ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಬದಲಾವಣೆಗಳು ಸಾಮಾನ್ಯವಾಗಿ ತಿಂಗಳ ಆರಂಭದಿಂದ ಜಾರಿಗೆ ಬರುತ್ತದೆ. ಅದೇ ರೀತಿ ಮೇ ೧ ರಿಂದ ಹಲವು ಬದಲಾವಣೆಗಳು ಆಗಲಿದ್ದು, ಬ್ಯಾಂಕ್ ರಜಾದಿನ, ಎಟಿಎಂ ಹಣ ಹಿಂಪಡೆಯುವ ಶುಲ್ಕ್ ಇತ್ಯಾದಿಗಳು ನಾಳೆ ಜಾರಿಗೆ ಬರಲಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಂದು ರಾಜ್ಯ-ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿಗೆ ಹಸಿರು ನಿಶಾನೆ ತೋರಿಸಿತ್ತು. ಇದರ ಅಡಿಯಲ್ಲಿ, ಮೇ 1ರಿಂದ ದೇಶಾದ್ಯಂತ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 15 ಬ್ಯಾಂಕುಗಳು ವಿಲೀನಗೊಳ್ಳಲಿವೆ. ಈ ವಿಲೀನವು ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುವುದು ಸರ್ಕಾರದ ನಿಲುವು.

ಬ್ಯಾಂಕ್ ಗಳ ವಿಲೀನವೇಕೆ?
ಈ ವಿಲೀನ ಪ್ರಕ್ರಿಯೆಯು ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವುದು ಇದರ ಮುಖ್ಯ ಗುರಿಯಾಗಿದೆ. ವಿಲೀನದಿಂದಾಗಿ, ಪ್ರಸ್ತುತ 43 ರಷ್ಟಿರುವ ಬ್ಯಾಂಕುಗಳ ಸಂಖ್ಯೆ 28 ಕ್ಕೆ ಇಳಿಯುತ್ತದೆ. ವಿಲೀನವಾಗಲಿರುವ 15 ಬ್ಯಾಂಕುಗಳು ದೇಶದ ವಿವಿಧ ರಾಜ್ಯಗಳಾದ ಕರ್ನಾಟಕ,ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬ್ಯಾಂಕುಗಳ ಈ ವಿಲೀನವು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಒಂದು ಹೊಸ ಆಯಾಮವನ್ನು ನೀಡುವ ನಿರೀಕ್ಷೆಯಿದೆ. ವಿಶೇಷವಾಗಿ, ವಿಲೀನಗೊಂಡ ಬ್ಯಾಂಕುಗಳು ಒಂದೇ ರೀತಿಯ IFSC ಮತ್ತು MICR ಕೋಡ್‌ಗಳನ್ನು ಹೊಂದಿರುವುದರಿಂದ, ಹಣಕಾಸಿನ ವಹಿವಾಟುಗಳು ಹೆಚ್ಚು ಸುಗಮವಾಗುತ್ತವೆ. ಇದರೊಂದಿಗೆ, ಸಾಲ ಮಂಜೂರು ಮಾಡುವ ಪ್ರಕ್ರಿಯೆಯೂ ಸರಳ ಮತ್ತು ತ್ವರಿತಗೊಳ್ಳುವ ಸಾಧ್ಯತೆ ಇದೆ.
ಯಾವುದರೊಂದಿಗೆ ವಿಲೀನ?
ಈ RRBಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976 ರ ಸೆಕ್ಷನ್ 23A(1) ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅಡಿಯಲ್ಲಿ ಒಂದೇ ಘಟಕವಾಗಿ ಸಂಯೋಜಿಸಲಾಗುತ್ತದೆ. ಅದೇ ಅನುಕ್ರಮದಲ್ಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿದ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಮತ್ತು ಆಂಧ್ರಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ಅನ್ನು ರಚಿಸಲಾಗುತ್ತದೆ.
ಇನ್ನು ಕರ್ನಾಟಕ ರಾಜ್ಯಕ್ಕೆ ಬರುವುದಾದರೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಬ ಒಂದೇ ಘಟಕವನ್ನು ರೂಪಿಸಲಾಗುವುದು, ಇದು ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಕೆನರಾ ಬ್ಯಾಂಕ್ ಪ್ರಾಯೋಜಿಸಲಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
ಧಾರವಾಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಸ್ತುತ 629 ಶಾಖೆಗಳ ಜಾಲವನ್ನು ಹೊಂದಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 17,647 ಕೋಟಿ ರೂ. ಠೇವಣಿ ಮತ್ತು 13,101 ಕೋಟಿ ರೂ. ಮುಂಗಡಗಳನ್ನು ಒಳಗೊಂಡ ಒಟ್ಟು 30,748 ಕೋಟಿ ರೂ. ವ್ಯವಹಾರವನ್ನು ಹೊಂದಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬೆಂಗಳೂರು, ಮಂಡ್ಯ, ಮೈಸೂರು, ಬಳ್ಳಾರಿ ಮತ್ತು ಚಿತ್ರದುರ್ಗ ಸೇರಿದಂತೆ ಕರ್ನಾಟಕದ 19 ಜಿಲ್ಲೆಗಳಲ್ಲಿ 1,122 ಶಾಖೆಗಳ ಜಾಲವನ್ನು ಬ್ಯಾಂಕ್ ಹೊಂದಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಭಾರತದ ಎರಡನೇ ಅತಿದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿದ್ದು, ಮಾರ್ಚ್ 2024 ರ ಅಂತ್ಯದ ವೇಳೆಗೆ 63,697 ಕೋಟಿ ರೂ. ವ್ಯವಹಾರವನ್ನು ಹೊಂದಿದೆ. ಕಂಪನಿಯ ಠೇವಣಿಗಳು 34,462 ಕೋಟಿ ರೂ.ಗಳಷ್ಟಿದ್ದರೆ, ಮುಂಗಡಗಳು 29,235 ಕೋಟಿ ರೂ.ಗಳಷ್ಟಿವೆ.
ಬ್ಯಾಂಕುಗಳ ವಿಲೀನದಿಂದ ಏನಾಗುತ್ತದೆ?
ಸಾಮಾನ್ಯವಾಗಿ ಬ್ಯಾಂಕುಗಳ ವಿಲೀನವು ಬ್ಯಾಂಕ್ ಖಾತೆದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಗ್ರಾಹಕರಿಗೆ ಚಿಂತೆ ಕಾಡತೊಡಗುತ್ತದೆ. ಬ್ಯಾಂಕುಗಳ ವಿಲೀನದಿಂದ ಗ್ರಾಹಕರು ಕೆಲವು ಬದಲಾವಣೆಗಳನ್ನು ಕಾಣಬಹುದು. ಆದ್ರೆ ಅವರ ಠೇವಣಿ ಹಣ, ಉಳಿತಾಯ ಅಥವಾ ಸಾಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಯಾಂಕುಗಳ ವಿಲೀನದಿಂದ ಸ್ವಲ್ಪ ಮಟ್ಟಿಗೆ ಕಾಗದದ ಕೆಲಸ ಹೆಚ್ಚಾಗಬಹುದು. ಅವರ ಬ್ಯಾಂಕಿನ ಹೆಸರು ಮತ್ತು IFSC ಕೋಡ್ ಬದಲಾಗಬಹುದು. ವಿಲೀನದ ನಂತರ ರಚನೆಯಾದ ಹೊಸ ಬ್ಯಾಂಕಿನ ಪಾಸ್‌ಬುಕ್ ಮತ್ತು ಚೆಕ್‌ಬುಕ್ ಅನ್ನು ಪಡೆಯಬೇಕಾಗಬಹುದು. ಖಾತೆದಾರರ ಹಳೆಯ ಕಸ್ಟಮರ್ ಐಡಿ ಅಥವಾ ಖಾತೆ ಸಂಖ್ಯೆಯಲ್ಲೂ ಬದಲಾವಣೆಗಳಾಗಬಹುದು.
ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ, ಬ್ಯಾಂಕುಗಳ ವಿಲೀನದಿಂದ ಅವರ ಖಾತೆಯಲ್ಲಿರುವ ಹಣ, ಬ್ಯಾಂಕ್ ಬ್ಯಾಲೆನ್ಸ್, ಸ್ಥಿರ ಠೇವಣಿ (FD), ಆವರ್ತಕ ಠೇವಣಿ (RD) ಅಥವಾ ಸಾಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.


Click it and Unblock the Notifications