ಮೆಟ್ರೋ, ಫ್ಲೈಓವರ್, ಅಂಡರ್ ಪಾಸ್ (Underpass) ಏನೇ ಬರಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆ ಮಾತ್ರ ಕಮ್ಮಿಯಾಗಲ್ಲ. ದಿನ ಹೋದಂತೆ ಗಾಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅಲ್ಲದೇ ಕಡಿಮೆಯಂತೂ ಆಗುತ್ತಿಲ್ಲ. ಇದೀಗ ಹಲವು ವರ್ಷಗಳ ಕನಸಿನ ಅಂಡರ್‌ಪಾಸ್, ಹಲವು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಬೆಂಗಳೂರಿನ ಕುಂದಲಹಳ್ಳಿ ಅಂಡರ್‌ಪಾಸ್ 3 ವರ್ಷಗಳ ಹಿಂದೆ, ಕೋಟಿಗಟ್ಟಲೆ ಖರ್ಚು ಮಾಡಿ ಹಲವು ಉದ್ದೇಶಗಳನ್ನು ಇಟ್ಟುಕೊಂಡು ನಿರ್ಮಾಣ ಮಾಡಲಾಗಿತ್ತು. ವಿಶೇಷವಾಗಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಲ್ಲಿ ನಿರ್ಮಾಣವಾದ ಈ ಅಂಡರ್‌ಪಾಸ್, ಇದೀಗ ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಅದರಲ್ಲೂ ಡೈಲಿ ಆಫೀಸ್ ಹೋಗುವವರ ಗೋಳು ಕೇಳೋದೆ ಬೇಡ.

ಮಾರತಹಳ್ಳಿ ಮತ್ತು ವರ್ತೂರು ನಡುವೆ ಸುಗಮ ಸಂಚಾರ, ಸಿಗ್ನಲ್-ಮುಕ್ತ ಸಂಚಾರ ಒದಗಿಸಲು ನಿರ್ಮಿಸಲಾಗಿದ್ದ ಈ ಅಂಡರ್‌ಪಾಸ್, ಐಟಿಪಿಎಲ್ ಮತ್ತು ಕಾಡುಗೋಡಿಗೆ ಪ್ರಮುಖ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿತ್ತು. ಆದ್ರೆ ಇದೀಗ ಚಾಲಕರಿಗೆ ಇದೇ ದೊಡ್ಡ ತಲೆನೋವಾಗಿಬಿಟ್ಟಿದೆ.ಅದರಲ್ಲೂ ಈ ಕುಂದಲಹಳ್ಳಿ ಅಂಡರ್‌ಪಾಸ್ ಮಾರ್ಗ ಬೆಳಿಗ್ಗೆ, ಸಂಜೆ ವೇಳೆಗಂತೂ ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ.
ಈ ಬಗ್ಗೆ ಸಂಚಾರ ಪೊಲೀಸರು ಹೇಳೋದೇನು?
ಸಂಚಾರ ಪೊಲೀಸರ ಪ್ರಕಾರ, ವರ್ತೂರು ಕಡೆಯ ಕಿರಿದಾದ ಎಕ್ಸಿಟ್ ರ‍್ಯಾಂಪ್ ಮತ್ತು ರಸ್ತೆಯಲ್ಲಿನ ಹಲವು ಯು-ಟರ್ನ್‌ಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿವೆ. ಅಂಡರ್‌ಪಾಸ್‌ನಿಂದ ಕೇವಲ 100 ಮೀಟರ್‌ಗಳಲ್ಲಿ ವೈಬ್‌ಗಯಾರ್ ಶಾಲಾ ರಸ್ತೆಯ ಕಡೆಗೆ ಸಾಗುವ ಒಂದು ಯು-ಟರ್ನ್ ಇದೆ. ಈ ತಿರುವು ತೆಗೆದುಕೊಳ್ಳಲು ಕಾಯುತ್ತಿರುವ ವಾಹನಗಳು ರಸ್ತೆಗೆ ಅಡ್ಡಲಾಗಿದೆ ನಿಲ್ಲುತ್ತದೆ. ಇದರಿಂದ ಮಾರ್ಗದಲ್ಲಿ ಸಂಪೂರ್ಣವಾಗಿ ಸಂಚಾರದಲ್ಲಿ ದಟ್ಟಣೆಯಾಗುತ್ತದೆ ಎನ್ನಲಾಗಿದೆಎ.
ಈ ಹಿಂದೊಮ್ಮೆ ಪೊಲೀಸರು ವೈಬ್‌ಗಯಾರ್ ಯು-ಟರ್ನ್ ಅನ್ನು ಮುಚ್ಚಿ, 500 ಮೀಟರ್ ಮುಂದಿರುವ ಥೂಬರಹಳ್ಳಿ ಯು-ಟರ್ನ್ ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಯ್ತು. ಈ ಪರಿಣಾಮ ಮತ್ತೆ ವೈಬ್‌ಗಯಾರ್ ತಿರುವನ್ನು ತೆರೆಯಬೇಕಾಯಿತು. ಇನ್ನು ಮಾರತಹಳ್ಳಿ ಬ್ರಿಡ್ಜ್ ಸಿಗ್ನಲ್‌ನಿಂದ ಬರುವ ವಾಹನಗಳು ಸ್ಪೈಸ್ ಗಾರ್ಡನ್ ಮೇಲ್ಸೇತುವೆಯ ಮೂಲಕ ಅಂಡರ್‌ಪಾಸ್ ಕಡೆಗೆ ಸಾಗುವಾಗ ಯು-ಟರ್ನ್‌ಗಳಲ್ಲಿ ವಾಹನಗಳು ನಿಲ್ಲುವುದರಿಂದ ಈ ಸಂಚಾರ ದಟ್ಟಣೆ ಆಗುತ್ತದೆ ಎನ್ನಲಾಗಿದೆ.
ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿರುವ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಪನತ್ತೂರು ಜಂಕ್ಷನ್ ಅನ್ನು ವೈಟ್-ಟಾಪಿಂಗ್ ಕಾಮಗಾರಿಗಾಗಿ ಮುಚ್ಚಿದ ನಂತರ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. "ಪ್ರತಿದಿನ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ದಿನದಲ್ಲಿ ಲಕ್ಷಗಟ್ಟಲೆ ವಾಹನಗಳು ಸಂಚಾರ ಮಾಡುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತದೆ" ಎಂದು ಹೇಳಿದ್ದಾರೆ. ಪನತ್ತೂರು ಮತ್ತು ಬಾಲಗೆರೆ ಜಂಕ್ಷನ್‌ಗಳು ಮತ್ತೆ ತೆರೆದ ನಂತರ ಪರಿಸ್ಥಿತಿ ಸುಧಾರಿಸಬಹುದು ಎಂದು ಟ್ರಾಫಿಕ್ (ಪೂರ್ವ) ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಯೂಟರ್ನ್ ಅಗತ್ಯವಾಗಿದ್ದರೂ, ಯೂಟರ್ನ್‌ಗಾಗಿ ಪ್ರತ್ಯೇಕ ಮಾರ್ಗ ರಚಿಸಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.


Click it and Unblock the Notifications