ಬೆಂಗಳೂರಿಗರೇ..ಇದು ನೀವು ಗಮನಿಸಲೇಬೇಕಾದ ಸುದ್ದಿ. ನಿಮ್ಮ ಜೇಬಲ್ಲಿರುವ ಹಣ ಹಾಗೆಯೇ ಇರಬೇಕು ಅಂದರೆ, ನೀವು ಇನ್ನುಮುಂದೆ ಎಲ್ಲಾ ರೀತಿಯ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಯಾಕೆ ಅಂದ್ರೆ ಈ 2025ನೇ ವರ್ಷದ ಹೊಸ ಟ್ರಾಫಿಕ್ ಮಾರ್ಚ್ 1ರಿಂದಲೇ ರೂಲ್ಸ್ ಜಾರಿಗೆ ಬಂದಿದೆ. ನಿಮಗಿದು ತಿಳಿದಿದೆಯೋ ಇಲ್ಲವೋ..ಈ ಹೊಸ ಟ್ರಾಫಿಕ್ ನಿಯಮ ಪಾಲಿಸಿಲ್ಲ ಎಂದಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.

ಹೌದು, ಭಾರತ ಸರ್ಕಾರದ ಹೊಸ ನಿಯಮ ಭಾರಿ ಕಠಿಣವಾಗಿದೆ. ಅಂದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಹಳೆಯ ದಂಡಕ್ಕಿಂತ ಹೆಚ್ಚು ದಂಡವನ್ನು ಪಾವತಿಸಬೇಕು. ಈ ಹೊಸ ಟ್ರಾಫಿಕ್ ನಿಯಮವನ್ನು ರಸ್ತೆಗಳಲ್ಲಾಗುವ ಅಪಘಾತಗಳನ್ನು ತಡೆಗಟ್ಟಲು ಕೂಡ ಜಾರಿಗೆ ಬಂದಿವೆ. ಮುಖ್ಯವಾಗಿ ಮದ್ಯಪಾನ ಮಾಡಿರುವ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ಸವಾರಿಯಾಗುವುದು, ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ಸೀಟ್ಬೆಲ್ಟ್ ಹಾಕದಿರುವುದು ಇತ್ಯಾದಿ ತಪ್ಪುಗಳ ಮೇಲೆ ಕಠಿಣ ದಂಡ ವಿಧಿಸಲಾಗುವುದು. ಅಂದರೆ ದಂಡ ಪಾವತಿ ಮುಂಚೆಗಿಂತಲೂ ಹತ್ತು ಪಟ್ಟು ಹೆಚ್ಚಾಗಿದೆ. ಟ್ರಾಫಿಕ್ ನಿಯಮ ಪಾಲಿಸದಿದ್ದರೆ ದಂಡದ ಬಿಸಿ ತಗಲುವುದನ್ನು ತಪ್ಪಿಸಲಾಗಲ್ಲ. ಹಾಗಾದರೆ ಹೊಸ ದಂಡದ ನಿಯಮದ ಪ್ರಕಾರ ದಂಡದ ಮಿತಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದು ತಿಳಿಯೋಣ..
ಹೊಸ ದಂಡಗಳ ವಿವರ ಇಲ್ಲಿದೆ:
ಮದ್ಯಪಾನ ಮಾಡಿದವರ ದಂಡ ಸ್ಥಿತಿ:
ಮದ್ಯಪಾನ ಮಾಡಿದವರು ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಮೊದಲು ₹1,000 ದಿಂದ ₹1,500 ದಂಡ ಪಾವತಿಸಬೇಕಿತ್ತು. ಆದರೆ ಈಗ ಹೊಸ ದಂಡ ನಿಯಮದ ಪ್ರಕಾರ ₹10,000 ದಂಡ ಅಥವಾ 6 ತಿಂಗಳ ಜೈಲುಶಿಕ್ಷೆಗೆ ಒಳಪಡಬೇಕಾಗುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಬಿಸಿಯೂ ಹೆಚ್ಚಾಗುತ್ತದೆ, ಅಂದರೆ ₹15,000 ದಂಡ ಅಥವಾ 2 ವರ್ಷ ಜೈಲುಶಿಕ್ಷೆಗೆ ಒಳಪಡಬೇಕಾಗುತ್ತದೆ.
ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು:
ಮೊದಲಿನ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಿದರೆ ₹100 ಪಾವತಿಸಬೇಕಿತ್ತು. ಆದರೆ ಹೊಸ ದಂಡ ನಿಯಮದ ಪ್ರಕಾರ ₹1,000 ದಂಡ ಪಾವತಿಸುವುದರ ಜೊತೆಗೆ, 3 ತಿಂಗಳು ಲೈಸೆನ್ಸ್ ರದ್ದಾಗುತ್ತದೆ.
