ಬೆಂಗಳೂರು, ಆಗಸ್ಟ್ 24: ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಿಸುವ ಯೋಜನೆಗೆ ಗುರುವಾರ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ₹ 500 ಕೋಟಿ ವೆಚ್ಚದಲ್ಲಿ ಪ್ರೊಜೆಕ್ಟ್ ಆಗಿದ್ದು, ಇದು ದಕ್ಷಿಣ ಏಷ್ಯಾದ ಅತಿ ಎತ್ತರದ ರಚನೆಯಾಗಿರಲಿದೆ. ಈ ಯೋಜನೆಯು ನಗರದ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡಲಿದ್ದು, ಇದರೊಂದಿಗೆ ಭಾರತೀಯ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರಿನ 360 ಡಿಗ್ರಿಯಲ್ಲಿ ವೀಕ್ಷಣೆಯನ್ನು ಮಾಡಬಹುದಾಗಿದೆ.
ಗುರುವಾರ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ 250 ಅಡಿ ಎತ್ತರದ 500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಅನುಮೋದಿಸುವ ಮೂಲಕ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿ, "ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್‌ಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ₹ 500 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸ್ಕೈಡೆಕ್ ನಿರ್ಮಿಸಲಾಗುವುದು. ಆದರೆಸ್ಥಳದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಾವು ಕ್ಯಾಬಿನೆಟ್ ಸಭೆಯಲ್ಲಿ ಸ್ಥಳದ ಬಗ್ಗೆ ಚರ್ಚಿಸಲಿಲ್ಲ. ಸ್ಕೈಡೆಕ್‌ನ ಡಿಪಿಆರ್ ಸಿದ್ಧವಾಗಿಲ್ಲ" ಎಂದು ಹೇಳಿದ್ದಾರೆ.

ಸ್ಕೈಡೆಕ್ ವಿಶೇಷತೆ:
ಉದ್ಯಾನ ನಗರಿಯ ಸೌಂದರ್ಯವನ್ನು ಬಾನೆತ್ತರದಲ್ಲಿ ನಿಂತು ನೋಡುವ ಅಪೂರ್ವ ಅವಕಾಶ ಜನರಿಗೆ ಒದಗಿಸಲು ಅವಕಾಶ ನೀಡುವ ಯೋಜನೆ ಇದಾಗಿದೆ. ಆಕಾಶ ಗೋಪುರವು ಸುಮಾರು 250 ಮೀಟರ್ ಎತ್ತರವಿರಲಿದ್ದು, ಇದು ದೆಹಲಿಯಲ್ಲಿರುವ ಕುತುಬ್ ಮಿನಾರ್ ಸ್ಮಾರಕವನ್ನು ಮೀರಿಸಲಿದೆ. ಕುತುಬ್ ಮೀನಾರ್ 73 ಮೀಟರ್ ಎತ್ತರದಲ್ಲಿದ್ದು ಅದಕ್ಕಿಂತ 3 ಪಟ್ಟು ಹೆಚ್ಚು ಎತ್ತರವಾಗಿರುತ್ತದೆ. ಬೆಂಗಳೂರಿನ ಅತಿ ಎತ್ತರದ ಕಟ್ಟಡ ಎಂದು ನಂಬಲಾದ CNTC ಪ್ರೆಸಿಡೆನ್ಶಿಯಲ್ ಟವರ್ ಅಂದಾಜು 160 ಮೀಟರ್ ಎತ್ತರವನ್ನು ಹೊಂದಿದೆ.
ಬೆಂಗಳೂರಿನ ಹೊರಭಾಗದಲ್ಲಿರುವ ನೈಸ್ ರಸ್ತೆಯಲ್ಲಿ ನಿರ್ಮಾಣವಾಗಲಿರುವ ಸ್ಕೈಡೆಕ್ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರು ಅಲ್ಲಿಗೆ ತೆರಳಲು ಯಾವುದೇ ಅನಾನುಕೂಲತೆಯನ್ನು ಎದುರಾಗದಂತೆ ಮೆಟ್ರೋ ರೈಲಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದ್ದು ಇದಕ್ಕಾಗಿ ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ.
ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ಈ ಸ್ಕೈ ಡೆಕ್ ಯೋಜನೆಯಲ್ಲಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಹೊರತುಪಡಿಸಿ, ಇತರ ಯಾವುದೇ ವಿವರಗಳು ಇನ್ನು ಬಹಿರಂಗವಾಗಿಲ್ಲ. ಚೀನಾದ ಶಾಂಘೈನಲ್ಲಿನ 'ಶಾಂಘೈ ಟವರ್' ಪ್ರೇರಣೆಯಾಗಿಟ್ಟುಕೊಂಡು ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಸಂಸ್ಥೆ ಹಾಗೂ ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಸ್ಕೈ ಡೆಕ್ ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಿದೆ.
ಬೆಂಗಳೂರಿನ ಯಾವ ಭಾಗದಲ್ಲಿರಲಿದೆ ಸ್ಕೈಡೆಕ್?
ಬೆಂಗಳೂರು ಹೊರವಲಯದಲ್ಲಿರುವ ಹೆಮ್ಮಿಗೆಪುರದಲ್ಲಿ 25 ಎಕರೆಯನ್ನು ಸ್ಕೈ ಡೆಕ್‌ಗಾಗಿ ಆಯ್ಕೆ ಮಾಡಿದ್ದು, ಈ ಭೂಮಿಯೂ ಪ್ರಸ್ತುತ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್) ವಶದಲ್ಲಿದೆ. ಈ ಪ್ರದೇಶದ ತುರಹಳ್ಳಿ ಅರಣ್ಯ ಪ್ರದೇಶ, ಸೋಮಪುರ ಈ ಪ್ರದೇಶಕ್ಕೆ ಹೊಂದಿಕೊಂಡಿದ್ದು, ತಲಘಟ್ಟಪುರ ಮೆಟ್ರೋ ನಿಲ್ದಾಣ ಐದು ಕಿಲೋ.ಮೀಟರ್ ದೂರದಲ್ಲಿದೆ. ಈ ಪ್ರದೇಶ ಡಿ.ಕೆ ಶಿವಕುಮಾರ್ ಅವರ ವಿಧಾನಸಭೆ ಕ್ಷೇತ್ರ ಕನಕಪುರಕ್ಕೂ ಹತ್ತಿರವಾಗಿದೆ.
ಈ ಹಿಂದೆ, ಸಿವಿ ರಾಮನ್ ನಗರದಲ್ಲಿರುವ ಎನ್‌ಜಿಇಎಫ್‌ನಲ್ಲಿ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲು ಯೋಜಿಸಲಾಗಿತ್ತು, ಆದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪೈಲಟ್‌ಗಳಿಗೆ ತೊಂದರೆಯಾಗಬಹುದು ಎಂದು ಆಕ್ಷೇಪಣೆ ಎತ್ತಿದ ಹಿನ್ನೆಲೆ ಹಲವು ಸ್ಥಳಗಳ ಪರಿಶೀಲನೆ ಬಳಿಕ ಹೆಮ್ಮಿಗೆಪುರವನ್ನು ಫೈನಲ್ ಮಾಡಲಾಗಿದೆ. "ಇಡೀ ಭೂಮಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು, ಉದ್ಯಾನ, ಪಾರ್ಕಿಂಗ್ ಸ್ಥಳ ಮತ್ತು ಆಸನ ವ್ಯವಸ್ಥೆ ಶಾಪಿಂಗ್ ಮಾಲ್ ರೆಸ್ಟೋರೆಂಟ್ ಇತ್ಯಾದಿಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ." ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಆರಂಭದಲ್ಲಿ ಬೆಂಗಳೂರಿನ ಮಧ್ಯದಲ್ಲಿ ಸ್ಕೈಡೆಕ್ ಅನ್ನು ನಿರ್ಮಿಸಲು ಬಯಸಿತ್ತು. ಆದರೆ ಮೊದಲನೆಯದಾಗಿ ನಗರದ ಮಧ್ಯದಲ್ಲಿ 25 ಎಕರೆ ಭೂಮಿ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಎರಡನೆಯದಾಗಿ ಬೆಂಗಳೂರು ನಗರದ ಅನೇಕ ಪ್ರದೇಶಗಳಲ್ಲಿ ರಕ್ಷಣಾ ಸಚಿವಾಲಯ ಕಟ್ಟಡ/ಕಚೇರಿಗಳಿರುವ ಕಾರಣ ಇದು ಎತ್ತರದ ಗೋಪುರಕ್ಕೆ ಆಕ್ಷೇಪಣೆ ಸಲ್ಲಿಸಿತ್ತು.


Click it and Unblock the Notifications