ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಮೆಟ್ರೊ ಪ್ರಯಾಣಿಕರು ದಿನದಿಂದ ದಿನಕ್ಕೆ ಕಡಿಮೆಯಾಗತ್ತಲೇ ಇದೆ. ಹೌದು, 2017ರ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಫೆಬ್ರವರಿ 9ರ ಭಾನುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.ಈ ಕುರಿತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳ ಚರ್ಚೆಗಳು ನಡೆಯುತ್ತಲೇ ಇದೆ.
ಮೆಟ್ರೋ ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ.5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎಂದು ಬಿಎಂಆರ್‌ಸಿಎಲ್ ಸ್ವಷ್ಟವಾಗಿ ತಿಳಿಸಿದ್ದರೂ ಮೆಟ್ರೋ ಪ್ರಯಾಣ ದರ ಏರಿಕೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆ ಮೆಟ್ರೋದಲ್ಲಿ ಕುಸಿತ
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಇದೇ ಮೊದಲ ಭಾರೀ ಕಂಡು ಬರುತ್ತಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ.
ಮೆಟ್ರೋ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.
ಮೆಟ್ರೋ ಖಾಲಿ ಖಾಲಿ
ಸೋಮವಾರ, ಕಚೇರಿ ದಟ್ಟಣೆಯ ಸಮಯದಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಇಷ್ಟೊಂದು ಖಾಲಿ ಸೀಟುಗಳನ್ನು ನಾನು ಎಂದಿಗೂ ನೋಡಿರಲಿಲ್ಲ. ವಾಸ್ತವವಾಗಿ, ಬೆಲೆ ಏರಿಕೆಯಿಂದಾಗಿ ಯಾವುದೇ ಶಾಲಾ ವಿದ್ಯಾರ್ಥಿಗಳು ಹಾಜರಿರಲಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಏರಿಕೆಯ ಬಗ್ಗೆ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತವೆ. ಇನ್ನೂ ಕೆಲವರು ಖಾಲಿ ಖಾಲಿ ಎಂದು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಟಿಕೆಟ್ ರಹಿತ ಆದಾಯ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಗಮನ ನೀಡಬೇಕು ಎಂದು ಬಿಜೆಪಿ ನಾಯಕರು ಸಲಹೆಗಳನ್ನು ನೀಡುತ್ತಿದ್ದಾರೆ.
ಮೆಟ್ರೋ ಬಹಿಷ್ಕಾರ ಆರಂಭಿಸಿ
ಕೆಲವು ದಿನಗಳವರೆಗೆ ಮೆಟ್ರೋ ಬಳಸದೇ ಇದ್ದರೆ ನಿಮಗೆ ಹೆಚ್ಚಿನ ನಷ್ಟವಾಗುವುದಿಲ್ಲ, ಆದರೆ ಬಿಎಂಆರ್‌ಸಿಎಲ್ ತನ್ನ ಆದಾಯ ಕಡಿಮೆಯಾದರೆ ಈ ಅನ್ಯಾಯದ ದರ ಏರಿಕೆಯನ್ನು ಹಿಂಪಡೆಯಬೇಕಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರ ಮೆಟ್ರೋ ಬಹಿಷ್ಕಾರಕ್ಕೆ ಒತ್ತಾಯಿಸಿದ್ದಾರೆ.
ದರ ಏರಿಕೆ ಮಾತ್ರವಲ್ಲದೆ, ಸ್ಮಾರ್ಟ್ ಕಾರ್ಡ್‌ಗಳಲ್ಲಿನ ಕನಿಷ್ಠ ಉಳಿತಾಯ ಮಿತಿಯನ್ನು 50ರಿಂದ 90ಕ್ಕೆ ಏರಿಸಿರುವ ಬಗ್ಗೆಯೂ ಟೀಕೆಗಳು ಕೇಳಿ ಬಂದಿವೆ .
ಮೆಟ್ರೋ ದರ ಹೆಚ್ಚಳ; ಹೆಚ್ಚುತ್ತಿರುವ ಅಸಮಾಧಾನ
ರಿಯಾಯಿತಿಗಳ ಹೊರತಾಗಿಯೂ, ದರ ಹೆಚ್ಚಳವು ದೈನಂದಿನ ಪ್ರಯಾಣಿಕರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ಮೆಟ್ರೋ ಪ್ರಯಾಣವು ಹೆಚ್ಚು ಕೈಗೆಟುಕುವಂತಿಲ್ಲ ಎಂದು ವಾದಿಸುತ್ತಾರೆ. #BoycottMetro ಎಂಬ ಹ್ಯಾಶ್‌ಟ್ಯಾಗ್ ಆನ್‌ಲೈನ್‌ನಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ, ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಮೆಟ್ರೋದಲ್ಲಿ ಜನಸಂದಣಿ ಈಗಾಗಲೇ ಕಡಿಮೆಯಾಗಿರುವುದನ್ನು ನಾನು ಗಮನಿಸಿದ್ದೇನೆ. ಪರ್ಪಲ್ ಲೈನ್‌ನಲ್ಲಿ, ಎಂಜಿ ರಸ್ತೆಯ ಸುತ್ತಮುತ್ತಲಿನ ಶಾಲೆಗಳಿಗೆ ಪ್ರಯಾಣಿಸುತ್ತಿದ್ದ ಮಕ್ಕಳು ಮೆಟ್ರೋದಲ್ಲಿ ಕಣ್ಮರೆಯಾಗಿದ್ದಾರೆ. ಪ್ರಯಾಣ ದರ ಏರಿಕೆಯು ನಿಯಮಿತ ಬಳಕೆದಾರರನ್ನು ದೂರವಿಡುತ್ತಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ಮೆಟ್ರೋ ದರ ಏರಿಕೆ ಆಗಿರುವುದರಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ಕಡೆಗೆ ಮುಖ ಮಾಡುತ್ತಿದ್ದಾರೆ.ಫೆಬ್ರವರಿ 3ರ ಸೋಮವಾರ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 36.62 ಲಕ್ಷ. ಫೆಬ್ರವರಿ 10ರ ಸೋಮವಾರ ಇದು 37.22 ಲಕ್ಷಕ್ಕೆ ಏರಿಕೆಯಾಗಿದೆ.
ಮೆಟ್ರೋ ದರ ಏರ ಏರಿಕೆಯ ವಿವರ
0-2 ಕಿಲೋಮೀಟರ್‌ಗಳ ನಡುವಿನ ಪ್ರಯಾಣ ದರ 10 ರೂ
2 ಕಿಮೀ ನಿಂದ 4 ಕಿಮೀಗೆ ಪ್ರಯಾಣ ದರ 20 ರೂ
4 ಕಿಮೀ ನಿಂದ 6 ಕಿಮೀಗೆ 30 ರೂ
6 ಕಿಮೀ ನಿಂದ 8 ಕಿಮೀ 40 ರೂ
8 ಕಿಮೀ ನಿಂದ 10 ಕಿಮೀ 50 ರೂ
10 ಕಿಮೀ ನಿಂದ 12 ಕಿಮೀಗೆ 60 ರೂ
15 ಕಿಮೀ ನಿಂದ 20 ಕಿಮೀಗೆ 70 ರೂ
20 ಕಿಮೀ ನಿಂದ 25 ಕಿಮೀ 80 ರೂ
25 ಕಿಮೀ ನಿಂದ 30 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ಪ್ರಯಾಣ ದರ 90 ಆಗಿರುತ್ತದೆ


Click it and Unblock the Notifications