ಬೆಂಗಳೂರು, ಆಗಸ್ಟ್ 26: ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಒ ಅನುರಾಧಾ ತಿವಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ 'ಬ್ರಾಹ್ಮಿನ್ ಜೀನ್ಸ್' (ಬ್ರಾಹ್ಮಣ ವಂಶವಾಹಿ) ಎಂದು ಹೇಳುವ ಚಿತ್ರವನ್ನು ಪೋಸ್ಟ್ ಮಾಡಿದ್ದು ಇದು ಇಂಟರ್ನೆಟ್ ಲೋಕದಲ್ಲಿ ತೀವ್ರ ವಿವಾದ ಹುಟ್ಟು ಹಾಕಿದ್ದು, ಪರ ವಿರೋಧ ಕಾಮೆಂಟ್ ಗಳು ಬರತೊಡಗಿದೆ. ಈ ಪೋಸ್ಟ್ 6.3 ಮಿಲಿಯನ್ ಹೆಚ್ಚು ವಿವ್ಸ್ ಕಂಡಿದ್ದು , ಸಾವಿರಾರು ಲೈಕ್ಸ್ , ರೀ ಪೋಸ್ಟ್ ಆಗಿದೆ.
ತಮ್ಮ 'ಬ್ರಾಹ್ಮಣ' ಜಾತಿ ಬಗ್ಗೆ ಹೆಮ್ಮೆ ಇದೆ ಎಂದಿರುವ ಅವರ ಈ ಪೋಸ್ಟ್‌ಗೆ ಸಾವಿರಾರು ಜನರು ಬೆಂಬಲ ವ್ಯಕ್ತಪಡಿಸಿದ್ದರೆ, ಇದು 'ಜಾತಿವಾದಿ ಮನಸ್ಥಿತಿಯನ್ನು ತೋರುವ ಪೋಸ್ಟ್' ಎಂದು ಮತ್ತೊಂದು ವರ್ಗದ ಜನರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ತಮ್ಮ 'ಬ್ರಾಹ್ಮಿನ್‌ಜೀನ್ಸ್' ಪೋಸ್ಟ್ ವೈರಲ್ ಆಗಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇನ್ನೊಂದು ಪೋಸ್ಟ್ ಮಾಡಿರುವ ಅನುರಾಧಾ, ಕೇವಲ ಒಂದು ಪೋಸ್ಟ್‌ಗೆ ಬಂದ ಟೀಕೆಗಳು ನಿಜವಾದ ಜಾತಿವಾದವನ್ನು ಹಾಗೂ ಬ್ರಾಹ್ಮಣ ದ್ವೇಷವನ್ನು ಬಯಲುಗೊಳಿಸಿದೆ ಎಂದಿದ್ದಾರೆ. ಈ ಸಂಬಂಧ ಅವರು ಸಾಲು ಸಾಲು ಟ್ವೀಟ್‌ಗಳನ್ನು ಮಾಡಿರುವ ಅವರು ಯಾವುದೇ ಮೀಸಲಾತಿ ಹಾಗೂ ಉಚಿತಗಳನ್ನು ಪಡೆಯದೆ ಕಷ್ಟಪಟ್ಟು ಮೇಲೆ ಬಂದ ನಮ್ಮ ಸಮುದಾಯದವರು ತಾವು ಬ್ರಾಹ್ಮಣರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

X ನಲ್ಲಿನ ಪ್ರೊಫೈಲ್‌ನಲ್ಲಿ 'OneFamilyOneReservation' ಎಂಬ ಹ್ಯಾಶ್‌ಟ್ಯಾಗ್ ಹೊಂದಿರುವ ತಿವಾರಿ, ಹೆಚ್ಚಾಗಿ ಜಾತಿ ಆಧಾರಿತ ಮೀಸಲಾತಿ ವಿರುದ್ಧ ಟ್ವೀಟ್ ಮಾಡುವ ಇವರು, ತಮ್ಮ ಸಮುದಾಯವು ಯಾವುದೇ ಮೀಸಲಾತಿ ಅಥವಾ "ಉಚಿತ" ವನ್ನು ಪಡೆಯುವುದಿಲ್ಲ ಎಂದು ಪ್ರತಿಪಾದಿಸಿಕೊಂಡಿದ್ದಾರೆ. ಅನೇಕರು ಇವರ ಪೋಸ್ಟನ್ನು ಶೇರ್ ಮಾಡಿ, ತಾವು ಜನಿವಾರ ಹಾಕಿಕೊಂಡಿರುವರು ಅಥವಾ ಬ್ರಾಹ್ಮಣರೆಂದು ಬಿಂಬಿಸಿಕೊಳ್ಳುವ ಫೋಟೋಗಳನ್ನು ಪೋಸ್ಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.
