ಬೆಂಗಳೂರು: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಈದ್ ಮಿಲಾದ್ (Eid-Milad) ಈಗಾಗಲೇ ಮುಗಿದಿದೆ. ಆದ್ರ ಬೊಮ್ಮನಹಳ್ಳಿ ಮುಸ್ಲಿಂ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಇಂದು (ನ.07) ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆಯನ್ನು ಸಹ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ಮೆರವಣಿಗೆ ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ (Bommanahalli Junction) ನಡೆಯುವ ಕಾರಣ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಅಲ್ಲದೇ ಪ್ರಯಾಣಿಕರು ಬದಲಿ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಈದ್ ಮಿಲಾದ್ ಆಚರಣೆ ಮತ್ತು ಮೆರವಣಿಗೆ ಹಿನ್ನೆಲೆ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್, ರೂಪೇನ ಅಗ್ರಹಾರ, ಗಾರೇಭಾವಿಪಾಳ್ಯ ಜಂಕ್ಷನ್ ಮೂಲಕ ಬೆಂಗಳೂರು ನಗರದಿಂದ ನಿರ್ಗಮಿಸುವ ಮತ್ತು ಬೆಂಗಳೂರು ನಗರಕ್ಕೆ ಸಂಚಾರ ಮಾಡುವವರಿಗೆ ಸಂಚಾರ ದಟ್ಟಣೆ ಆಗಬಹುದು. ಈ ಪರಿಣಾಮ ಮಧ್ಯಾಹ್ನ 3 ಗಂಟೆಯ ನಂತರ ಹೊಸೂರು ರಸ್ತೆ ಬೊಮ್ಮನಗಳ್ಳಿ ಜಂಕ್ಷನ್ ಮೂಲಕ ಸಂಚರಿಸುವ ಸಾರ್ವಜನಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಇಲಾಖೆ ಸೂಚಿಸಿದೆ.
ಈ ಮಾರ್ಗಗಳನ್ನು ಬಳಸಿ:
- ಆಡುಗೋಡಿ, ವಿಲ್ಸನ್ ಗಾರ್ಡನ್ ಕಡೆಯಿಂದ ವಾಹನ ಸವಾರರು ಡೈರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆಗೆ ಹೋಗಿ ಅಲ್ಲಿಂದ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಹೋಗಬಹುದು.
- ಇನ್ನು ಬನಶಂಕರಿ ಮೂಲಕ ಡಬಲ್ ಡೆಕ್ಕರ್ ಮೂಲಕ ಬರುವ ವಾಹನಗಳು ಜಯದೇವ ಜಂಕ್ಷನ್‌ನಲ್ಲಿ ಬಲಗಡೆಗೆ ತಿರುಗಿ, ಬನ್ನೇರುಘಟ್ಟ ರಸ್ತೆ ಮೂಲಕ ಬಂದು ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಸಂಚರಿಸಬಹುದು.
- ಹೊರವರ್ತುಲ ರಸ್ತೆ ಮಾರತಹಳ್ಳಿಯಿಂದ ಬರುವವರು ಕೂಡಾ 27ನೇ ಮುಖ್ಯ ರಸ್ತೆಯಲ್ಲಿ ಎಡಗಡೆಗೆ ತಿರುಗಿ, ವೇಮನ ಜಂಕ್ಷನ್ ಮೂಲಕ ಸೋಮಸುಂದರ್‌ಪಾಳ್ಯ ಮಾರ್ಗವಾಗಿ ಕೂಡ್ಲುಗೆ ಹೋಗಿ ಹೊಸೂರು ರಸ್ತೆಗೆ ಹೋಗಬಹುದು.
- ಇನ್ನು ಯಾರೆಲ್ಲಾ ಹೊಸೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುತ್ತಾರೀ, ಅವರು ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೂಲಕ ಸಂಚಾರ ಮಾಡಬಹುದು.
ಮೆರವಣಿಗೆ ಸಂಚರಿಸುವ ಮಾರ್ಗ:
ಇನ್ನು ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮದೀನ ನಗರದ ಮೆಕ್ಕಾ ಮಸೀದಿಯ ಬಳಿ ಜನರು ಒಟ್ಟಾಗಿ, ಅಲ್ಲಿಂದ 17 ರಿಂದ 20 ಸ್ತಬ್ಧ ಚಿತ್ರಗಳನ್ನು ಇಟ್ಟುಕೊಂಡು ವಾಹನಗಳೊಂದಿಗೆ ಮೆರವಣಿ ಸಾಗಲಿದೆ. ನಂತರ ಮಂಗಮ್ಮನಪಾಳ್ಯ ಮೈನ್ ರೋಡ್‌ನಿಂದ ಹೊರಟ ಮೆರವಣಿಗೆ ಹೊಸೂರು ರಸ್ತೆಯ ಸರ್ವೀಸ್ ರಸ್ತೆ ಮಾರ್ಗವಾಗಿ ಬಂದು ಮಂಗಮ್ಮಪಾಳ್ಯ ಬಸ್ ನಿಲ್ದಾಣದ ಬಳಿಕ ಹೊಸೂರು ಮೈನ್ ರೋಡ್‌ಗೆ ಮೆರವಣಿಗೆ ತಲುಪುತ್ತದೆ. ಅಲ್ಲಿಂದ 21 ನೇ ಪಿಲ್ಲರ್ ಬಳಿಕ ಮೆರವಣಿ ಯೂಟರ್ನ್ ಪಡೆಯಲಿದೆ. ಬಳಿಕ ಬೊಮ್ಮನಹಳ್ಳಿ ಜಂಕ್ಷನ್‌ಗೆ ತಲುಪಿ, ಅಲ್ಲಿಂದ ಬೇಗೂರು ರಸ್ತೆಯ ಜಾಮೀಯ ಮಸೀದಿ ಹಿಂಭಾಗದಲ್ಲಿರುವ ಉರ್ದು ಶಾಲೆಗೆ ತಲುಪಲಿದೆ ಎನ್ನಲಾಗಿದೆ.
ಬೆಂಗಳೂರಿನ ಇಂತಹ ಕಾರ್ಯಕ್ರಮಗಳಾಗುವಾಗ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ ನೀಡಲಾಗುತ್ತದೆ. ಅದೇ ರೀತಿ ಇಂದು ಈ ಸೂಚನೆ ನೀಡಲಾಗಿದೆ.


Click it and Unblock the Notifications