ಬೆಂಗಳೂರಿನಲ್ಲಿ ಇಂದು ( ಜುಲೈ,18) ಬೆಳಿಗ್ಗೆ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ (bomb threat) ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಇಮೇಲ್‌ಗಳು ಬಂದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಗರದಾದ್ಯಂತ ಬಿಗಿ ಭದ್ರತೆಯನ್ನು ಕೈಗೊಂಡು ಬೆಂಗಳೂರಿನಾದ್ಯಂತ ಹೈ ಅಲರ್ಟ್ ಘೋಷಣೆಯನ್ನು ಮಾಡಲಾಗಿತ್ತು.

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಪ್ರಸ್ತುತದವರೆಗೆ ಯಾವುದೇ ಶಾಲೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಮತ್ತು ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿಯಂತಹ ಪ್ರದೇಶಗಳ ಶಾಲೆಗಳನ್ನು ಗುರಿಯಾಗಿಸಿಕೊಂಡು ಇಮೇಲ್‌ಗಳನ್ನು ಕಳುಹಿಸಲಾಗಿತ್ತು. ಶಾಲಾ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದ್ದು, ಸಾಮೂಹಿಕ ಹಾನಿ ಉಂಟಾಗುವ ಬೆದರಿಕೆಗಳನ್ನು ಹಾಕಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ಖಚಿತಪಡಿಸಿದ್ದಾರೆ.
[email protected] ಎಂಬ ಇ-ಮೇಲ್ನಿಂದ ಸಂದೇಶ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಬೇಟಿ ಕೊಟ್ಟು, ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆಯನ್ನು ಮಾಡಿದ್ದಾರೆ.
ಶಾಲೆಯ ತರಗತಿಗಳ ಒಳಗೆ ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಟಿಎನ್‌ಟಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿತ್ತು. ಹಿಂಸಾತ್ಮಕ ಭಾಷೆ ಬಳಸಿ ವಿದ್ಯಾರ್ಥಿಗಳ ಜೀವಕ್ಕೆ ಬೆದರಿಕೆ ಹಾಕಲಾಗಿತ್ತು. ಅಲ್ಲದೆ ಕಳುಹಿಸಿದವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ನಾನು ಈ ಲೋಕದಿಂದ ಅಳಿಸಿಹಾಕುತ್ತೇನೆ. ಒಂದೇ ಒಂದು ಆತ್ಮವೂ ಬದುಕುಳಿಯುವುದಿಲ್ಲ" ಎಂದು ಇಮೇಲ್‌ನಲ್ಲಿ ಬರೆಯಲಾಗಿತ್ತು. "ನೀವೆಲ್ಲರೂ ಬಳಲಲು ಅರ್ಹರು. ನಾನು ನಿಜವಾಗಿಯೂ ನನ್ನ ಜೀವನವನ್ನು ದ್ವೇಷಿಸುತ್ತೇನೆ. ಸುದ್ದಿ ಪ್ರಕಟವಾದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ... ದಯವಿಟ್ಟು ಸಂದೇಶದ ಪ್ರತಿಯನ್ನು ಪತ್ರಿಕಾ/ಮಾಧ್ಯಮಕ್ಕೆ ನೀಡಿ" ಎಂದು ಸಂದೇಶದಲ್ಲಿ ಬರೆಯಲಾಗಿದೆ.
ನಾವು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆದರಿಕೆ ಹಾಕಿದ ವ್ಯಕ್ತಿ ಅಥವಾ ಗುಂಪನ್ನು ಪತ್ತೆಹಚ್ಚಿ ಬಂಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಸ್ಫೋಟಕಗಳು ಪತ್ತೆಯಾಗದಿದ್ದರೂ, ಬೆದರಿಕೆಯ ಮಾನಸಿಕ ಪರಿಣಾಮವು ಗಂಭೀರವಾಗಿದೆ. ಹಲವಾರು ಶಾಲೆಗಳು ಭದ್ರತೆಯನ್ನು ಹೆಚ್ಚಿಸಿವೆ, ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿವೆ ಮತ್ತು ಪೋಷಕರಿಗೆ ಧೈರ್ಯ ತುಂಬುವಂತಹ ಸಂದೇಶಗಳನ್ನು ಕಳುಹಿಸಿವೆ. ಸೂಚನೆ ಬರುವವರೆಗೆ ಪೋಷಕರು ಭಯಪಡಬೇಡಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಬೇಡಿ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ದೆಹಲಿಯ 20 ಶಾಲೆಗೆ ಬಾಂಬ್ ಬೆದರಿಕೆ
ದೆಹಲಿಯ ಕನಿಷ್ಠ 20 ಶಾಲೆಗಳಿಗೆ ಇದೇ ರೀತಿಯ ಇಮೇಲ್ ಬೆದರಿಕೆಗಳು ಬಂದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ, ದೆಹಲಿಯ ಶಾಲೆಗಳನ್ನು ಗುರಿಯಾಗಿಸಿಕೊಂಡು ಇಂತಹ ಸುಳ್ಳು ಬಾಂಬ್ ಬೆದರಿಕೆಗಳು ಬಂದಿರುವ ಕಾರಣ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿಸುತ್ತೇವೆ.


Click it and Unblock the Notifications