ಬೆಂಗಳೂರು: ಬೆಂಗಳೂರಿನ ಬಹುದಿನಗಳ ಕನಸು, ಜನರ ಬೇಡಿಕೆಯ ಮಾರ್ಗ ಇದೀಗ ಕೊನೆಗೂ ಸಂಚಾರ ಮುಕ್ತವಾಗಿದೆ. ನಗರದ ಕೇಂದ್ರ ವಾಣಿಜ್ಯ ಪ್ರದೇಶದ (CBD) ಪ್ರಮುಖ ಕಾಮರಾಜ್ ರೋಡ್, ಸುದೀರ್ಘ ಮೆಟ್ರೋ ಕಾಮಗಾರಿಗಳ ನಂತರ ಇದೀಗ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಿದೆ. ಬೆಂಗಳೂರಿನ ಎಂಜಿ ರೋಡ್ ಮತ್ತು ಕಬ್ಬನ್ ರಸ್ತೆ (MG Road-Cubbon Road) ಸಂಪರ್ಕಿಸುವ ಕಾಮರಾಜ್ ರೋಡ್ (Kamaraj Raod) ಓಪನ್ ಆಗಿದೆ.

ಮೆಟ್ರೋ ಸ್ಟೇಷನ್ ಕಾಮಗಾರಿಗಾಗಿ ಕಾಮರಾಜ್ ರಸ್ತೆಯನ್ನು 2019ರಲ್ಲಿ ಮುಚ್ಚಲಾಗಿತ್ತು. ಆದರೆ ಇದುವರೆಗೆ ಸಂಚಾರಕ್ಕೆ ಬಿಡುಗಡೆ ಮಾಡಿರಲಿಲ್ಲ. ಆದ್ರೆ ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಕಾಮರಾಜ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.
ಕಾಮರಾಜ್ ರೋಡ್ ಮುಚ್ಚಿದ್ದೇಕೆ?
ಎಂಜಿ ರೋಡ್‌ನ ಮೆಟ್ರೋ ನಿಲ್ದಾಣಕ್ಕಾಗಿ 2019ರ ಜೂನ್ 15ರಂದು ರಸ್ತೆಯನ್ನು ಮುಚ್ಚಲಾಗಿತ್ತು. ಕಬ್ಬನ್ ರೋಡ್‌ನಿಂದ ಕಾವೇರಿ ಎಂಪೋರಿಯಂ ಜಂಕ್ಷನ್‌ವರೆಗಿನ 220 ಮೀಟರ್ ಮಾರ್ಗ, ನಮ್ಮ ಮೆಟ್ರೋ ಪಿಂಕ್ ಲೈನ್ ಕಾರಣ ಆರೂವರೆ ವರ್ಷಗಳ ಕಾಲ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಆದರೆ ಇದೀಗ ಈ ರಸ್ತೆ ಎರಡೂ ಬದಿ ಸಂಚಾರಕ್ಕೆ ಮುಕ್ತವಾಗಿದೆ.
ಪಶ್ಚಿಮ ದಿಕ್ಕಿನ ಸಂಚಾರ ಮಾರ್ಗ 2024ರ ಜೂನ್ 14ರಂದು ತೆರೆದಿತ್ತು. ಕಳೆದ ಶುಕ್ರವಾರ ಪೂರ್ವ ದಿಕ್ಕಿನ ಮಾರ್ಗವೂ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಆ ಮೂಲಕ ರಸ್ತೆ ಸಂಪೂರ್ಣ ಬಳಕೆಗೆ ಲಭ್ಯವಾಗಿದೆ. 214 ಮೀಟರ್ ಉದ್ದದ, ಪ್ರತಿ ಬದಿಯಲ್ಲಿ 11 ಮೀಟರ್ ಅಗಲದ ಹೊಸ ರಸ್ತೆ ಸುಗಮ ಸಂಚಾರಕ್ಕೆ ಸುಲಭವಾಗಿದೆ.
ಈ ಪುನರಾರಂಭದಿಂದ Commercial Street ಮತ್ತು ಬ್ರಿಗೇಡ್ ರಸ್ತೆ (Brigade Road) ನಡುವಿನ ಸಂಪರ್ಕ ಸುಧಾರಿಸಲಿದೆ. ಅಲ್ಲದೇ ಸಂಚಾರ ದಟ್ಟಣೆ ಕೂಡಾ ಇದರಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಅನಿಲ್ ಕುಂಬ್ಳೆ ವೃತ್ತ (Anil Kumble Circle) ಮತ್ತು BRV ಜಂಕ್ಷನ್ ದಟ್ಟಣೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.
ಕಮರ್ಷಿಯಲ್ ಸ್ಟ್ರೀಟ್‌ನಿಂದ ಬ್ರಿಗೇಡ್ ರಸ್ತೆಗೆ ಹೋಗುವ ವಾಹನ ಸವಾರರು ಇನ್ನು ಡಿಕ್ಕಿನ್ಸನ್ ರಸ್ತೆ (Dickenson Road) ಅಥವಾ ಕ್ವೀನ್ಸ್ ರಸ್ತೆ (Queen's Road) ಮೂಲಕ ಸುತ್ತುಹಾಕಬೇಕಿಲ್ಲ. ಏಕೆಂದರೆ ಕಾಮರಾಜ್ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗಳು ತೆರವಾಗಿದ್ದು, ನೇರ ಮಾರ್ಗ ಲಭ್ಯವಿದೆ. ಆದ್ದರಿಂದ ಇನ್ಮೇಲೆ 10 ರಿಂದ 15 ನಿಮಿಷಗಳಷ್ಟು ಪ್ರಯಾಣದ ಸಮಯ ಉಳಿತಾಯವಾಗಲಿದೆ.
ಇದೀಗ ಈ ರಸ್ತೆಯ ನವೀಕರಣಕ್ಕಾಗಿ ಸುಮಾರು 3 ಕೋಟಿ ಖರ್ಚಾಗಿದೆ ಎಂದು ವರದಿಯಾಗಿದೆ. ಈ ರಸ್ತೆಯನ್ನು ಡಬಲ್ ರೋಡ್ ಮಾಡಲು ಮತ್ತು ಸಂಚಾರಕ್ಕೆ ಮುಕ್ತಗೊಳಿಸಲು ಹಲವು ದಿನಗಳಿಂದ ಕೆಲಸಗಳು ನಡೆಯುತ್ತಲೇ ಇತ್ತು. ಇದೀಗ ಕೊನೆಗೂ ಈ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದ್ದು, ಇನ್ಮೇಲೆ ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಕಮರ್ಷಿಯಲ್ ಸ್ಟ್ರೀಟ್, ಡಿಕನ್ಸನ್ ರೋಡ್ ಮತ್ತು ಕಬ್ಬನ್ ರೋಡ್‌ನಿಂದ ಬ್ರಿಗೇಡ್ ರೋಡ್ ಮತ್ತು ಎಂಜಿ ರೋಡ್ ಕಡೆಗೆ ಬರುವ ಪ್ರಯಾಣಿಕರ ಸಮಯ ಭಾರೀ ಕಮ್ಮಿಯಾಗಲಿದೆ.


Click it and Unblock the Notifications