ದುನಿಯಾ ಇನ್ಮುಂದೆ ಕಾಸ್ಟ್ಲಿ..ಜನರ ಜೇಬಿಗೆ ಇಂದಿನಿಂದ ಕತ್ತರಿ ಬೀಳುತ್ತಿದೆ. ಹಾಲು ವಿದ್ಯುತ್, ಕಾರು, ಟೋಲ್ ಇನ್ನೂ ಅನೇಕ ದರಗಳು ಹೆಚ್ಚಳವಾಗಿದೆ. ಜನರಿಗೆ ಬೆಲೆ ಏರಿಕೆ ಕಾವು ಸುಡುತ್ತಿದೆ ಇದರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸಕ್ಕೂ ಸುಂಕ ಸಂಗ್ರಹಣೆ ಮಾಡಲು ನಿಂತಿದೆ.ಇದರ ಜೊತೆಗೆ ಸೈಲೆಂಟ್ ಆಗಿ ಮತ್ತೊಂದು ಶಾಕ್‌ನ್ನು ಕೊಟ್ಟಿದ್ದು, ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆಯುತ್ತಿದೆ.
ಹೌದು, ಬಿಬಿಎಂಪಿ ಸದ್ದಿಲ್ಲದೆ ಮತ್ತೊಂದು ತೆರಿಗೆ ಏರಿಕೆಗೆ ಯೋಚನೆ ಮಾಡಿಕೊಂಡಿದ್ದು, ವಾಹನ ನಿಲ್ದಾಣದ ಹೆಸರಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ. ವಾಹನ ನಿಲ್ದಾಣ (Parking) ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಬಿಬಿಎಂಪಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಲಹೆ ಮತ್ತು ಅಕ್ಷೇಪಣೆಯು ಬಿಬಿಎಂಪಿ ಇದನ್ನು ಪರಿಗಣಿಸಿ, ಮುಂಬರುವ ದಿನಗಳಲ್ಲಿ ಈ ನಿರ್ಧಾರವನ್ನು ತಗೆದುಕೊಳ್ಳಲಿದೆ.

ಶುಲ್ಕ ಸಂಗ್ರಹ ಎಷ್ಟು?
ಬಿಬಿಎಂಪಿ ಮನೆಯಲ್ಲಿ, ಅಪಾರ್ಟ್‌ಮೆಂಟ್‌ಗಳು, ಕಮರ್ಷಿಯಲ್ ಕಾಂಪ್ಲೆಕ್ಸುಗಳು, ಮಾಲ್ಸ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ.
ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕಾಗಿ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ.
ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಗಾಗಿ ವಾರ್ಷಿಕ 1,125 ರೂಪಾಯಿ ಪಾರ್ಕಿಂಗ್ ತೆರಿಗೆ (ಆರಂಭಿಕ ದರ: ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಪಾರ್ಕಿಂಗ್ ತೆರಿಗೆ ಮಾದರಿಯನ್ನು ಪಾರ್ಕಿಂಗ್ ಸ್ಥಳದ ಪರಿಕರ ಹಾಗೂ ಬಳಕೆಯ ಪ್ರಕಾರ ವಿಧಿಸಲಾಗುತ್ತದೆ, ಮತ್ತು ಇದರಿಂದ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಕಡಿಮೆಯಾಗುತ್ತದೆ.
ಮೊದಲು ಬಿಬಿಎಂಪಿ ಯಾವುದೇ ಸಿಸ್ಟಮ್ಯಾಟಿಕ್ ವಿಧಾನವಿಲ್ಲದೆ, ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿತ್ತು. ಕಮರ್ಷಿಯಲ್ ಮತ್ತು ವಸತಿ ಕಟ್ಟಡಗಳ ಪ್ರಕಾರ ಆಗಾಗಲೇ ವಸೂಲಿ ಮಾಡುತ್ತಿತ್ತು. ಕಮರ್ಷಿಯಲ್ ಕಟ್ಟಡಗಳಲ್ಲಿ ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನೂ, ವಸತಿ ಕಟ್ಟಡಗಳಲ್ಲಿ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ವಿಧಿಸುತ್ತದೆ. ಆದರೆ, ಇತ್ತೀಚೆಗೆ ಬಿಬಿಎಂಪಿ ಪಾರ್ಕಿಂಗ್ಗೆ ಸಂಬಂಧಿಸಿದಂತೆ ಚದರ ಅಡಿ ಪ್ರಕಾರ ಪಾಲಿಕೆಯು ದರ ನಿಗದಿ ಮಾಡಿದೆ. ಈಗ, ಪಾರ್ಕಿಂಗ್ ಶುಲ್ಕವನ್ನು ಚದರ ಅಡಿ ಪ್ರಕಾರ, ವಸತಿ ಹಾಗೂ ವಾಣಿಜ್ಯ ಭಾಗಗಳನ್ನು ವಿಭಜಿಸಿ ನಿಗದಿಗೊಳಿಸಲಾಗಿದೆ, ಅದು ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಪರಿಕರ ಮತ್ತು ಬಳಕೆಯ ಮೇಲೆ ನಿರ್ಧಾರವಾಗುತ್ತದೆ.
BBMP 4,800 ಕೋಟಿ ಆಸ್ತಿ ತೆರಿಗೆ ಸಂಗ್ರಹ
2023-24ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 4,800 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಮಾಡಿ ದೇಶದಲ್ಲೇ ದೊಡ್ಡ ದಾಖಲೆಯನ್ನು ಮಾಡಿದೆ.
ಹಣಕಾಸು ವರ್ಷದ ಕೊನೆ ತಿಂಗಳು ಮಾರ್ಚ್ 30 ರವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 4,800 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ. ಸಂಗ್ರಹವಾದ ತೆರಿಗೆಯನ್ನು ಎ.3ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.ಈ ತೆರಿಗೆ ಸಂಗ್ರಹವು ನಗರದ ಅಭಿವೃದ್ದಿಗೆ ಬಳಸಲು, ಸಾರ್ವಜನಿಕ ಸೇವೆಗಳನ್ನು ಹೆಚ್ಚಿಸಲು ಹಾಗೂ ಮೆಚ್ಚುಗೆಗೆ ಒಳಪಟ್ಟ ಯೋಜನೆಗಳನ್ನು ಜಾರಿಗೆ ತರಲು ಮಹತ್ವಪೂರ್ಣವಾಗಿದೆ.
ಈ ಕುರಿತು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, 2024-25ರಲ್ಲಿ ಆಸ್ತಿ ತೆರಿಗೆ ಗುರಿ 5,200 ಕೋಟಿ ರೂ. ಇದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.


Click it and Unblock the Notifications