ಯಾವುದೇ ಹಬ್ಬಗಳು ಬರಲಿ, ಯಾವುದೇ ಕಾರ್ಯಕ್ರಮಗಳಿರಲಿ ಸಾರ್ವತ್ರಿಕ ರಜೆ ಘೋಷಿಸಲಾಗುತ್ತದೆ. ಆದ್ರೆ ಈ ವೇಳೆ ಬ್ಯಾಂಕ್‌ಗಳಿಗೂ ರಜೆ (Bank Holidays) ನೀಡಲಾಗುತ್ತದೆ. ಕೆಲವು ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಘೋಷಿಸಿದರೆ, ಇನ್ನೂ ಕೆಲವೊಮ್ಮೆ ಸ್ಥಳೀಯ ಹಬ್ಬಗಳಿಗೆ ಸಂಬಂಧಿಸಿ ರಜೆ ನೀಡಲಾಗುತ್ತದೆ. ಈಗಾಗಲೇ ಫೆಬ್ರವರಿ ತಿಂಗಳ ಎರಡು ವಾರ ಕಳೆದಾಯ್ತು. ನಾಳೆಯಿಂದ ಮೂರನೇ ವಾರ ಆರಂಭವಾಗಲಿದೆ. ಹಾಗಿದ್ರೆ ಮುಂದಿನ ವಾರದಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2026ರ ಫೆಬ್ರವರಿ ತಿಂಗಳ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಪ್ರಕಟಿಸಿದೆ. ಈ ತಿಂಗಳಲ್ಲಿ ಒಟ್ಟು ಒಂಭತ್ತು ದಿನ ಬ್ಯಾಂಕ್‌ಗಳು ಬಂದ್ ಇರಲಿದೆ ಎಂದು ಹೇಳಲಾಗಿದೆ. ಫೆಬ್ರವರಿಯಲ್ಲಿ ಎರಡನೇ, ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳು ಸಹ ರಜೆ ಇರಲಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳಿಗೂ ಇದು ಅನ್ವಯಿಸುತ್ತದೆ.
ಮುಂದಿನ ವಾರ, ಫೆಬ್ರವರಿ 18, 19, 20 ಮತ್ತು 22 ರಂದು ದೇಶಾದ್ಯಂತದ ಬ್ಯಾಂಕ್‌ಗಳು ನಾಲ್ಕು ದಿನಗಳ ಕಾಲ ಮುಚ್ಚಿರುತ್ತದೆ ಎಂದು ಹೇಳಲಾಗಿದೆ. ಲೋಸರ್, ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ರಾಜ್ಯ ದಿನ ಮತ್ತು ಭಾನುವಾರದ ವಾರಾಂತ್ಯ ರಜೆ ಈ ಅವಧಿಯಲ್ಲಿ ಬರುತ್ತವೆ. ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸೇರಿದಂತೆ ಎಲ್ಲ ಬ್ಯಾಂಕ್‌ಗಳಿಗೂ ಈ ರಜೆ ಅನ್ವಯವಾಗುತ್ತದೆ.
ಫೆಬ್ರವರಿ 18, ಬುಧವಾರದಂದು ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಲೋಸರ್ ಹಬ್ಬದ ನಿಮಿತ್ತ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದು ಟಿಬೆಟಿಯನ್ ಸಮುದಾಯದ ಪ್ರಮುಖ ಹಬ್ಬವಾಗಿದೆ. ಇದನ್ನು "ಟಿಬೆಟಿಯನ್ ಹೊಸ ವರ್ಷ" ಎಂದು ಹೇಳಲಾಗುತ್ತದೆ. ಇದು ಹೊಸ ವರ್ಷಾಚರಣೆಯ ಭಾಗವಾಗಿದ್ದು, 'ಲೋಸರ್ ಚಾಮ್' ಎಂಬ ಸಾಂಪ್ರದಾಯಿಕ ಮುಖವಾಡ ನೃತ್ಯದ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಫೆಬ್ರವರಿ 19, ಗುರುವಾರ ಮಹಾರಾಷ್ಟ್ರದ ಮುಂಬೈ, ನಾಗ್ಪುರ ಮತ್ತು ಬೆಲಾಪುರ್‌ಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎನ್ನಲಾಗಿದೆ. ಭಾರತದ ಶ್ರೇಷ್ಠ ಯೋಧರು ಹಾಗೂ ಆಡಳಿತಗಾರರಲ್ಲೊಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಅವರ ಪರಂಪರೆಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.
ಫೆಬ್ರವರಿ 20, ಶುಕ್ರವಾರದಂದು ಮಿಜೋರಾಂನ ಐಜ್ವಾಲ್ ಮತ್ತು ಮಣಿಪುರದ ಇಂಫಾಲ್‌ನಲ್ಲಿ ರಾಜ್ಯ ದಿನಾಚರಣೆಗಾಗಿ ಬ್ಯಾಂಕ್‌ಗಳು ಬಂದ್ ಆಗಲಿವೆ.
ಇನ್ನು ಫೆಬ್ರವರಿ 21, ಶನಿವಾರ ಬಂದರೂ, ನಾಲ್ಕನೇ ಶನಿವಾರವಲ್ಲದ ಕಾರಣ ಬ್ಯಾಂಕ್‌ಗಳು ಸಾಮಾನ್ಯವಾಗಿ ತೆರೆದಿರುತ್ತದೆ. ಆದ್ರೆ 22ನೇ ತಾರೀಕು, ಭಾನುವಾರವಾದ ಕಾರಣ ಮತ್ತೆ ರಜೆ ಇರಲಿದೆ. ಇನ್ನು ಕರ್ನಾಟಕದಲ್ಲಿ ಮುಂದಿನ ವಾರ ಬ್ಯಾಂಕ್‌ಗಳಿಗೆ ಯಾವುದೇ ರಜೆ ಘೋಷಣೆ ಮಾಡಲಾಗಿಲ್ಲ.
ಸಾಮಾನ್ಯವಾಗಿ, ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ರಾಜ್ಯವಾರು ಮತ್ತು ಸ್ಥಳೀಯ ಅಗತ್ಯತೆಗಳ ಆಧಾರದ ಮೇಲೆ, ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿ ಮುಗಿಸುವಂತೆ ಈ ಘೋಷಣೆ ಮಾಡಲಾಗುತ್ತದೆ.
ಬ್ಯಾಂಕ್‌ಗಳು ಮುಚ್ಚಿದ್ದರೂ, ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತದೆ. ತಾಂತ್ರಿಕ ಕಾರಣಗಳಿಂದ ಹೊರತುಪಡಿಸಿ, ಗ್ರಾಹಕರು ಯಾವುದೇ ಅಡಚಣೆಯಿಲ್ಲದೆ ಈ ಸೇವೆಗಳನ್ನು ಬಳಸಬಹುದು. ನಗದು ಅಗತ್ಯತೆಗಳಿಗಾಗಿ, ಎಟಿಎಂಗಳನ್ನು ಬಳಸಬಹುದು. ಅಲ್ಲದೇ ಯಾವುದೇ ಪೇಮೆಂಟ್‌ಗಳಿಗಾಗಿ ಯುಪಿಐ ಆಧಾರಿತ ಸೇವೆಯನ್ನು ಬಳಸಬಹುದಾಗಿದೆ.


Click it and Unblock the Notifications