ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru 2nd Airport) ನಿರ್ಮಾಣದ ಬಗ್ಗೆ ದಿನಹೋದಂತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈಗಾಗಲೇ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕಲ್ಲಿ (Kempegowda Airport) ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಎರಡನೇ ವಿಮಾನ ನಿಲ್ದಾಣಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೀಗ ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಎರಡು-ಮೂರು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ (M.B Patil) ತಿಳಿಸಿದ್ದಾರೆ. ಈ ಮೂಲಕ ಎರಡನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ. ಇದನ್ನು AAI ತಂಡವು ಏಪ್ರಿಲ್‌ನಲ್ಲಿ ಪರಿಶೀಲಿಸಿದೆ. ಅದರಲ್ಲಿ ಒಂದು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆ ಸಮೀಪವಿದ್ದರೆ, ಇನ್ನೊಂದು ಬೆಂಗಳೂರು ಗ್ರಾಮಾಂತರದ ನೆಲಮಂಗಲ-ಕುಣಿಗಲ್ ರಸ್ತೆಯ ಸಮೀಪವಿದೆ. ಆದರೆ ಇದೀಗ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವರದಿಗಾಗಿ ಕಾಯುತ್ತಿದ್ದು, ಆ ನಂತರ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
AAI ಎರಡೂ ಸ್ಥಳಗಳನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ. ಆದರೆ, ಸರ್ಕಾರವೇ ಸಚಿವ ಸಂಪುಟದ ಮೂಲಕ ಅಂತಿಮವಾಗಿ ಅತ್ಯುತ್ತಮ ಸ್ಥಳ ಯಾವುದೆಂದು ಪರಿಶೀಲನೆ ನಡೆಸಿ, ಅಂತಿಮಗೊಳಿಸಲಿದೆ ಎನ್ನಲಾಗಿದೆ.
ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) 150 ಕಿ.ಮೀ. ವ್ಯಾಪ್ತಿಯೊಳಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಹಲವಾರು ಅಡೆತಡೆಗಳು ಎದುರಾಗುತ್ತಿದೆ. ಅಲ್ಲದೇ ಇದೇ ಕಾರಣಕ್ಕೆ ಸರ್ಕಾರ ಈಗಾಗಲೇ ಪೂರ್ವಸಿದ್ಧತಾ ಕಾರ್ಯಗಳನ್ನು ಕೈಗೊಂಡಿದೆ.
ಎರಡನೇ ವಿಮಾನ ನಿಲ್ದಾಣ ಆಗಬೇಕೆಂದರೆ ಕನಿಷ್ಠ ಅಂದರೂ ಐದರಿಂದ ಆರು ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಈಗಲೇ ಕೆಲಸ ಶುರು ಮಾಡಿದ್ರೆ, 2033ರ ವೇಳೆಗೆ ಎರಡನೇ ವಿಮಾನ ನಿಲ್ದಾಣ ಪೂರ್ಣಗೊಳ್ಳಬಹುದು ಎಂದು ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ದೆಹಲಿ ಮತ್ತು ಮುಂಬೈಯಂತಹ ಬೃಹತ್ ನಗರಗಳಲ್ಲಿ ಮಾತ್ರ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವುದರಿಂದ, ಈ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಿದವರ ಜೊತೆ ಕರ್ನಾಟಕ ಸರ್ಕಾರ ಮಾತುಕತೆ ನಡೆಸಲಿದೆ ಎಂದು ಹೇಳಿದ್ದಾರೆ.
ಶಾಸಕರಿಂದ ಸಲಹೆ:
ಇನ್ನು ಎರಡನೇ ವಿಮಾನ ನಿಲ್ದಾಣಕ್ಕೆ, ಉತ್ತರ ಕರ್ನಾಟಕದ ಕೆಲವು ಶಾಸಕರು ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಸಲಹೆ ನೀಡಿದ್ದು, ಇನ್ನು ಕೆಲವರು ದಕ್ಷಿಣ ಬೆಂಗಳೂರಿನ ಸ್ಥಳಗಳಿಗೆ ಆದ್ಯತೆ ನೀಡಿದ್ದಾರೆ. ಆದರೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಸಹಕಾರ:
ಇನ್ನು ಎರಡನೇ ವಿಮಾನ ನಿಲ್ದಾಣದ ಕಾರ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರ ಇದೆ. ಎಎಐ ತಾಂತ್ರಿಕ ವರದಿ ಬಂದ ಬಳಿಕ, ಜಾಗತಿಕ ಟೆಂಡರ್ ಮೂಲಕ ಶ್ರೇಷ್ಠ ಕಂಪನಿಗಳೊಂದಿಗೆ ಯೋಜನೆ ಪ್ರಾರಂಭಿಸಲಾಗುತ್ತದೆ. ಹೀಗಾಗಿ, ಈ ಯೋಜನೆ ಮೂಲಕ ಅತ್ಯಂತ ಪ್ರಾಮಾಣಿಕ, ಉತ್ತಮ ಗುಣಮಟ್ಟದ ಏರ್‌ಪೋರ್ಟ್ ನಿರ್ಮಾಣವಾಗಲಿದೆ ಎನ್ನಲಾಗಿದೆ.


Click it and Unblock the Notifications