ಮಾಧ್ಯಮ ಸಂಸ್ಥೆ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ನಿಂದ (ಬಿಬಿಸಿ) ನಾನೂರಾ ಐವತ್ತು ಮಂದಿ ಸುದ್ದಿಮನೆ (ನ್ಯೂಸ್ ರೂಮ್) ಉದ್ಯೋಗ ಕಡಿತ ಮಾಡಲಾಗುವುದು ಎಂದು ಬುಧವಾರ ತಿಳಿಸಲಾಗಿದೆ. ವೀಕ್ಷಕರ ಅಗತ್ಯಗಳಿಗೆ ತಕ್ಕಂತೆ ಬದಲಾಗಲು ಮತ್ತು ಉಳಿತಾಯದ ಗುರಿಯನ್ನು ತಲುಪುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಬಿಬಿಸಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯುವುದಾಗಿ ಟೋನಿ ಹಾಲ್ ಘೋಷಣೆ ಮಾಡಿದ ವಾರದ ನಂತರ ಈ ಉದ್ಯೋಗ ಕಡಿತದ ಸುದ್ದಿ ಹೊರಬಿದ್ದಿದೆ. ವೇತನ ಬೇಡಿಕೆ ಮತ್ತು ಭವಿಷ್ಯದಲ್ಲಿ ಹೇಗೆ ಹಣಕಾಸು ಹೊಂದಿಸಬೇಕು ಎಂಬ ಬಗ್ಗೆ ಬಿಬಿಸಿ ಚಿಂತನೆ ನಡೆಸುತ್ತಿದೆ.
"ವಿಶ್ವದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾಗಿ ನಾವು ಮುಂದುವರಿಯಬೇಕಿದೆ. ಆದರೆ ತುಂಬ ಮುಖ್ಯವಾಗಿ ಸದ್ಯಕ್ಕೆ ನಾವು ಯಾವ ಜನರನ್ನು ತಲುಪುತ್ತಿಲ್ಲವೋ ಅವರನ್ನು ತಲುಪಬೇಕಿದೆ ಎಂದು ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ನಿರ್ದೇಶಕಿ ಫ್ರಾನ್ ಉನ್ಸ್ ವರ್ತ್ ಮಾಹಿತಿ ನೀಡಿದ್ದಾರೆ.

ಬಿಬಿಸಿಗೆ ಎಂಬತ್ತು ಮಿಲಿಯನ್ ಪೌಂಡ್ ಉಳಿತಾಯದ ಗುರಿ ಇದೆ. ಜತೆಗೆ ಸಾಂಪ್ರದಾಯಿಕ ಸುದ್ದಿ ತಲುಪಿಸುವ ವಿಧಾನಕ್ಕೆ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಆದರೆ ಡಿಜಿಟಲ್ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ ಎಂಬ ಭಾವನೆ ಇದೆ.
ಬಿಬಿಸಿ ಸುದ್ದಿಮನೆಯನ್ನು ವರದಿ ಆಧಾರಿತ ಮಾದರಿಯಾಗಿ ರೂಪಿಸಲು ನಿರ್ಧರಿಸಲಾಗಿದೆ. ಸುದ್ದಿ ವರದಿಗಳ ಮೇಲೆ ಹೆಚ್ಚು ಗಮನ ಹರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭವಿಷ್ಯದಲ್ಲಿ ಬಿಬಿಸಿ ಪತ್ರಕರ್ತರು ಲಂಡನ್ ನ ಹೊರ ಭಾಗದಲ್ಲಿ ಇರಲಿದ್ದಾರೆ. ಇದರಿಂದ ಬಿಬಿಸಿ ಆ ದೇಶದ (ಯುಕೆ) ನಂಟು ಕಳೆದುಕೊಳ್ಳುತ್ತದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ.
ಸುದ್ದಿ ಮತ್ತು ಮನರಂಜನೆ ಗ್ರಾಹಕರ ಬದಲಾದ ಹವ್ಯಾಸದ ಕಾರಣಕ್ಕೆ ಜಗತ್ತಿನ ಅತಿ ದೊಡ್ಡ ಮಾಧ್ಯಮ ಸಂಸ್ಥೆ ಬಿಬಿಸಿಯು ಹೊಸ ವೀಕ್ಷಕರು- ಓದುಗರನ್ನು ಸೆಳೆಯಲು ಹೊಸ ದಾರಿಗಳಿಗಾಗಿ ಹೋರಾಡುತ್ತಿದೆ.


Click it and Unblock the Notifications