ಬೆಂಗಳೂರಿಗರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹಳದಿ ಮಾರ್ಗದ ಮೆಟ್ರೋ ಹಲವು ತಿಂಗಳಿಂದ ಪೂರ್ಣಗೊಂಡಿದ್ದರೂ, ಕಾರ್ಯಾರಂಭವು ಪದೇ ಪದೆ ವಿಳಂಬವಾಗುತ್ತಿತ್ತು. ಇದೀಗ, ಈ ಸಂಕಷ್ಟ ದೂರ ಆಗುವ ಕಾಲ ಸನ್ನಿಹಿತವಾಗಿದೆ. ಹೌದು, ಹಳದಿ ಮಾರ್ಗದ ಮೆಟ್ರೋ ತನ್ನ ರೋಲಿಂಗ್ ಸ್ಟಾಕ್‌ಗೆ ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದಿದೆ. ಈ ತಿಂಗಳಾಂತ್ಯದ (ಮೇ ಅಂತ್ಯ) ವೇಳೆಗೆ CMRS ಪರಿಶೀಲನೆ ಸಾಧ್ಯತೆಯಿದೆ. ಬೆಂಗಳೂರಿನ ಮಂದಿ ಆದಷ್ಟು ಬೇಗ ಹಳದಿ ಮಾರ್ಗದಲ್ಲಿ ಪ್ರಯಾಣಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಹೌದು,ಬಹುನಿರೀಕ್ಷಿತ ಹಳದಿ ಮಾರ್ಗದ ಮೆಟ್ರೋ ಮೂರನೇ ರೈಲು ಸೆಟ್ ಒಂದು ವಾರದೊಳಗೆ ಸೇವೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳದಿ ಮಾರ್ಗದ ಕಾಮಗಾರಿ ಹಲವಾರು ತಿಂಗಳಿಂದ ಪೂರ್ಣಗೊಂಡಿದ್ದರೂ, ಅದರ ಕಾರ್ಯಾರಂಭವು ಪದೇ ಪದೇ ವಿಳಂಬವಾಗುತ್ತಿತ್ತು. ಚಾಲಕರಹಿತ ರೈಲು ಸೆಟ್‌ಗಳ ವಿತರಣೆಯ ವಿಳಂಬದಿಂದಾಗಿ ಈ ಸಮಸ್ಯೆ ಸಂಭವಿಸಿತ್ತು.ಆದರೆ ಇದೀಗ ಎಲ್ಲಾ ಚಾಲಕರಹಿತ ರೈಲು ಬೋಗಿಗಳು ಬಂದು ತಲುಪಿವೆ.ಈ ವಾರವೇ CMRS ಪರಿಶೀಲನೆ ಕೂಡ ನಡೆಸಲಾಗುತ್ತದೆ. ಜೂನ್ ತಿಂಗಳಲ್ಲಿ ಚಾಲಕರಹಿತ ರೈಲು ಓಡಾಟ ಮಾಡುತ್ತದೆ. ಇದು ಆರಂಣದಲ್ಲಿ ಕೆಲವು ಸೀಮಿತ ಸಮಯದಲ್ಲಿ ಮಾತ್ರ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ದಕ್ಷಿಣ ವಲಯದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ತಪಾಸಣೆ ವೇಳಾಪಟ್ಟಿಯನ್ನು ಪ್ರಕಟಿಸುವುದಕ್ಕಾಗಿ BMRCL ಅಧಿಕಾರಿಗಳು ಕಾಯುತ್ತಿದ್ದಾರೆ. ಈಗಾಗಲೇ ಅಗತ್ಯವಿರುವ ಹೆಚ್ಚಿನ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಸಿಗ್ನಲಿಂಗ್ ಪ್ರಮಾಣೀಕರಣವನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ತಿಂಗಳ ಅಂತ್ಯದ ವೇಳೆಗೆ ಶಾಸನಬದ್ಧ ತಪಾಸಣೆ ನಡೆಯಲಿದೆ ಎಂದಿದ್ದಾರೆ.
CMRS ತಪಾಸಣೆ ಕಡ್ಡಾಯ
ಕಾರ್ಯಾಚರಣೆಗಳು ಪ್ರಾರಂಭವಾಗುವ ಮೊದಲು CMRS ತಪಾಸಣೆ ಕಡ್ಡಾಯ. ಯಾಕೆಂದರೆ ಈ ಪರಿಶೀಲನೆಯಲ್ಲಿ ರೈಲು ಹಳಿಗಳು, ನಿಲ್ದಾಣಗಳು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಪ್ರವೇಶ ಮತ್ತು ನಿರ್ಗಮನ ಬಿಂದುಗಳು ಮತ್ತು ರೈಲು ಸೆಟ್‌ಗಳ ಪರಿಶೀಲನೆಗಳನ್ನು ಒಳಗೊಂಡಿರುತ್ತದೆ. ತಪಾಸಣೆಯ ನಂತರ, ಯಾವುದೇ ಸೂಚಿಸಲಾದ ಮಾರ್ಪಾಡುಗಳನ್ನು ಕಾರ್ಯಗತಗೊಳಿಸಲು BMRCL ಗೆ ಸುಮಾರು ಎರಡು ವಾರಗಳ ಅಗತ್ಯವಿದೆ. ಈ ಸಮಯದ ಆಧಾರದ ಮೇಲೆ, ಹಳದಿ ಮಾರ್ಗವು ಜೂನ್ ಮಧ್ಯ ಅಥವಾ ಅಂತ್ಯದ ವೇಳೆಗೆ ಸೇವೆಗಳನ್ನು ಪ್ರಾರಂಭಿಸಬಹುದು ಎಂದು ಅಧಿಕಾರಿ ಹೇಳಿದರು.
ಹಳದಿ ಮಾರ್ಗ
ಹಳದಿ ಮಾರ್ಗವು ಆರ್‌ವಿ ರಸ್ತೆಯಿಂದ, ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದವಿದ್ದು, ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ. ಇದು 16 ನಿಲ್ದಾಣಗಳನ್ನು ಹೊಂದಿದ್ದು, ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಸಿರು ಮಾರ್ಗ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಮಾರ್ಗವನ್ನು ಸಂಪರ್ಕಿಸುತ್ತದೆ. ಈ ಕಾರಿಡಾರ್ ದಕ್ಷಿಣ ಬೆಂಗಳೂರಿನ ನಿವಾಸಿಗಳು ಮತ್ತು ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಾರ್ಪೊರೇಟ್ ಕೇಂದ್ರಗಳಿಗೆ ಸಂಪರ್ಕವನ್ನು ತಲುಪುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಕೇಂದ್ರ ರೇಷ್ಮೆ ಮಂಡಳಿ, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲು ಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರತೇನ ಅಗ್ರಹಾರ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರದಲ್ಲಿ ಹಳದಿ ಮಾರ್ಗದ ನಿಲ್ದಾಣಗಳು ಇವೆ.
ಇದುವರೆಗೂ ಬೆಂಗಳೂರಿನಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ಮಾಡುತ್ತಿದೆ. ಇದೀಗ ಹಳದಿ ಮೆಟ್ರೋ ರೈಲು ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸಲು ಮುಂದಾಗಿದೆ ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ.


Click it and Unblock the Notifications