ಬೆಂಗಳೂರು, ಮೇ 27: ಶ್ವಾನ ಮತ್ತು ಮನುಷ್ಯರ ನಡುವೆ ಸದಾ ಉತ್ತಮ ಸಂಬಂಧ ಇರುತ್ತವೆ. ಬಹುತೇಕರ ಮನೆಯಲ್ಲಿ ಶ್ವಾನಗಳು ಮನೆ ಮಕ್ಕಳಂತೆ ಬೆಳೆಯುವ ಸಂಗತಿಗಳೇನು ಹೊಸದಲ್ಲ. ಆದರೆ ಶ್ವಾನ ಪ್ರಿಯರು ಪ್ರಯಾಣದ ಸಂದರ್ಭದಲ್ಲಿ ತಮ್ಮ ಮುದ್ದು ನಾಯಿಯನ್ನು ಕೊಂಡೊಯ್ಯಲಾಗದೇ ಬೇಸರಿಸುತ್ತಾರೆ. ಇಂತವರನ್ನು ಗಮನದಲ್ಲಿಟ್ಟುಕೊಂಡು ಇದೀಗ ಬಾರ್ಕ್ ಏರ್ ಎಂಬ ವಿಮಾನಯಾನ ಸಂಸ್ಥೆ ವಿಮಾನ ಹಾರಾಟವನ್ನು ಆರಂಭಿಸಿದ್ದು ಇದರಲ್ಲಿ ಶ್ವಾನಗಳೇ ಮುಖ್ಯ ಪ್ರಯಾಣಿಕರಾಗಿರುತ್ತವೆ.
ಈಗಾಗಲೇ ಇದು ತನ್ನ ಮೊದಲ ಹಾರಾಟವನ್ನು ಆರಂಭಿಸಿದ್ದು, ಬಾರ್ಕ್ ಏರ್ ಸಂಪೂರ್ಣವಾಗಿ ನಾಯಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ವಿಮಾನಯಾನ ಸಂಸ್ಥೆಯಾಗಿದೆ. ಇದರಲ್ಲಿ, ನಾಯಿಗಳು ಮತ್ತು ಅವುಗಳ ಮಾಲೀಕರು ತಮ್ಮ ವಿಮಾನ ಪ್ರಯಾಣವನ್ನು ಆನಂದಿಸಬಹುದು. ನಾಯಿ ಆಟಿಕೆ ಕಂಪನಿ ಬಾರ್ಕ್ ಈ ಸೇವೆಯನ್ನು ಆರಂಭಿಸಲು ಜೆಟ್ ಚಾರ್ಟರ್ ಜೊತೆ ಕೈಜೋಡಿಸಿದೆ.

ಪಾರ್ಕ್ ಏರ್ ಶ್ವಾನಗಳಿಗೆ ಮೀಸಲಾದ ತನ್ನ ಮೊದಲ ವಿಮಾನಯಾನ ಅಮೇರಿಕಾದಲ್ಲಿ ಪ್ರಾರಂಭಿಸಿದೆ. ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್‌ಗೆ ಮೊದಲ ವಿಮಾನ ಹಾರಾಟ ನಡೆಸಿದ್ದು, ಮೊದಲ ಬಾರಿಗೆ ನಾಯಿಗಳಿಗೆ ಮನುಷ್ಯರಿಗೆ ಸಮಾನವಾದ ಆಸನಗಳನ್ನು ನಿಗದಿಪಡಿಸಲಾಗಿದೆ. ಹೀಗಾಗಿ ನಾಯಿಗಳಿಗೂ ಆರಾಮದಾಯ ವಿಮಾನ ಪ್ರಯಾಣದ ಅನುಭವ ಸಿಕ್ಕಿದೆ.
ಬಾರ್ಕ್ ಏರ್ ಇತ್ತೀಚಿನ Instagram ಪೋಸ್ಟ್‌ನ ಮೂಲಕ ಗುರುವಾರ ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್‌ಗೆ ಟೇಕ್ ಆಫ್ ಆದ ತಮ್ಮ ಮೊದಲ ವಿಮಾನದ ಬಗ್ಗೆ ರೋಚಕ ಸುದ್ದಿಯನ್ನು ಹಂಚಿಕೊಂಡಿದೆ. "ಸದ್ಯ, 30,000 ಅಡಿ ಎತ್ತರದಲ್ಲಿ, ನಾಯಿಗಳಿಂದ ತುಂಬಿದ ವಿಮಾನವಿದೆ. ಇಡೀ ವಿಮಾನವು ಅಲ್ಲಾಡಿಸುತ್ತಿರುವ ಶ್ವಾನಗಳ ಬಾಲಗಳೊಂದಿಗೆ ಮೋಡಗಳ ಮೇಲೆ ಪ್ರಯಾಣಿಸುತ್ತಿದೆ!" ಎಂದು ಪೋಸ್ಟ್ ಪ್ರಕಟಿಸಿದೆ. ನಾಯಿಗಳನ್ನು ಆರಾಮದಾಯಕವಾಗಿಸಲು ಇಂತಹ ಪರಿಕಲ್ಪನೆಯನ್ನು ತಂದಿದೆ ಎಂದು ಬಾರ್ಕ್ ಏರ್ ತಿಳಿಸಿದೆ. ಸುಮಾರು 10 ವರ್ಷಗಳಿಂದ ಈ ಬಗ್ಗೆ ಚಿಂತನೆ ನಡೆಸಿ ಈ ಸೇವೆಯನ್ನು ತರಲು ಸಾಕಷ್ಟು ಪ್ರಯತ್ನ ನಡೆಸಿದೆ ಎಂದು ಹೇಳಿದೆ.
ಈ ಚೊಚ್ಚಲ ವಿಮಾನದಲ್ಲಿ ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಿದವರು ಬಾರ್ ಏರ್ ಉತ್ತಮ ಅನುಭವವನ್ನು ಶ್ಲಾಘಿಸಿದ್ದಾರೆ. ಬಾರ್ಕ್ ಏರ್‌ನ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ಇದು ನಾಯಿಗಳಿಗಾಗಿ ಪ್ರತ್ಯೇಕವಾಗಿ ಪ್ರಾರಂಭಿಸಲಾದ ವಿಮಾನಯಾನ ಸಂಸ್ಥೆಯಾಗಿದೆ .ವಿಮಾನದಲ್ಲಿ ನಾಯಿಗಳಿಗೆ ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ, ಯಾವುದೇ ರೀತಿಯ ನಾಯಿ ಮತ್ತು ಯಾವುದೇ ಗಾತ್ರದ ಶ್ವಾನಗಳು ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
ಇದು ಪ್ರಸ್ತುತ ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್‌ನಿಂದ ಲಂಡನ್‌ಗೆ ಎರಡು ಮಾರ್ಗಗಳಲ್ಲಿ ವಿಮಾನಗಳನ್ನು ನಿರ್ವಹಿಸುತ್ತದೆ. ಶೀಘ್ರದಲ್ಲೇ ವಿವಿಧ ವಿಮಾನ ಮಾರ್ಗಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ವರದಿಯಾಗಿದೆ.
ಬಾರ್ಕ್, ನಾಯಿ ಆಹಾರ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುವ 2011 ರಲ್ಲಿ ಪ್ರಾರಂಭವಾದ ಕಂಪನಿಯಾಗಿದೆ. ಇದು ಕೇವಲ ಒಂದು ತಿಂಗಳ ಹಿಂದೆ ತನ್ನ ಹೊಸ ವಾಯುಯಾನ ಉದ್ಯಮವನ್ನು ಘೋಷಿಸಿತ್ತು.
ಒಂದು ವಿಮಾನದಲ್ಲಿ 15 ಶ್ವಾನಗಳು ಮತ್ತು ಅವುಗಳ ಮಾಲೀಕರು ಪ್ರಯಾಣಿಸಬಹುದು. ಯುನೈಟೆಡ್ ಸ್ಟೇಟ್ಸ್‌ನೊಳಗಿನ ದೇಶೀಯ ವಿಮಾನಗಳ ಟಿಕೆಟ್‌ನ ಬೆಲೆ $6,000 ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್‌ನ ಬೆಲೆ $8,000 ಆಗಿದೆ. ಬಾರ್ಕ್ ಏರ್ ಹೆಚ್ಚುವರಿ ಮಾರ್ಗಗಳನ್ನು ಸೇರಿಸುವುದರಿಂದ ವಿಮಾನ ದರವನ್ನು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಿದೆ.


Click it and Unblock the Notifications