ಬೆಂಗಳೂರು: ಬೆಂಗಳೂರಂತಲ್ಲ (Bengaluru), ದೇಶದ ಮೂಲೆ ಮೂಲೆಗಳಲ್ಲಿ ಎಷ್ಟೋ ಮಂದಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದೇ ಇಲ್ಲ. ಇನ್ನು ಸಂಚಾರಿ ಪೊಲೀಸರು (Traffic Police) ಸಹ ಎಷ್ಟೋ ನಿಯಮಗಳನ್ನು ಜಾರಿಗೆ ತಂದರೂ, ಚಾಲಕರು ಮಾತ್ರ ಕ್ಯಾರೇ ಅನ್ನದೇ ವಾಹನ ಚಲಾಯಿಸುತ್ತಿದ್ದಾರೆ. ಹೆಲ್ಮೆಟ್ (Helmet) ಹಾಕದೆ ಸಂಚರಿಸುವುದು, ಸಿಗ್ನಲ್ ಜಂಪ್, ಸೀಟ್ ಬೆಲ್ಟ್, ಓವರ್ ಸ್ಪೀಡ್, ಹೀಗೆ ಹಲವು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ (Traffic Rules Break). ಆದರೆ ಈ ಎಲ್ಲಾ ಉಲ್ಲಂಘನೆಗಳನ್ನು ನೋಡಿ ಬೇಸತ್ತ ಬೆಂಗಳೂರಿನ ಟೆಕ್ಕಿಯೊಬ್ಬರು ವಿಶೇಷ ಹೆಲ್ಮೆಟ್ ಪರಿಚಯಿಸಿದ್ದಾರೆ ನೋಡಿ. ಇದನ್ನು ನೋಡಿ ಸ್ವತಃ ಟ್ರಾಫಿಕ್ ಪೊಲೀಸರೇ ಅಚ್ಚರಿಗೊಂಡಿದ್ದಾರೆ.

ನಗರದಲ್ಲಿ ಚಾಲಕರ ನಿಯಮ ಉಲ್ಲಂಘನೆಗಳಿಂದ, ಬೇಸತ್ತ ಬೆಂಗಳೂರಿನ ಟೆಕ್ಕಿ ಪಂಕಜ್ ತನ್ವಾರ್ ಎಂಬವರು, ಇದೀಗ ಹೊಸ ಹೆಲ್ಮೆಟ್ ಪರಿಚಯಿಸಿದ್ದಾರೆ. ಆ ಹೆಲ್ಮೆಟ್‌ಗೆ ಕೃತಕ ಬುದ್ಧಿಮತ್ತೆ (AI) ಅಳವಡಿಸಿದ್ದಾರೆ. ಇದನ್ನು ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವ "ಟ್ರಾಫಿಕ್ ಪೊಲೀಸ್ ಸಾಧನ"ವನ್ನಾಗಿ ಪರಿವರ್ತಿಸಿದ್ದು, ಈ ಆವಿಷ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್!
ಎಕ್ಸ್‌ನಲ್ಲಿ (@the2ndfloorguy) ತಮ್ಮ ಹೊಸ ಅನ್ವೇಷಣೆಯನ್ನು ಶೇರ್ ಮಾಡಿಕೊಂಡ ತನ್ವಾರ್, "ಜನರ ಅಶಿಸ್ತಿನಿಂದ ಬೇಸತ್ತು, ನನ್ನ ಹೆಲ್ಮೆಟ್‌ನ್ನು ಟ್ರಾಫಿಕ್ ಪೊಲೀಸ್ ಸಾಧನವಾಗಿ ಹ್ಯಾಕ್ ಮಾಡಿದೆ" ಎಂದಿದ್ದಾರೆ. ಇನ್ನು ಈ ಹೆಲ್ಮೆಟ್‌ನಲ್ಲಿ ಅಳವಡಿಸಿದ AI ವ್ಯವಸ್ಥೆಯು ನೈಜ ಸಮಯದಲ್ಲಿ ನಿಯಮ ಉಲ್ಲಂಘನೆಗಳನ್ನು ಗುರುತಿಸಿ, ಉಲ್ಲಂಘಿಸಿದವರ ಚಿತ್ರ, ಸ್ಥಳ ಮತ್ತು ನಂಬರ್ ಪ್ಲೇಟ್ ಸಮೇತ ಪೊಲೀಸರಿಗೆ ನೇರವಾಗಿ ಮೇಲ್ ಮೂಲಕ ಕಳುಹಿಸುತ್ತದೆ.
ಬೆಂಗಳೂರಿಗರಿಗೆ ಎಚ್ಚರಿಕೆ ಕೊಟ್ಟ ಟೆಕ್ಕಿ!
ಹೆಲ್ಮೆಟ್ ರಹಿತ ಸವಾರರೊಬ್ಬರನ್ನು ಈ ಸಾಧನ ತಕ್ಷಣ ವರದಿ ಮಾಡಿದ್ದನ್ನು ತನ್ವಾರ್ ತನ್ನ ಪೋಸ್ಟ್ ಮೂಲಕ ವಿವರಿಸಿದ್ದಾರೆ. "ಬೆಂಗಳೂರಿನ ಜನರೇ, ಈಗ ಸುರಕ್ಷಿತವಾಗಿ ವಾಹನ ಚಲಾಯಿಸಿ ಅಥವಾ ಪಶ್ಚಾತ್ತಾಪ ಪಡಿ" ಎಂದು ಶೀರ್ಷಿಕೆ ನೀಡುವ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹಲವರು ಈ ಪೋಸ್ಟ್ ಅನ್ನು ನೋಡಿ "ಬೆಂಗಳೂರಿನ ಅತ್ಯುನ್ನತ ಆವಿಷ್ಕಾರ, ಕೂಲ್ ಎಂಜಿನಿಯರಿಂಗ್" ಎಂದು ಹೊಗಳಿ, ಟೆಕ್ ಲೋಕದ ಹೊಸ ಲೋಕ ಎಂದು ಬಣ್ಣಿಸಿದರು.
ಪೊಲೀಸರ ಮೆಚ್ಚುಗೆ
ಬೆಂಗಳೂರಿನ ಟೆಕ್ಕಿಯ ಈ ರೀತಿಯ ಅನ್ವೇಷಣೆಗೆ ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಕಜ್ ತನ್ವಾರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಹೆಲ್ಮೆಟ್ ಆಧಾರಿತ ಸಂಚಾರ ಉಲ್ಲಂಘನೆ ಪತ್ತೆ ಪರಿಕಲ್ಪನೆಯ ಕುರಿತು ನಿಮ್ಮ ಇತ್ತೀಚಿನ ಪೋಸ್ಟ್ ಅನ್ನು ನಾವು ನೋಡಿದ್ದೇವೆ. ಆದರೆ ರಸ್ತೆ ಸುರಕ್ಷತಾ ದೃಷ್ಟಿಕೋನದಿಂದ ಈ ಕಲ್ಪನೆ ಹೊಸದಾಗಿ ಮತ್ತು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
2.3 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!
ಪ್ರಸ್ತುತ ಈ ಪೋಸ್ಟ್ 2.3 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್ ಪಡೆದಿದೆ. ಅಲ್ಲದೇ ಭಾರೀ ವೈರಲ್ ಆಗಿ, ವ್ಯಾಪಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು "ಇದು ತುಂಬಾ ಇಷ್ಟವಾಯಿತು. ಎಲ್ಲಾ ವಾಹನಗಳಲ್ಲೂ ಇಂತಹ ತಂತ್ರಜ್ಞಾನ ಬರಬೇಕು" ಎಂದು ಒಬ್ಬ ಬಳಕೆದಾರರು ಹಾರೈಸಿದ್ದಾರೆ. ಅಲ್ಲದೇ ಈಗಾಗಲೇ ಅಳವಡಿಸಿರುವ ಡ್ಯಾಶ್‌ಕ್ಯಾಮ್‌ಗಳಿಗೂ ಈ ಪರಿಕಲ್ಪನೆಯನ್ನು ವಿಸ್ತರಿಸುವಂತೆ ಹಲವರು ಸಲಹೆ ನೀಡಿದ್ದಾರೆ.
ಇನ್ನೊಬ್ಬರು, "ಡ್ಯಾಶ್‌ಕ್ಯಾಮ್‌ಗಳನ್ನು ಕ್ಲೌಡ್‌ಗೆ ಜೋಡಿಸಿ, ವರದಿ ಮಾಡಿದವರಿಗೆ ದಂಡದ 10% ಪ್ರೋತ್ಸಾಹಧನ ನೀಡಿದರೆ, ಉತ್ತೇಜನ ಸಿಗುತ್ತದೆ" ಎಂದಿದ್ದಾರೆ.


Click it and Unblock the Notifications