"ನಿರೀಕ್ಷೆಯಂತೆಯೇ 'ಬ್ರಾಹ್ಮಣ' ಎಂಬ ಒಂದೇ ಪದ ಹೇಳಿದ ಕೂಡಲೇ ಅನೇಕ ಕೀಳರಿಮೆಯುಳ್ಳ ಮನಸುಗಳನ್ನು ಕೆರಳಿಸಿದೆ. ಈ ಮೂಲಕ ತಮ್ಮಲ್ಲಿರುವ ನಿಜವಾದ ಜಾತಿವಾದಿ ಮನಸ್ಥಿತಿಯನ್ನು ಹೊರಹಾಕುತ್ತಿವೆ. ಮೇಲ್ಜಾತಿ ಜನರಿಗೆ ವ್ಯವಸ್ಥೆಯಿಂದ ಏನೂ ಸಿಗುವುದಿಲ್ಲ- ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ಎಲ್ಲವನ್ನೂ ಸ್ವಂತ ಶ್ರಮದಿಂದಲೇ ನಾವು ದುಡಿಯುತ್ತೇವೆ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು ನಮಗೆ ಎಲ್ಲ ಹಕ್ಕೂ ಇವೆ ಡೀಲ್ ವಿತ್ ಇಟ್" ಎಂದು ಅನುರಾಧಾ ಹೇಳಿದ್ದಾರೆ.
ಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅಷ್ಟೊಂದು ದ್ವೇಷವನ್ನು ನಮ್ಮ ವಿರುದ್ಧ ಹರಡಲಾಗಿದೆ. ಸಾಮಾಜಿಕ ನ್ಯಾಯ ಹೋರಾಟಗಾರರು ಹಾಗೂ ರಾಜಕಾರಣಿಗಳು ನಮ್ಮನ್ನು ವಿಲನ್‌ಗಳನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ತೊಂದರೆ ಮಾಡಿಲ್ಲ. ನಮಗೆ ಸರ್ಕಾರದಿಂದ ಯಾವ ಸಹಾಯವೂ ಸಿಗುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಮೇಲೆ ಬಂದಿದ್ದೇವೆ. ಹಾಗಿರುವಾಗ ನಮ್ಮ ಜಾತಿಯ ಬಗ್ಗೆ ನಾವೇಕೆ ನಾಚಿಕೆ ಪಡಬೇಕು' ಎಂದು ತಿವಾರಿ ಇನ್ನೂ ಒಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಅಸ್ತಿತ್ವದ ಬಗ್ಗೆಯೇ ಬ್ರಾಹ್ಮಣರು ತಪ್ಪಿತಸ್ಥ ಭಾವನೆ ಹೊಂದುವಂತೆ ಮಾಡಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆ. ಈ ನಿರೂಪಣೆಯನ್ನು ಬದಲಿಸಬೇಕಿದೆ. 'ಕ್ಷಮೆ ಕೋರದ ಬ್ರಾಹ್ಮಣ'ರಾಗಿ. ಇದನ್ನು ನಿಮ್ಮ ತೊಳುಗಳಲ್ಲಿ ಧರಿಸಿ ಎಂದು ಹೇಳಿದ್ದಾರೆ. ಬ್ರಾಹ್ಮಣರು ದಮನಕಾರಿಗಳಲ್ಲ, ಆದರೆ ವೈದಿಕ ಜ್ಞಾನದ ರಕ್ಷಕರು, ಅವರು ಅದನ್ನು ಸಂರಕ್ಷಿಸಲು ಪ್ರಾಣ ತೆತ್ತರು. ಯಾವತ್ತೂ ನಡೆಯದ ತಪ್ಪಿಗಾಗಿ ಸಮುದಾಯವನ್ನು ತಪ್ಪಿತಸ್ಥರೆಂದು ಭಾವಿಸಬಾರದು ಎಂದು ಅವರು ಹೇಳಿಕೊಂಡಿದ್ದಾರೆ.


Click it and Unblock the Notifications