ಬ್ಯಾಂಕ್‌ನಿಂದ ನಾವು ಶಿಕ್ಷಣ ಸಾಲ ಅಥವಾ ಯಾವುದೇ ಸಾಲವನ್ನು ಪಡೆಯುವುದಾದರೂ ಕೂಡಾ ಸಿಬಿಲ್ ಸ್ಕೋರ್ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಮಾತ್ರ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಸಿಬಿಲ್ ಸ್ಕೋರ್ ಇಲ್ಲದ ಕಾರಣದಿಂದಾಗಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಸಾಲ ಪಡೆಯುವಾಗ ಸಂಕಷ್ಟಕ್ಕೆ ಒಳಗಾಗುವುದು ಇದೆ.
ಈ ವಿಚಾರದ ಮೇಲೆ ಬೆಳಕು ಚೆಲ್ಲಿರುವ ಕೇರಳ ಹೈಕೋರ್ಟ್ ಇತ್ತೀಚೆಗೆ ಅತೀ ಮಹತ್ವವಾದ ತೀರ್ಪನ್ನು ನೀಡಿದೆ. ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲು ನಿರಾಕರಿಸುವ ಬ್ಯಾಂಕ್‌ಗಳಿಗೆ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಪಿವಿ ಕುನ್ನಿಕೃಷ್ಣನ್ ಛೀಮಾರಿ ಹಾಕಿದ್ದಾರೆ. ಬರೀ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಬ್ಯಾಂಕ್‌ಗಳು ನಿರಾಕರಿಸಬಾರದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸಾಲವನ್ನು ನೀಡುವ ಸಂದರ್ಭ ಬಂದಾಗ ಅರ್ಜಿಗಳನ್ನು ಪರಿಶೀಲನೆ ಮಾಡುವಾಗ ಬ್ಯಾಂಕುಗಳು ಕೊಂಚ ಸಹಾನುಭೂತಿಯನ್ನು ಹೊಂದಿರಬೇಕು. ಬರೀ ಸಿಬಿಲ್ ಸ್ಕೋರ್ ಆಧಾರದಲ್ಲಿ ಶಿಕ್ಷಣ ಸಾಲವನ್ನು ನೀಡಲು ನಿರಾಕರಿಸಬಾರದು ಎಂದು ನ್ಯಾಯಮೂರ್ತಿಗಳು ಒತ್ತಿ ಹೇಳಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿದೆ. ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾಲು ಅತೀ ಮುಖ್ಯವಾಗಿರುತ್ತದೆ. ಬರೀ ಸಿಬಿಲ್ ಸ್ಕೋರ್ ಕಡಿಮೆ ಕಡಿಮೆಯಾಗಿದೆ ಎಂದು ಶಿಕ್ಷಣ ಸಾಲವನ್ನು ನೀಡದಿರುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಮಾನವೀಯತೆ ಅಂಶಗಳನ್ನು ಕೂಡಾ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿದೆ.
ಈ ಕಾನೂನು ಹಸ್ತಕ್ಷೇಪಕ್ಕೆ ಕಾರಣವೇನು?
ಅರ್ಜಿದಾರ ವಿದ್ಯಾರ್ಥಿಯು ಎರಡು ಬಾಕಿ ಸಾಲಗಳನ್ನು ಹೊಂದಿದ್ದು, ಒಂದು ಸಾಲದ ಮೊತ್ತವು 16,667 ರೂಪಾಯಿ ಆಗಿದೆ. ಪರಿಣಾಮವಾಗಿ, ಬ್ಯಾಂಕ್ ವಿದ್ಯಾರ್ಥಿಯ ಸಾಲದ ಖಾತೆಯನ್ನು ಓವರ್ ಡ್ಯೂ ಎಂದು ಪರಿಗಣಿಸಿದೆ, ಇದು ವಿದ್ಯಾರ್ಥಿಯ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಉಂಟು ಮಾಡಿದೆ.
ಹೀಗಿರುವಾಗ ವಿದ್ಯಾರ್ಥಿಯು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂಬ ಕಾರಣದಿಂದಾಗಿ ಶಿಕ್ಷಣ ಸಾಲ ಅನುಮೋದನೆ ಮಾಡಲಾಗಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಯು ಶಿಕ್ಷಣದ ಮೇಲೆ ಉಂಟಾಗುವ ಕೆಟ್ಟ ಪರಿಣಾಮವನ್ನು ತಪ್ಪಿಸಲು ಸಾಲಕ್ಕೆ ತುರ್ತಾಗಿ ಅನುಮೋದನೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಈ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಪರಿಶೀಲನೆ ಮಾಡಿದ ಕೇರಳ ಹೈಕೋರ್ಟ್ ಬ್ಯಾಂಕ್‌ಗಳು ಆ ವಿದ್ಯಾರ್ಥಿಯು ಶಿಕ್ಷಣ ಪೂರ್ಣವಾದ ಬಳಿಕ ಸಾಲವನ್ನು ಪಾವತಿಸುವ ಸಾಮರ್ಥ್ಯವನ್ನು ನೋಡಬೇಕು, ಬರೀ ಈಗ ಇರುವ ಸಿಬಿಲ್ ಸ್ಕೋರ್ ಆಧಾರದಲ್ಲಿ ಶಿಕ್ಷಣ ಸಾಲ ನೀಡಬಹುದೇ ಎಂದು ಪರಿಶೀಲನೆ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ.
ಸಿಬಿಲ್ ಸ್ಕೋರ್ ಅನ್ನು ನಿರ್ವಹಿಸುವ ಪ್ರಾಮುಖ್ಯತೆ
ಜೀವನದಲ್ಲಿ ನಾವು ಸಾಲವನ್ನು ಪಡೆಯಬೇಕಾದ ತೀರ ಅಗತ್ಯ ಸಂದರ್ಭದಲ್ಲಿ ಬರುತ್ತದೆ. ಶಿಕ್ಷಣ, ಗೃಹ, ಕಾರು ಮೊದಲಾದ ಸಾಲಗಳನ್ನು ನಾವು ಪಡೆಯಬೇಕಾಗುತ್ತದೆ. ಇಂತಹ ಸಾಲವನ್ನು ಅನುಮೋದನೆ ಮಾಡುವ ಮುನ್ನ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡುತ್ತದೆ. ನಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದರೆ ಕೆಲವು ಸಂದರ್ಭದಲ್ಲಿ ಸಾಲ ಲಭ್ಯವಾಗುವುದಿಲ್ಲ, ಸಾಲ ಲಭ್ಯವಾದರೂ ಕೂಡಾ ಅಧಿಕ ಬಡ್ಡಿದರ ಇರುತ್ತದೆ.
ನಮಗೆ ಸಾಲವು ಕಡಿಮೆ ಬಡ್ಡಿದರದಲ್ಲಿ ಅಡೆತಡೆ ಇಲ್ಲದೆ ಲಭ್ಯವಾಗಬೇಕಾದರೆ ಸಿಬಿಲ್ ಸ್ಕೋರ್ ಹೆಚ್ಚಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ನಾವು ಈ ಹಿಂದೆ ಯಾವುದೆ ಸಾಲವನ್ನು ಪಡೆದಿದ್ದರೆ ಅಥವಾ ಕ್ರೆಡಿಟ್ ಕಾರ್ಡ್ ಇದ್ದರೆ ಅದರ ಮರುಪಾವತಿಯನ್ನು ನಾವು ಸಮಯಕ್ಕೆ ಸರಿಯಾಗಿ ಮಾಡಬೇಕಾಗುತ್ತದೆ.


Click it and Unblock the Notifications