ಬೆಂಗಳೂರಿನ ಜನರು ರಾಮೇಶ್ವರಂ ಕೆಫೆ ಬಗ್ಗೆ ತಿಳಿದಿರಬಹುದು. ದಕ್ಷಿಣ ಭಾರತದ ತಿಂಡಿಗಳ ಮೂಲಕ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆ ತ್ವರಿತ ಸೇವೆಯನ್ನು ನೀಡುವ ರೆಸ್ಟೋರೆಂಟ್ ಆಗಿದೆ. ಈ ಕೆಫೆಯಲ್ಲಿ ನಾವು ಯಾವ ಸಮಯದಲ್ಲಿ ಹೋದರೂ ಜನಜಂಗುಳಿ ಕಾಣಬಹುದು. ಆದರೆ ಈ ಒಂದು ಕೆಫೆಯು ಮಾಸಿಕವಾಗಿ ಅಂದರೆ ಒಂದು ತಿಂಗಳಿನಲ್ಲಿಯೇ ಬರೋಬ್ಬರಿ 4.5 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದೆ ಎಂದರೆ ನೀವು ನಂಬಬಹುದೇ?
ಹೌದು, ಬೆಂಗಳೂರಿನ ಈ ರಾಮೇಶ್ವರಂ ಕೆಫೆಯು ಒಂದು ತಿಂಗಳಿನಲ್ಲೇ ಸುಮಾರು 4.5 ಕೋಟಿ ರೂಪಾಯಿಯ ವಹಿವಾಟನ್ನು ನಡೆಸುತ್ತದೆ. ಈ ಬಗ್ಗೆ ಸ್ಟಾರ್ಟ್‌ಅಪ್ ಉಡಾನ್‌ನ ಸಹಸಂಸ್ಥಾಪಕ ಸುಜೀತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಜೆರೋಧಾ ಸಿಇಒ ನಿಖಿಲ್ ಕಾಮತ್ ಬಳಿ ಸುಜೀತ್ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

ಸುಜೀತ್ ಕುಮಾರ್ ಹೇಳಿರುವುದು ಏನು?
"ರಾಮೇಶ್ವರಂ ಕೆಫೆಯ ಬಗ್ಗೆ ನೀವು ತಿಳಿದಿರಬಹುದು. ಅದರ ಬಗ್ಗೆ ಹೇಳುವುದಾದರೆ, ಆ ಕೆಫೆಯಲ್ಲಿ ಪ್ರತಿ ದಿನ ಸರಾಸರಿ 7500 ಬಿಲ್‌ಗಳನ್ನು ಜನರೇಟ್ ಮಾಡಲಾಗುತ್ತದೆ. ಒಂದು ಸ್ಟೋರ್ ಸುಮಾರು 10 ಬೈ 10 ಅಥವಾ 10 ಬೈ 15 ಸ್ಕ್ವೇರ್ ಫೀಟ್ ಇದೆ. ಮಾಸಿಕವಾಗಿ 4.5 ಕೋಟಿ ರೂಪಾಯಿ ವಹಿವಾಟನ್ನು ರಾಮೇಶ್ವರಂ ಕೆಫೆ ಹೊಂದಿದೆ. ಅಂದರೆ ವಾರ್ಷಿಕವಾಗಿ ಸುಮಾರು 50 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದೆ," ಎಂದು ತಿಳಿಸಿದ್ದಾರೆ.
