ಬೆಂಗಳೂರು, ಅಕ್ಟೋಬರ್ 08: ಉದ್ಯಾನ ನಗರಿ ಬೆಂಗಳೂರಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿತ್ತು. ಈಗ ನಗರದ ಜನರು ಆತಂಕಪಡುವಂತಹ ಮಾಹಿತಿಯೊಂದನ್ನು ತಜ್ಞರು ನೀಡಿದ್ದಾರೆ. ನಗರದಲ್ಲಿ ಭವಿಷ್ಯದಲ್ಲಿ ನೀರಿನ ಕೊರತೆ ಉಂಟಾಗಲಿದೆ, ಅಂದಾಜಿಸಲಾಗದ ಶೂನ್ಯ ನೀರಿನ ದಿನಗಳನ್ನು ನಗರ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸೊಸೈಟಿ ಫಾರ್ ಕಮ್ಯುನಿಟಿ ಹೆಲ್ತ್ ಅವೇರ್ನೆಸ್ ರಿಸರ್ಚ್ ಅಂಡ್ ಆಕ್ಷನ್ (ಸೋಚರಾ) ಕಾರ್ಯದರ್ಶಿ ಪ್ರಫುಲ್ಲ ಸಾಲಿಗ್ರಾಮ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಏಕೆ ನೀರಿನ ಕೊರತೆ ಎದುರಾಗಲಿದೆ? ಎಂದು ಅವರು ವಿವರಣೆ ನೀಡಿದ್ದಾರೆ.

"200, 300 ವರ್ಷಗಳ ಹಿಂದೆ ಸುಮಾರು 400ಕ್ಕೂ ಅಧಿಕ ಕೆರೆಗಳಿದ್ದವು. ನಿರೀಕ್ಷೆ ಮಾಡದ ಬೆಳವಣಿಗೆ ಕಾರಣಕ್ಕೆ ಇವುಗಳಲ್ಲಿ ಬಹುತೇಕ ಮಾಯವಾಗಿವೆ. ಬಾಹ್ಯವಾದ ನೀರಿನ ಮೇಲಿನ ನಮ್ಮ ಅವಲಂಬನೆ ಅಧಿಕವಾಗಿದೆ" ಎಂದು ಹೇಳಿದ್ದಾರೆ.
"ನಾವು ಅಪಾರ್ಟ್‌ಮೆಂಟ್ ಸಂಘಗಳ ಜೊತೆಗೆ ನಿರಂತರವಾಗಿ ಅವರ ಸಮಸ್ಯೆಗಳ ಕುರಿತು ಸಭೆಗಳನ್ನು ಮಾಡುತ್ತೇವೆ. ಹಲವಾರು ಸಂಘಗಳು ಬೆಂಗಳೂರು ನಗರದ ನೀರಿನ ಸಮಸ್ಯೆಯ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡುತ್ತಾರೆ" ಎಂದರು.
ಹೆಣ್ಣೂರು ಟಸ್ಕರ್ಸ್ ಗ್ರೂಪ್‌ನ ಸದಸ್ಯರಾದ ಕೆ. ಸುಬ್ರಮಣ್ಯನ್, "ಈ ವಿಚಾರದಲ್ಲಿ ಸಮಯದಾಯದ ಸಹಭಾಗಿತ್ವ ಬಹಳ ಪ್ರಮುಖವಾದದ್ದು. ನಾವು ನಗರದ ನೀರಿನ ಕೊರತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದೇವೆ. ಗಿಡಗಳಿಗೆ ನೀರು ಹಾಕಲು, ಕಾರುಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಿದ ನೀರನ್ನು ಉಪಯೋಗಿಸುವಂತೆ ಮಾಹಿತಿ ನೀಡುತ್ತಿದ್ದೇವೆ. ಜನರು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು" ಎಂದು ಹೇಳಿದರು.
"ನಾಗರಿಕ ಸಮಿತಿಗಳು ಪ್ರಮುಖವಾಗಿ ರಿಯಲ್ ಎಸ್ಟೇಟ್ ಉದ್ಯಮದ ಅಕ್ರಮ ಒತ್ತುವರಿ ಮೇಲೆ ಕಣ್ಣಿಟ್ಇವೆ. ಬಿಬಿಎಂಪಿ, ಜಲಮಂಡಳಿ ಮತ್ತು ವಿವಿಧ ಭಾಗಿದಾರರ ನಡುವೆ ಸಮನ್ವಯತೆ ಕೊರತೆ ಇದೆ. ಇಂತಹ ಸಮಸ್ಯೆ ಉಂಟಾದಾಗ ಮೊದಲು ಧ್ವನಿ ಎತ್ತುವುದು ಜನರು. ಆದರೆ ಜನರು ಏಕಾಂಗಿಯಾಗಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ" ಎಂದರು.
ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಣೆ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ'ಯದ್ದು. ಇದು ಒಂದು ಸ್ವಾಯತ್ತ ಸಂಸ್ಥೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮತ್ತು ಕೊಳಚೆಯ ವಿಲೇವಾರಿ ಅದರ ಪ್ರಥಮ ಕರ್ತವ್ಯ. ದೇಶದಲ್ಲಿಯೇ ನೀರು ಸರಬರಾಜು ಮತ್ತು ಕೊಳಚೆ ವಿಲೇವಾರಿ ಸೇವೆಗಳಿಗೆ ಸ್ಥಾಪಿತವಾದ ಮೊದಲ ಸಾಲಿನ ಮಂಡಳಿ ಇದು.
ಬೃಹತ್ ಬೆಂಗಳೂರು ಮಹಾಪಾಲಿಕೆಯ ಒಟ್ಟಾರೆ 800 ಚ.ಕಿ.ಮೀನ ವಿಸ್ತೃತ ಪ್ರದೇಶ ಜಲಂಡಳಿಯ ವ್ಯಾಪ್ತಿಗೊಳಪಟ್ಟಿದೆ. ಇದರಲ್ಲಿ ಕೇಂದ್ರ ಬೆಂಗಳೂರಿನ 245 ಚ.ಕಿ.ಮೀ 330 ಚ.ಕಿ.ಮೀ ವ್ಯಾಪ್ತಿಯ 8 ನಗರ ಸ್ಥಳೀಯ ಸಂಸ್ಥೆಗಳು 7 ಮುನಿಸಿಪಲ್ ಕಾರ್ಪೋರೇಷನ್, 1 ಪಟ್ಟಣ ಪಂಚಾಯ್ತಿ ಹಾಗೂ 10 ಗ್ರಾಮಗಳ ಒಟ್ಟಾರೆ 225 ಚ.ಕಿ.ಮೀ ವಿಸ್ತಿರ್ಣ ಸೇರಿದೆ. ನಗರ ಸದ್ಯ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿದೆ.
ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ 19 ಟಿಎಂಸಿಗಳಷ್ಟು ಪ್ರಮಾಣದ ನೀರನ್ನು ಬಳಸಲು ಕರ್ನಾಟಕ ಸರ್ಕಾರ ಅನುಮತಿಸಿದೆ. ಕಾವೇರಿ ನೀರು ಸರಬರಾಜು ಯೋಜನೆಯ ನಾಲ್ಕನೇ ಘಟ್ಟದ 1 ಮತ್ತು 2ನೇ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸರ್ಕಾರವು ನೀಡಿದ್ದ ನೀರಿನ ಪ್ರಮಾಣ ಪೂರ್ಣಗೊಂಡಿತ್ತು. ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ 1440 ಎಂಎಲ್‌ಡಿಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ.
ಬೆಂಗಳೂರಿನ 7 ನಗರ ಸಭೆಗಳನ್ನು ಒಳಗೊಂಡಂತೆ ಆದರೆ 225 ಚ.ಕಿ.ಮೀ ಪ್ರದೇಶದ 110 ಹಳ್ಳಿಗಳನ್ನು ಹೊರತುಪಡಿಸಿ ಒಟ್ಟಾರೆ 575 ಚ.ಕಿ.ಮೀ ಪ್ರದೇಶಕ್ಕೆ ನೀರು ಪೂರೈಸುತ್ತಿದೆ. ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಘಟ್ಟ 2ನೇ ಹಂತವನ್ನು ಪೂರ್ಣಗೊಳಿಸಿದ ನಂತರವೂ ಹೊಸದಾಗಿ ಬಿಬಿಎಂಪಿಯ ವ್ಯಾಪ್ತಿಗೆ ಸೇರಿಸಲ್ಪಟ್ಟ 110 ಹಳ್ಳಿಗಳಿಗೆ ನೀರು ಪೂರೈಸುವುದು ಜಲಮಂಡಳಿಗೆ ಸವಾಲಾಗಿದೆ.
ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ನೀರನ್ನು ಮಂಜೂರು ಮಾಡಿದೆ. ಇದರಿಂದಾಗಿ ಪ್ರಸ್ತುತ ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಘಟ್ಟವನ್ನು ಕಾರ್ಯಗತಗೊಳಿಸಬೇಕಿದೆ.


Click it and Unblock the Notifications