ವೇತನ ಪರಿಷ್ಕರಣೆಗೆ ಆಗ್ರಹಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸಿಬ್ಬಂದಿ ಒಕ್ಕೂಟ ನಡೆಸಿದ ಎರಡು ದಿನಗಳ ರಾಷ್ಟ್ರ ಮಟ್ಟದ ಬಂದ್ ಭಾರೀ ಪರಿಣಾಮ ಬೀರಿದೆ. ಬ್ಯಾಂಕಿಂಗ್ ಚಟುವಟಿಕೆಗಳು ಸ್ತಬ್ಧವಾಗಿದ್ದವು, ನಗದು ವಿಥ್ ಡ್ರಾ ಮತ್ತು ಚೆಕ್ ಕ್ಲಿಯರೆನ್ಸ್ ಸಮಸ್ಯೆಯಾಯಿತು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಿಂದ (ಯುಎಫ್ ಬಿಯು) ಈ ಬಂದ್ ಕರೆ ನೀಡಲಾಗಿತ್ತು.
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ವರ್ಕರ್ಸ್... ಈ ಎಲ್ಲ ಒಕ್ಕೂಟಗಳನ್ನು ಒಳಗೊಂಡಿದ್ದು ಯುಎಫ್ ಬಿಯು. ಕಳೆದ ಎರಡು ವರ್ಷಗಳಿಂದ ವೇತನ ಪರಿಷ್ಕರಣೆ ಬಾಕಿ ಇದ್ದು, ಅದಕ್ಕಾಗಿ ಒತ್ತಾಯಿಸಲು ಈ ಬಂದ್ ಕರೆ ನೀಡಲಾಗಿತ್ತು.
ಆದರೆ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ನಂಥ ಖಾಸಗಿ ಬ್ಯಾಂಕ್ ಗಳು ಮಾಮೂಲಿನಂತೆ ಕಾರ್ಯ ನಿರ್ವಹಿಸಿದವು. ಆದರೆ ದೇಶಾದ್ಯಂತ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಶಾಖೆಗಳು ಮುಚ್ಚಿದ್ದವು ಮತ್ತು ಕೆಲವು ಎಟಿಎಂಗಳು ಹಣ ಇಲ್ಲದೆ ಖಾಲಿಖಾಲಿಯಾಗಿದ್ದವು ಎಂದು ನಾನಾ ವರದಿಗಳು ಬಂದಿವೆ.

ಎಸ್ ಬಿಐ ಸೇರಿದಂತೆ ವಿವಿಧ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಬಂದ್ ಬಗ್ಗೆ ಮಾಹಿತಿ ನೀಡಿದ್ದವು. ವಹಿವಾಟಿನಲ್ಲಿ ವ್ಯತ್ಯಯ ಆಗುವ ವಿಚಾರ ಮುಂಚೆಯೇ ತಿಳಿಸಿದ್ದವು. ಈಚೆಗೆ ಯುಎಫ್ ಬಿಯುನಿಂದ ಭಾರತೀಯ ಬ್ಯಾಂಕ್ ಗಳ ಒಕ್ಕೂಟದ (ಐಬಿಎ) ಜತೆ ಮಾತುಕತೆ ನಡೆಸಲಾಗಿತ್ತು. ಆದರೆ ಅದು ಫಲಪ್ರದವಾಗಿರಲಿಲ್ಲ.
ಹನ್ನೆರಡೂವರೆ ಪರ್ಸೆಂಟ್ ವೇತನ ಹೆಚ್ಚಳ ಮಾಡುವುದಾಗಿ ಐಬಿಎ ಹೇಳಿತ್ತು. ಆದರೆ ಅದನ್ನು ಸಿಬ್ಬಂದಿ ಒಕ್ಕೂಟ ಒಪ್ಪಿರಲಿಲ್ಲ. ಪರ್ಫಾಮೆನ್ಸ್ ಆಧಾರಿತ ಇನ್ಸೆಂಟಿವ್ ಸೇರಿ ಹತ್ತೊಂಬತ್ತು ಪರ್ಸೆಂಟ್ ಹೆಚ್ಚಳದ ಆಫರ್ ನೀಡಿದರೂ ಸಿಬ್ಬಂದಿ ಒಕ್ಕೂಟ ಒಪ್ಪಲಿಲ್ಲ ಎಂದು ಐಬಿಎ ಹೇಳಿಕೆ ನೀಡಿತ್ತು. ಅಂದ ಹಾಗೆ ಕಳೆದ ಬಾರಿ ಅಂದರೆ 2012ರಿಂದ 2017ರ ಅವಧಿಗೆ 15 ಪರ್ಸೆಂಟ್ ವೇತನ ಹೆಚ್ಚಳ ಆಗಿತ್ತು.
ಇನ್ನು ವಾರಕ್ಕೆ ಐದು ದಿನಗಳ ಕೆಲಸ ಮಾಡುವ ಸಿಬ್ಬಂದಿ ಬೇಡಿಕೆಯನ್ನು ಐಬಿಎ ತಿರಸ್ಕರಿಸಿದೆ. ಬ್ಯಾಂಕ್ ಗಳಿಗೆ ಈಗಾಗಲೇ ಅತಿ ಹೆಚ್ಚು ರಜಾ ದಿನಗಳು ಇವೆ. ಜತೆಗೆ ಹೆಚ್ಚುವರಿಯಾಗಿ ಇಪ್ಪತ್ತಾರು ದಿನ ಸೇರ್ಪಡೆಯಾದರೆ ಸಮಸ್ಯೆಯಾಗುತ್ತದೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಸಮಯದಲ್ಲಿ ಇಂಥ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.


Click it and Unblock the Notifications