ಬೆಂಗಳೂರು, ಆಗಸ್ಟ್ 30: ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನದ ಅಗತ್ಯವಿದ್ದು , ಈ ಪೈಕಿ ಬೆಂಗಳೂರಿಗೆ 55,586 ಕೋಟಿ ರೂಪಾಯಿಗಳ ಹೂಡಿಕೆ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಇಂದು ನಡೆದ 16 ನೇ ಹಣಕಾಸು ಆಯೋಗ ಸಭೆಯಲ್ಲಿಆಯೋಗದ ಅಧ್ಯಕ್ಷ ಅರವಿಂದ್ ಪನಗರಿಯಾ ಮತ್ತು ಅದರ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, "ಮುಂದಿನ ಐದು ವರ್ಷಗಳಲ್ಲಿ 55,586 ಕೋಟಿ ರೂ. ಅಗತ್ಯವಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಹಣಕಾಸು ಆಯೋಗದಿಂದ 27,793 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿಕೊಂಡಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿದ್ದರಾಮಯ್ಯ ಅವರು, "ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸಲು 'ಬ್ರಾಂಡ್ ಬೆಂಗಳೂರು' ಪರಿಕಲ್ಪನೆಯನ್ನು ತಮ್ಮ ಸರ್ಕಾರವೂ ಜಾರಿಗೆ ತರಲಾಗುವುದು. 48,686 ಕೋಟಿ ರೂಪಾಯಿಗಳ ಅಂದಾಜು ಬಜೆಟ್‌ನಲ್ಲಿ ನವೀನ ಸಮಗ್ರ ಹಣಕಾಸು ಮಾದರಿಯ ಮೂಲಕ ಬೆಂಗಳೂರಿಗೆ ದೀರ್ಘಾವಧಿಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.
"ಟೆಕ್ ಮತ್ತು ಸ್ಟಾರ್ಟ್ಅಪ್ ಹಬ್ ಆಗಿರುವ ಬೆಂಗಳೂರು ಮೂಲಸೌಕರ್ಯಗಳ ಅಭಿವೃದ್ದಿ ಹಲವು ದೂರು ಬರುತ್ತಿವೆ. ಇನ್ನೊಂದೆಡೆ ರಾಜ್ಯವು ಪ್ರಾದೇಶಿಕ ಅಸಮತೋಲನವನ್ನು ಎದುರಿಸುತ್ತಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾದೇಶಿಕ ಅಸಮತೋಲನ ಮತ್ತು ನಗರೀಕರಣದ ಸವಾಲುಗಳನ್ನು ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಕೇಂದ್ರದಿಂದ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣದ ಅಗತ್ಯವಿದೆ" ಎಂದು ಆಯೋಗದ ಮುಂದೆ ಹೇಳಿದ್ದಾರೆ.
"ಈ ವೇಳೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನುದಾನ ಕೋರಿದ್ದು, ಸಮಾನ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯವು 25,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 16 ನೇ ಹಣಕಾಸು ಆಯೋಗದಿಂದ ಐದು ವರ್ಷಗಳಲ್ಲಿ 25,000 ಕೋಟಿ ರೂಪಾಯಿಗಳ ಹೊಂದಾಣಿಕೆಯ ಅನುದಾನವನ್ನು ಕೋರಿದೆ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟ ವಲಯದಲ್ಲಿ ಪರಿಣಾಮಕಾರಿಯಾಗಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಮತ್ತು ಪುನರ್ ವಸತಿಯನ್ನು ಖಾತ್ರಿಪಡಿಸಲು ರೂ. 10 ಸಾವಿರ ಕೋಟಿ ಅನುದಾನ ಒದಗಿಸಲು ಮನವಿ ಮಾಡುತ್ತೇವೆ ಎಂದು ಕೇಳಿಕೊಂಡಿದ್ದಾರೆ.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ವರ್ಗಾವಣೆಯಲ್ಲಿ ಕರ್ನಾಟಕದ ಪಾಲು ಗಣನೀಯವಾಗಿ ಇಳಿಕೆಯಾಗಿರುವ ಬಗ್ಗೆ ಸಿಎಂ ಕಳವಳ ವ್ಯಕ್ತಪಡಿಸಿದ್ದು, ಕರ್ನಾಟಕದ ಪಾಲನ್ನು 4.7% ರಿಂದ 3.6% ಕ್ಕೆ ತೀವ್ರವಾಗಿ ಕಡಿಮೆ ಮಾಡಿದೆ. ಇದು 2021-26 ರಿಂದ ಐದು ವರ್ಷಗಳ ಅವಧಿಯಲ್ಲಿ 68,275 ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ. ಈ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ ರೂ.35 ಸಾವಿರದಿಂದ 40 ಸಾವಿರ ಕೋಟಿಯಷ್ಟು ಇತರ ರಾಜ್ಯಗಳಿಗೆ ಆದಾಯ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ಗಮನಿಸಿದೆ. ಇದು ಜಿಎಸ್‌ಡಿಪಿಯ ಶೇ.1.8ರಷ್ಟಿದೆ. ರಾಜ್ಯದಿಂದ ಹೊರಗೆ ವರ್ಗಾವಣೆಯಾಗುತ್ತಿರುವ ಈ ಮೊತ್ತ ರಾಜ್ಯದ ಒಟ್ಟು ಆದಾಯದ ಶೇ.50ರಿಂದ 55 ರಷ್ಟಾಗಿದೆ.
ಈ ರೀತಿ ಪಾಲಿನ ಪರಿಗಣನೆಯಲ್ಲಿನ ಅಸಮತೋಲನದಿಂದಾಗಿ ಆರ್ಥಿಕವಾಗಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ದಂಡ ಎದುರಿಸುವಂತಾಗಿದೆ. ಈ ಅವಧಿಯಲ್ಲಿ 11,495 ಕೋಟಿ ರೂ.ಗಳ ರಾಜ್ಯ ಅನುದಾನವನ್ನು ಶಿಫಾರಸು ಮಾಡಿದ್ದರೂ, ಭಾರತ ಸರ್ಕಾರವು ಈ ಶಿಫಾರಸನ್ನು ಅಂಗೀಕರಿಸಲಿಲ್ಲ, 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 79,770 ಕೋಟಿ ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.
"ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದ ಅವರು, ದೇಶದ ಜನಸಂಖ್ಯೆಯ ಕೇವಲ 5 ಪ್ರತಿಶತವನ್ನು ಹೊಂದಿದ್ದರೂ, ರಾಷ್ಟ್ರೀಯ ಜಿಡಿಪಿಗೆ ರಾಜ್ಯವು ಸುಮಾರು 8.4 ಪ್ರತಿಶತದಷ್ಟು ಕೊಡುಗೆ ನೀಡುವ ಮೂಲಕ ದೇಶಕ್ಕೆ ಒಟ್ಟು ಜಿಎಸ್‌ಟಿ ಕೊಡುಗೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಆದರೆಕರ್ನಾಟಕ ನೀಡುವ ಪ್ರತಿ ರೂಪಾಯಿಗೆ ಕೇವಲ 15 ಪೈಸೆ ಮಾತ್ರ ರಾಜ್ಯಕ್ಕೆ ಮರಳುತ್ತದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications