ಬೆಂಗಳೂರು ಮೊದಲೇ ಟ್ರಾಫಿಕ್‌ನಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಒಂದು ಕಿಲೋ ಮೀಟರ್ ಹೋಗಬೇಕೆಂದರೆ ಕಮ್ಮಿ ಅಂದರೂ 20 ರಿಂದ 30 ವರ್ಷ ಬೇಕು. ಅದೇ ಕಾರಣದಿಂದ ಎಷ್ಟೋ ಮಂದಿ ಸ್ವಂತ ವಾಹನ ಇದ್ದರೂ ಮೆಟ್ರೋದಲ್ಲಿ ಓಡಾಡುತ್ತಾರೆ. ಇನ್ನು ಬಸ್ಸಿನ ಅವಸ್ಥೆ ಕೇಳೋದೆ ಬೇಡ. ಒಂದು ಬಸ್ ಹತ್ತಿ ಕುಳಿತರೆ, ಒಂದು ಗಂಟೆ ಟ್ರಾಫಿಕ್‌ನಲ್ಲೇ ಸಿಲುಕಿ ಕೂತಲ್ಲೇ ಕೂರಬೇಕು. ಆದ್ರೆ ಇದೀಗ ಬೆಂಗಳೂರಿನ ಈ ನಗರದಲ್ಲಿ ಇಂದು ಒಂದು ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.

ಹೌದು, ಇಂದು (ನ.28, ಶುಕ್ರವಾರ) ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಐಸಿಡಿಎಸ್ (ICDS) ಗೋಲ್ಡನ್ ಜುಬಿಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಅಲ್ಲದೇ ಸುಮಾರು ವಾಹನಗಳು ಬರುವ ಕಾರಣ, ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಇದೀಗ ಪ್ಯಾಲೇಸ್ ಗ್ರೌಂಡ್ ಸುತ್ತಮುತ್ತ ಸಂಚರಿಸುವ ವಾಹನ ಸವಾರರಿಗೆ ಬದಲಿ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ.
ಇಲ್ಲೆಲ್ಲಾ ಟ್ರಾಫಿಕ್ ಜಾಮ್!
ಕಾರ್ಯಕ್ರಮಕ್ಕರ ಸಾವಿರಾರು ಜನ ಆಗಮಿಸುವ ನಿರೀಕ್ಷೆಯಿದೆ. ಅಲ್ಲದೇ ಜನ ಹೆಚ್ಚಾದಾಗ, ವಾಹನಗಳು ಕೂಡಾ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆಯಾಗೋದು ಸಹಜ. ಕೃಷ್ಣ ವಿಹಾರ ಗೇಟ್, ಪ್ಯಾಲೇಸ್ ಗ್ರೌಂಡ್, ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯ ಸುತ್ತ ಮುತ್ತಲಿನ ನಗರಗಳಲ್ಲಿ ಸಂಚಾರದಲ್ಲಿ ಸ್ವಲ್ಪ ಅಡಚಣೆಯಾಗಬಹುದು. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಬೆಂಗಳೂರು ಸಂಚಾರ ಪೊಲೀಸರು ಇದೀಗ ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚನೆ ಹೊರಡಿಸಿದ್ದಾರೆ.
ಯಶವಂತಪುರ ಟು ಏರ್‌ಪೋರ್ಟ್: ಯಶವಂತಪುರದಿಂದ ಏರ್‌ಪೋರ್ಟ್ ಕಡೆಗೆ ಹೋಗುವವರು ಮತ್ತಿಕೆರೆ ರಸ್ತೆಯ ಮೂಲಕ ರಿಂಗ್ ರೋಡ್ ಹೋಗಿ, ಅಲ್ಲಿಂದ ಏರ್‌ಪೋರ್ಟ್ ರೋಡ್‌ಗೆ ಹೋದರೆ ಉತ್ತಮ
ಕೆಂಪೇಗೌಡ ಏರ್‌ಪೋರ್ಟ್: ಕೆಂಪೇಗೌಡ ಏರ್‌ಪೋರ್ಡ್ ಕಡೆಗೆ ಹೋಗುವವರು ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ - ಕಲ್ಪನಾ ಜಂಕ್ಷನ್ - ಉದಯ ಟಿವಿ ಓಲ್ಡ್ ಜಂಕ್ಷನ್ - ಕಂಟೋನ್ಮೆಂಟ್ ರೈಲು ನಿಲ್ದಾಣ - ಟ್ಯಾನರಿ ರೋಡ್ - ನಾಗಾವಾರ -ಏರ್‌ಪೋರ್ಟ್‌ಗೆ ಹೋಗಬಹುದು.
ಏರ್‌ಪೋರ್ಟ್ ಟು ಬೆಂಗಳೂರು ನಗರ: ಏರ್‌ಪೋರ್ಟ್‌ನಿಂದ ನಗರಕ್ಕೆ ಬರುವವರು ಹೆಬ್ಬಾಳ - ನಾಗವಾರ ಜಂಕ್ಷನ್- ಬಾಂಬೂ ಬಜಾರ್ ರಸ್ತೆ - ಕ್ವೀನ್ ರೋಡ್ - ಕುವೆಂಪು ಸರ್ಕಲ್ - ಗೊರಗುಂಟೆ ಪಾಳ್ಯ ಜಂಕ್ಷನ್ - ಡಾ.ರಾಜ್‌ಕುಮಾರ್ ರೋಡ್ ಮೂಲಕ ಬರಬಹುದು.
ಇನ್ನು ಭಾರೀ ಗಾತ್ರದ ವಾಹನಗಳನ್ನು ಬಳ್ಳಾರಿ ರಸ್ತೆ ಕಡೆ ಹೋಗಲು ನಿರ್ಬಂಧ ಹೇರಲಾಗಿದೆ. ಆದ್ದರಿಂದ ಅಂತಹ ವಾಹನಗಳು ಬಂದರೆ, ಔಟರ್ ರಿಂಗ್ ರೋಡ್‌ಗೆ ತಿರುಗಿಸಲಾಗುತ್ತದೆ ಎನ್ನಲಾಗಿದೆ.
ನಂದಿದುರ್ಗ ರಸ್ತ, ಸಿ.ವಿ ರಾಮನ್ ರಸ್ತೆ, ಗುಟ್ಟನಗಳ್ಳಿ ರಸ್ತೆ, ಪ್ಯಾಲೇಸ್ ರೋಡ್, ಬಳ್ಳಾರಿ ರೋಡ್, ಜಯಮಹಲ್ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಇನ್ನು ಕಾರ್ಯಕ್ರಮ ಬೆಳಿಗ್ಗೆ 7 ರಿಂದ ಆರಂಭವಾದರೆ ಸಂಜೆ 4 ಗಂಟೆಯವರೆಗೆ ಇರಲಿದೆ. ವಿಶೇಷವಾಗಿ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications