ಬೆಂಗಳೂರು: ಅದೆಷ್ಟೋ ಮಂದಿ ಉದ್ಯೋಗ ಅರಿಸಿಕೊಂಡು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಾರೆ. ಹಲವು ಸಮಸ್ಯೆಗಳಿಗೆ ಪರಿಹಾರವಾಗಿರುವ ಬೆಂಗಳೂರು (Bengaluru), ಇತ್ತೀಚೆಗೆ ಟ್ರಾಫಿಕ್ ದಟ್ಟಣೆಯಿಂದ ಭಾರೀ ವೈರಲ್ ಆಗುತ್ತಿದೆ. ಅಲ್ಲದೇ ಇತ್ತೀಚೆಗೆ ವರದಿಯೊಂದು 2025ರ ಟ್ರಾಫಿಕ್ ದಟ್ಟಣೆಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲಾ ಕಾರಣಗಳಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ದಕ್ಷಿಣ ವಲಯವು ದಕ್ಷಿಣ ಬೆಂಗಳೂರಿನ 18 ಟ್ರಾಫಿಕ್ ದಟ್ಟಣೆಯ ಸ್ಥಳಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡಿ, ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮೆಟ್ರೋ ವಲಯಗಳು, ಐಟಿ ಕಾರಿಡಾರ್‌ಗಳು ಮತ್ತು ಹೊರವರ್ತುಲ ರಸ್ತೆ ಸೇರಿದಂತೆ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಜನರ ಅನುಕೂಲಕ್ಕಾಗಿ "ಸ್ಕೈವಾಕ್"!
ಈ ಉಪಕ್ರಮವು ಪಾದಚಾರಿಗಳು ಮತ್ತು ವಾಹನಗಳಿಂದಾಗಿ ಜನನಿಬಿಡ ರಸ್ತೆಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ಸುಗಮ ಸಂಚಾರಕ್ಕೆ ದಾರಿಮಾಡಿಕೊಡಲಿದೆ. ಅಪಘಾತ ಸಂಭವಿಸುವ ವಲಯಗಳಲ್ಲಿ ಜನರು ಸುರಕ್ಷಿತವಾಗಿ ರಸ್ತೆ ದಾಟುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಗುರಿ. ಇನ್ನು ಜಿಬಿಎ ಗುರುತಿಸಲಾದ ಎಲ್ಲಾ 18 ಸ್ಥಳಗಳಿಗೆ ವಿವರವಾದ ಪ್ರಸ್ತಾವನೆಗಳನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಯೋಜನೆಗೆ ಅನುಮೋದನೆ, ಅನುದಾನ ಬಿಡುಗಡೆ, ಟೆಂಡರ್ ವಿತರಣೆಯಾದ ನಂತರ ಈ ಯೋಜನೆಯ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಈ ಪ್ರಸ್ತಾವನೆಯಲ್ಲಿ ಕೋಣನಕುಂಟೆ ಕ್ರಾಸ್, ಕುಮಾರಸ್ವಾಮಿ ಲೇಔಟ್ ಜಂಕ್ಷನ್, ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ, ಸಾರಕ್ಕಿ ಜಂಕ್ಷನ್, ವಸಂತಪುರ ಕ್ರಾಸ್, ಉತ್ತರಹಳ್ಳಿ ಜಂಕ್ಷನ್ ಮತ್ತು ಗುಬ್ಬಲಾಳ ಜಂಕ್ಷನ್ ಪ್ರಮುಖವಾಗಿವೆ. ಬೊಮ್ಮನಹಳ್ಳಿ ಸರ್ವಿಸ್ ರಸ್ತೆ, ಮೆಟ್ರೋ ಪಿಲ್ಲರ್‌ಗಳು 119 ಮತ್ತು 130ರ ಬಳಿಯ ರಿಂಗ್ ರೋಡ್, ಈಸ್ಟ್ ಎಂಡ್ ಜಂಕ್ಷನ್, ಬಿಟಿಎಂ ಲೇಔಟ್ 16ನೇ ಮುಖ್ಯ ರಸ್ತೆ, ಇಬ್ಬಲೂರು ಜಂಕ್ಷನ್ ಹಾಗೂ ಆರ್.ವಿ. ಡೆಂಟಲ್ ಕಾಲೇಜು ಜಂಕ್ಷನ್‌ಗಳಲ್ಲಿಯೂ ಸ್ಕೈವಾಕ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಸದ್ಯ ಕೆಲವು ಪ್ರದೇಶಗಳನ್ನು ಮಾತ್ರ ಗುರುತಿಸಲಾಗಿದ್ದು, ಸಂಚಾರ ಅಧ್ಯಯನಗಳು ಮತ್ತು ಸಾರ್ವಜನಿಕ ಬೇಡಿಕೆಯನ್ನು ಆಧರಿಸಿ ನಗರದ ಇತರೆ ಹೆಚ್ಚು ಜನನಿಬಿಡ ವಲಯಗಳಲ್ಲಿಯೂ ಸ್ಕೈವಾಕ್‌ಗಳನ್ನು ನಿರ್ಮಿಸಲು ಅಧಿಕಾರಿಗಳು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ, ಹೊರವರ್ತುಲ ರಸ್ತೆ ಹಾಗೂ ಪ್ರಮುಖ ಐಟಿ ಮತ್ತು ಬಿಟಿ ಕಂಪನಿಗಳಿರುವ ಮಾರ್ಗಗಳಲ್ಲಿ ಸ್ಕೈವಾಕ್ ಭಾರೀ ಅಗತ್ಯವೆಂದು ತೋರಿಸಲಾಗಿದೆ. ಈ ಪ್ರದೇಶಗಳಲ್ಲಿ ದೈನಂದಿನ ವಾಹನ ಸಂಚಾರ ಅತಿ ಹೆಚ್ಚಾಗಿರುವುದರಿಂದ, ಜನ ಸಂಚಾರ ಕೂಡಾ ಹೆಚ್ಚಾಗಿರುವುದರಿಂದ ನಿರಂತರ ವಾಹನ ದಟ್ಟಣೆ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ವಿಶೇಷ ಯೋಜನೆ ಆರಂಭಿಸಲು ಮುಂದಾಗಿದೆ.


Click it and Unblock the Notifications