ಕೇಂದ್ರ ಬಜೆಟ್ 2026 (Union Budget 2026) ಮಂಡನೆಯಾದಾಗಿನಿಂದ ಭಾರತೀಯ ರೈಲ್ವೇ ಭಾರೀ ಸುದ್ದಿಯಲ್ಲಿದೆ. ಭಾರತದ ದಕ್ಷಿಣ ಭಾಗದಲ್ಲಿ ರೈಲ್ವೇ ಕ್ರಾಂತಿಯನ್ನುಂಟುಮಾಡುವ ನಿರೀಕ್ಷೆಯೊಂದಿಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಫೆಬ್ರವರಿ 1, 2026 ರಂದು 7 ಹೈಸ್ಪೀಡ್ ರೈಲ್ ಕಾರಿಡಾರ್‌ಗಳನ್ನು ಘೋಷಣೆ ಮಾಡಿದ್ದಾರೆ. ಈ ಘೋಷಣೆಯಲ್ಲಿ ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್ (Chennai-Bengaluru High Speed Rail Corridor) ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ 6 ಗಂಟೆಗಳಿಗಿಂತ ಹೆಚ್ಚು ಪ್ರಯಾಣ ಸಮಯ ಬೇಕಾಗುವ ಈ ಮಾರ್ಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.

ಇನ್ನು ನಿರ್ಮಲಾ ಸೀತಾರಾಮನ್ ಈ ಯೋಜನೆ ಘೋಷಣೆ ಬೆನ್ನಲ್ಲೇ, ಕೇಂದ್ರ ರೈಲ್ವೇ ಸಚಿವರು ಅಶ್ವಿನಿ ವೈಷ್ಣವ್ ಅವರು ಈ ಯೋಜನೆಯನ್ನು "ಸೌತ್ ಹೈಸ್ಪೀಡ್ ಡೈಮಂಡ್" ಎಂದು ಕರೆದಿದ್ದಾರೆ. ಏಕೆಂದರೆ ಈ ರೈಲ್ ಕಾರಿಡಾರ್ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಸಂಪರ್ಕಿಸಲಿದೆ.
ಭಾರತದಲ್ಲಿ ಪ್ರಮುಖ ನಗರಗಳ ನಡುವೆ ಕ್ರಾಂತಿಕಾರಿ ಬದಲಾವಣೆ ತರಬಲ್ಲ 7 ನೂತನ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಕಾರಿಡಾರ್‌ಗಳು ಮಹಾನಗರಗಳಿಗೆ ಸುಗಮ ಸಂಪರ್ಕ ಒದಗಿಸಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು ಸುಮಾರು 4,000 ಕಿಲೋಮೀಟರ್ ಉದ್ದಕ್ಕೆ ವಿಸ್ತರಿಸಲಿರುವ ಈ ಏಳು ಕಾರಿಡಾರ್‌ಗಳು ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಹಾಗೂ ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಕಾರ್ಯಾಚರಣ ಮಾಡಲಿದೆ. ಅಂದಾಜು ₹16 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಯೋಜನೆಗಳು ಹೊಂದುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ದೇಶದಾದ್ಯಂತ ಎಲ್ಲಾ ಹೈಸ್ಪೀಡ್ ರೈಲು ಮಾರ್ಗಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಈ ಏಳು ನೂತನ ಕಾರಿಡಾರ್‌ಗಳು ದೇಶದ ಸಾರಿಗೆ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ರೈಲು ಕಾರಿಡಾರ್‌ಗಳು ಪ್ರಯಾಣದ ಅವಧಿಯನ್ನು ಸಹ ಗಣನೀಯವಾಗಿ ಕಡಿಮೆ ಮಾಡಲಿದೆ.
ದಕ್ಷಿಣ ಭಾರತದ ರೈಲ್ವೇ ಮಾರ್ಗಗಳ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್ ಪ್ರಮುಖ ಹೈಸ್ಪೀಡ್ ಕಾರಿಡಾರ್ ಆಗಲಿವೆ ಎಂದು ಭರವಸೆ ನೀಡಿದರು. ಈ ಯೋಜನೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಐದು ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಒಂದು ಸೇವೆ, ಹಲವು ಪ್ರಯೋಜನ!
ಒಂದು ವೇಳೆ ಈ ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದರೆ ಪ್ರಯಾಣ ಸಮಯ ಕೂಡಾ ಇಳಿಕೆಯಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಈ ರೈಲ್ವೇ ಕಾರಿಡಾರ್‌ನಿಂದಾಗಿ ಚೆನ್ನೈ-ಬೆಂಗಳೂರು ಪ್ರಯಾಣ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಯಲಿದೆ. ಬೆಂಗಳೂರು-ಹೈದರಾಬಾದ್ ಸಂಚಾರ ಸುಮಾರು 2 ಗಂಟೆಗಳಲ್ಲಿ ಮುಗಿಯುತ್ತದೆ. ಹಾಗೆಯೇ ಚೆನ್ನೈ-ಹೈದರಾಬಾದ್‌ಗೆ 2 ಗಂಟೆ 55 ನಿಮಿಷಗಳು, ಮುಂಬೈ-ಪುಣೆಗೆ 48 ನಿಮಿಷಗಳು, ಪುಣೆ-ಹೈದರಾಬಾದ್‌ಗೆ 1 ಗಂಟೆ 55 ನಿಮಿಷಗಳು, ವಾರಣಾಸಿ-ಸಿಲಿಗುರಿಗೆ ಅಂದಾಜು 2 ಗಂಟೆ 55 ನಿಮಿಷಗಳು, ದೆಹಲಿ-ವಾರಣಾಸಿ ಪ್ರಯಾಣಕ್ಕೆ 3 ಗಂಟೆ 50 ನಿಮಿಷಗಳಲ್ಲಿ ತಲುಪಲಿದೆ ಎಂದು ಸಚಿವರು ಹೇಳಿದ್ದಾರೆ.
ಯಾವಾಗ ಆರಂಭ?
ಸದ್ಯ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಇನ್ನೂ ಪ್ರಸ್ತಾಪದ ಹಂತದಲ್ಲಿದೆ. ಆದ್ದರಿಂದ ಸಂಪೂರ್ಣ ಆರಂಭದ ದಿನಾಂಕ ಇನ್ನೂ ನಿರ್ಧರಿಸಲಾಗಿಲ್ಲ. ಸರ್ವೇಗಳು, ಡಿಪಿಆರ್ ತಯಾರಿ ನಡೆಯುತ್ತಿದ್ದು, ನಂತರ ನಿರ್ಮಾಣ ಕೆಲಸಗಳು ಆರಂಭವಾಗಲಿದೆ. ವರದಿ ಪ್ರಕಾರ, ಈ ಸೇವೆಗಳು 2027 ರ ನಂತರವೇ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications