ರಾಜಧಾನಿ ಬೆಂಗಳೂರು ಟ್ರಾಫಿಕ್ ಕಿರಿ ಕಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಂದರೆ ಬಹುತೇಕ ಜನರಿಗೆ ಮೊದಲಾಗಿ ನೆನಪಾಗುವ ಸ್ಥಳ ಗೊರಗುಂಟೆಪಾಳ್ಯ ಜಂಕ್ಷನ್. ತುಮಕೂರು ರಸ್ತೆ ಮತ್ತು ಹೊರವರ್ತುಲ ರಸ್ತೆ (ORR) ಸೇರುವ ಈ ಪ್ರಮುಖ ಸಂಪರ್ಕ ಕೇಂದ್ರದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೈಗಾರಿಕಾ ಪ್ರದೇಶಗಳು, ವಸತಿ ಪ್ರದೇಶಗಳು ಹಾಗೂ ನಗರಕ್ಕೆ ಹೊರಗಿನಿಂದ ಬರುವ ವಾಹನಗಳು ಇಲ್ಲಿ ಒಂದೇ ಸ್ಥಳದಲ್ಲಿ ಸೇರುವುದರಿಂದ ದಟ್ಟಣೆ ಸಾಮಾನ್ಯವಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ವಾಹನಗಳು ಗಂಟೆಗಟ್ಟಲೆ ನಿಂತುಕೊಳ್ಳುವುದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಈ ನಿರಂತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 'ಬೆಂಗಳೂರು ಪಶ್ಚಿಮ ನಗರ ನಿಗಮ' ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಣ್ಣ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚೆ ನಡೆದಿದೆ. ಭವಿಷ್ಯದಲ್ಲಿ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ, ದೀರ್ಘಕಾಲೀನ ಪರಿಹಾರ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗೊರಗುಂಟೆಪಾಳ್ಯವು ವಾಯುವ್ಯ ಬೆಂಗಳೂರಿನ ಪ್ರಮುಖ ವಾಹನ ಸಂಪರ್ಕ ಕೇಂದ್ರವಾಗಿದೆ. ಇದು ತುಮಕೂರು ರಸ್ತೆ ಮೂಲಕ ರಾಜ್ಯದ ಹಲವು ಜಿಲ್ಲೆಗಳ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಹೊರವರ್ತುಲ ರಸ್ತೆ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಒದಗಿಸುತ್ತದೆ. ಭಾರಿ ಸರಕು ಸಾಗಣೆ ವಾಹನಗಳು, ಕಾರುಗಳು, ಬೈಕ್‌ಗಳು ಮತ್ತು ಬಸ್‌ಗಳ ದಟ್ಟಣೆ ಹೆಚ್ಚುತ್ತಿರುವುದರಿಂದ ಈ ಜಂಕ್ಷನ್ ಟ್ರಾಫಿಕ್ ಹಾಟ್‌ಸ್ಪಾಟ್ ಆಗಿದೆ.
ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣವಾದರೆ, ನೇರವಾಗಿ ಸಾಗುವ ವಾಹನಗಳನ್ನು ಭೂಗತ ಮಾರ್ಗದ ಮೂಲಕ ಕಳುಹಿಸುವ ಯೋಜನೆ ಇದೆ. ಇದರಿಂದ ಮೇಲ್ಮೈ ಜಂಕ್ಷನ್ ಮೇಲಿನ ಒತ್ತಡ ಕಡಿಮೆಯಾಗಬಹುದು. ಸಿಗ್ನಲ್‌ಗಳಲ್ಲಿ ವಾಹನ ನಿಲುಗಡೆ ಸಮಯ ಕಡಿಮೆಯಾಗುವುದರಿಂದ ಸಂಚಾರ ಸುಗಮವಾಗುವ ನಿರೀಕ್ಷೆಯಿದೆ. ನಗರಾಭಿವೃದ್ಧಿ ಅಧಿಕಾರಿಗಳ ಪ್ರಕಾರ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಾಗಿದೆ.
ಈ ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ವಿವರವಾದ ಅಧ್ಯಯನ ಆರಂಭವಾಗಿದೆ. ನಿರ್ಮಾಣ ವೆಚ್ಚ, ಮೆಟ್ರೋ ಪಿಲ್ಲರ್‌ಗಳು ಹಾಗೂ ಇತರ ಮೂಲಸೌಕರ್ಯಗಳ ಮೇಲೆ ಆಗುವ ಪರಿಣಾಮ, ಭೂಸ್ವಾಧೀನದ ಅಗತ್ಯತೆ, ಮತ್ತು ಟ್ರಾಫಿಕ್ ದಟ್ಟಣೆಯಲ್ಲಿ ಉಂಟಾಗುವ ಇಳಿಕೆ ಇತ್ಯಾದಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಮೆಟ್ರೋ ಮಾರ್ಗ ಮತ್ತು ಫ್ಲೈಓವರ್‌ಗಳು ಈಗಾಗಲೇ ಇರುವುದರಿಂದ ತಾಂತ್ರಿಕ ಸವಾಲುಗಳೂ ಇದ್ದೇ ಇವೆ.
ಒಂದು ವೇಳೆ ಅಧ್ಯಯನ ಸಕಾರಾತ್ಮಕ ವರದಿ ನೀಡಿದರೆ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಬಜೆಟ್ ಮೂಲಕ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಸರ್ಕಾರದ ಅಂತಿಮ ಅನುಮೋದನೆ ಮತ್ತು ವೆಚ್ಚದ ಅಂದಾಜಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಗೊರಗುಂಟೆಪಾಳ್ಯ ಟ್ರಾಫಿಕ್ ಸಮಸ್ಯೆಗೆ ಈ ಸುರಂಗ ರಸ್ತೆ ಯೋಜನೆ ಶಾಶ್ವತ ಪರಿಹಾರ ನೀಡುತ್ತದೆಯೇ ಎಂಬುದನ್ನು ಮುಂದಿನ ದಿನಗಳು ತೋರಿಸಬೇಕಿದೆ.


Click it and Unblock the Notifications