"ವಾರ್ಷಿಕ ಆದಾಯಯಲ್ಲಿ ಉತ್ತಮ ಲಾಭವನ್ನು ಕೂಡಾ ರಾಮೇಶ್ವರಂ ಕೆಫೆ ಗಳಿಸುತ್ತದೆ. ಸುಮಾರು ಶೇಕಡ 70ರಷ್ಟು ನಿವ್ವಳ ಲಾಭವನ್ನು ರಾಮೇಶ್ವರಂ ಕೆಫೆ ಪಡೆಯುತ್ತದೆ," ಎಂದು ಸ್ಟಾರ್ಟ್‌ಅಪ್ ಉಡಾನ್‌ನ ಸಹಸಂಸ್ಥಾಪಕ ಸುಜೀತ್ ಕುಮಾರ್ ಹೇಳಿದ್ದಾರೆ. ಕಾಮೆಡಿ ಪಾಡ್‌ಕಾಸ್ಟ್ ಡಬ್ಲ್ಯೂಟಿಎಫ್‌ನ ಮೂರನೇ ಎಪಿಸೋಡ್‌ನಲ್ಲಿ ಮಾತನಾಡುತ್ತಾ ಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಿಶೋ ಸಹಸಂಸ್ಥಾಪಕ ವಿದಿತ್ ಆತ್ರೆ ಮತ್ತು ಫ್ಯೂಚರ್ಸ್ ಸಂಸ್ಥಾಪಕ ಕಿಶೋರ್ ಬಿಯಾನಿ ಇದ್ದರು.
ರಾಮೇಶ್ವರಂ ಕೆಫೆ ಬಗ್ಗೆ ಮಾಹಿತಿ
ರಾಮೇಶ್ವರಂ ಕೆಫೆಯನ್ನು ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಸಂಸ್ಥಾಪನೆ ಮಾಡಿದ್ದಾರೆ. ಇಬ್ಬರೂ ಕೂಡಾ ತಮ್ಮ ಈ ವ್ಯಾಪಾರಕ್ಕೆ ಹೆಚ್ಚಿನ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜಿ ಅಬ್ದುಲ್ ಕಲಾಂ ಜನನ ಸ್ಥಳವನ್ನು ತಮ್ಮ ರೆಸ್ಟೋರೆಂಟ್‌ನ ಹೆಸರನ್ನಾಗಿ ಇಬ್ಬರು ಇರಿಸಿಕೊಂಡಿದ್ದಾರೆ. ಎಲ್ಲ ತಿಂಡಿಗಳನ್ನು ಹೊಟೇಲ್‌ನಲ್ಲಿ ತಯಾರಿಸಲಾಗುತ್ತದೆ.
ಸುಜಿತ್ ಕುಮಾರ್ ಈ ಪಾಡ್‌ಕಾಸ್ಟ್‌ನಲ್ಲಿ ಉಡಾನ್ ಸಹಸಂಸ್ಥಾಪಕರಾಗಿ ತನ್ನ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ತಾನು 2008 ಮತ್ತು 2016ರ ನಡುವೆ ಕಾರ್ಯನಿರ್ವಹಣೆ ಮಾಡುತ್ತಿದ್ದ ಫ್ಲಿಪ್‌ಕಾರ್ಟ್ ಅನ್ನು ಏಕೆ ತೊರೆದೆ, ಹೇಗೆ ತನ್ನದೇ ಆದ ಸ್ಟಾರ್ಟ್ ಅಪ್ ಸಂಸ್ಥೆಯನ್ನು ಆರಂಭ ಮಾಡಿದೆ ಎಂಬುವುದನ್ನು ಸುಜಿತ್ ಕುಮಾರ್ ವಿವರಿಸಿದ್ದಾರೆ.
ಭಾರತದಲ್ಲಿ ನಡೆಯುವ ಹೂಡಿಕೆ ಮತ್ತು ಇತರೆ ದೇಶಗಳಲ್ಲಿ ಮಾಡಲಾಗುವ ಹೂಡಿಕೆ, ನಮ್ಮ ವ್ಯವಹವಾರವನ್ನು ಹೇಗೆ ಅಭಿವೃದ್ದಿ ಮಾಡುವುದು ಎಂಬ ಬಗ್ಗೆ ಸುಜಿತ್ ಕುಮಾರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲೇ ರಾಮೇಶ್ವರಂ ಕೆಫೆಯನ್ನು ಸುಜಿತ್ ಕುಮಾರ್ ಹೊಗಳಿದ್ದಾರೆ.


Click it and Unblock the Notifications