notifications