ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15 (ಮಂಗಳವಾರ) ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿರುವ ಐಟಿ, ಬಿಟಿ ಹಾಗೂ ಖಾಸಗಿ ಕಂಪನಿಗಳಿಗೆ ಬುಧವಾರ ವರ್ಕ್ ಫ್ರಮ್ ಹೋಮ್ ನೀಡುವಂತೆ ಸಲಹೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಜೋರಾಗಿದೆ. ಸೋಮವಾರದಿಂದ ಮಳೆ ರಾಜ್ಯ ರಾಜ್ಯಧಾನಿಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದೆ. ಇದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಗಂಟೆಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದು, ಕೆಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಇದನ್ನೇಲ್ಲಾ ಗಮನಸಿದ ರಾಜ್ಯ ಸರ್ಕಾರ ಬುಧವಾರ ಐಟಿ, ಬಿಟಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿ ವರ್ಕ್ ಫ್ರಮ್ ಹೋಮ್ ಮಾಡುವಂತೆ ಸಲಹೆ ನೀಡಿದೆ. ಭಾರಿ ಮಳೆ ಆಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.

ಮನೆಯಿಂದ ಕೆಲಸಕ್ಕೆ ಸಲಹೆ
ನಗರದಲ್ಲಿ ಭಾರೀ ಮಳೆ ಆಗುತ್ತಿದ್ದು ಇದರಿಂದ ಉದ್ಯೋಗಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ಸಲಹೆಯನ್ನು ನೀಡಿದೆ. ರಸ್ತೆಗಳು ಜಲಾವೃತ ಮತ್ತು ಸಂಚಾರ ದಟ್ಟಣೆಯಿಂದಾಗಿ ಅಸ್ತವ್ಯಸ್ಥವಾಗುತ್ತದೆ. ಹೀಗಾಗಿ ಕಚೇರಿಗಳಿಗೆ ತೆರಳುವುದು ಕಷ್ಟವಾಗುತ್ತದೆ. ಮುನ್ನೆಚ್ಚರಿಕೆಯಿಂದ ಐಟಿ, ಬಿಟಿ ಹಾಗೂ ಖಾಸಗಿ ಕಂಪನಿಗಳಿಗೆ ಅಕ್ಟೋಬರ್ 16 ಬುಧವಾರ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡುವಂತೆ ಸಲಹೆ ನೀಡಲಾಗಿದೆ.
ಶಾಲೆಗಳಿಗೆ ರಜೆ
ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆ ಶಾಲೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ ಬುಧವಾರ ರಜೆ ಘೋಷಿಸಿದ್ದಾರೆ. ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಕ್ಟೋಬರ್ 17ರಂದು ಮಹರ್ಷಿ ವಾಲ್ಮಿಕಿ ಜಯಂತಿ ಇರುವುದರಿಂದ ರಜೆ ಇರುತ್ತದೆ.
ಬಿಡದೆ ಸುರಿಯುತ್ತಿರುವ ಮಳೆ
ಸೋಮವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಇದರಿಂದ ಸಂಚಾರ ದಟ್ಟಣೆ ಆಗಿದ್ದು, ಜನ ಕಂಗಾಲಾಗಿದ್ದಾರೆ. ಹೀಗಾಗಿ ಕೆಲಸಗಾರರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಬೇಕೆಂದು ಕೇಳಿಕೊಳ್ಳಲಾಗಿತ್ತು.
ವಾಹನ ಸವಾರರ ಕಿರಿಕಿರಿ
ಬೆಂಗಳೂರಿನ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಗಿದೆ. ಇನ್ನು ಬೆಂಗಳೂರಿನ ಕೆಲ ಹೊರ ವಲಯಗಳಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ, ವಾಹನಗಳು ಮುಳುಗಡೆ ಆಗಿವೆ. ಇನ್ನು ರಸ್ತೆಗೆ ವಾಹನಗಳು ಇಳಿಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನ ಕಂಗೆಟ್ಟಿದ್ದು ಸಾರ್ವಜನಿಕ ಸಾರಿಗೆಗಳ ಮೊರೆ ಹೋಗುತ್ತಿದ್ದಾರೆ. ಇನ್ನು ನಗರದ ಹಲವೆಡೆ ನೀರು ಮನೆಗಳಿಗೆ ನುಗ್ಗಿದೆ.
ತಮಿಳು ನಾಡಿನಲ್ಲೂ ಮಳೆ ಕಾಟ
ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿರುವ ಹಿನ್ನೆಲೆ, ಅಕ್ಟೋಬರ್ 15 ರಂದು ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೂಚನೆ ನೀಡಿದ್ದಾರೆ.


Click it and Unblock the Notifications