ಸೀಟ್‌ಬೆಲ್ಟ್ ಇಲ್ಲದೇ ಕಾರು ಚಾಲನೆ:
ಕಾರು ಚಲಾಯಿಸುವವರು ಸೀಟ್‌ಬೆಲ್ಟ್ ಇಲ್ಲದೇ ಸವಾರಿ ಮಾಡಿದರೆ ಮೊದಲು, ₹100 ಪಾವತಿಸಬೇಕಿತ್ತು. ಆದರೆ ಹೊಸ ದಂಡದ ನಿಯಮದ ಪ್ರಕಾರ ₹1,000 ದಂಡ ಪಾವತಿಸಬೇಕಾಗುತ್ತದೆ.
ಮೊಬೈಲ್ ಬಳಸುತ್ತಾ ವಾಹನ ಚಾಲನೆ:
ವಾಹನ ಚಲಿಸುವಾಗ ಮೊಬೈಲ್ ಬಳಸಿದರೆ ಹಳೆಯ ದಂಡ, ₹500 ಪಾವತಿಸಬೇಕಿತ್ತು. ಆದರೆ ಈಗ ಈ ಮೊತ್ತ ಹತ್ತು ಪಟ್ಟು ಹೆಚ್ಚಾಗಿದೆ. ಅಂದರೆ ಹೊಸ ದಂಡದ ನಿಯಮ ಪ್ರಕಾರ ಮೊಬೈಲ್ ಬಳಸುತ್ತಾ ವಾಹನ ಚಲಾಯಿಸಿದರೆ ₹5,000 ಪಾವತಿಸಬೇಕಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ:
ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಮೊದಲು, ₹500 ಪಾವತಿಸಬೇಕಿತ್ತು. ಆದರೆ ಈಗ ಈ ಮೊತ್ತ ಹತ್ತು ಪಟ್ಟು ಹೆಚ್ಚಾಗಿದೆ. ಅಂದರೆ ಹೊಸ ದಂಡದ ನಿಯಮ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ₹5,000 ಪಾವತಿಸಬೇಕಾಗುತ್ತದೆ.
ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್:
ಒಂದೇ ಬೈಕ್‌ನಲ್ಲಿ ಮೂರು ಜನ ಕುಳಿತು ಸವಾರಿ ಮಾಡಿದರೆ ಮೊದಲು ₹100 ದಂಡ ಬೀಳುತ್ತಿತ್ತು. ಆದರೆ ಈಗ ಹೊಸ ದಂಡ ನಿಯಮದ ಪ್ರಕಾರ ₹1,000 ದಂಡ ಬೀಳಲಿದೆ.
ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವುದು:
ಒಂದು ವೇಳೆ ಇನ್ಶೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಮೊದಲು ₹200 ರಿಂದ ₹400 ದಂಡ ಪಾವತಿಸಬೇಕಿತ್ತು. ಆದರೆ ಹೊಸ ದಂಡ ನಿಯಮದ ಪ್ರಕಾರ ₹2,000 ದಂಡ ಅಥವಾ 3 ತಿಂಗಳ ಜೈಲುಶಿಕ್ಷೆಗೆ ಒಳಪಡಬೇಕಾಗುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಮೊತ್ತ ₹4,000 ಆಗುತ್ತದೆ.
ಪರಿಸರ ಮಾಲಿನ್ಯ ಪ್ರಮಾಣಪತ್ರ ಇಲ್ಲದೆ ಚಾಲನೆ:
ಪರಿಸರ ಮಾಲೀನ್ಯ ಪ್ರಮಾಣಪತ್ರ ಇಲ್ಲದೇ ವಾಹನ ಚಾಲನೆ ಮಾಡಿದರೆ ಹಳೆಯ ದಂಡ ₹1,000 ಇತ್ತು. ಆದರೆ ಹೊಸ ದಂಡ ನಿಯಮದ ಪ್ರಕಾರ ₹10,000 ದಂಡ ಅಥವಾ 6 ತಿಂಗಳ ಜೈಲುಶಿಕ್ಷೆಗೆ ಒಳಪಡಬೇಕಾಗುತ್ತದೆ.
ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ದಾರಿ ಕೊಡದಿರುವುದು:
ವಾಹನ ಚಲಾಯಿಸುವಾಗ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ತಪ್ಪದೇ ದಾರಿ ಮಾಡಿಕೊಡಬೇಕು. ಒಂದು ವೇಳೆ ದಾರಿ ಮಾಡಿಕೊಡದಿದ್ದರೆ ಮೊದಲು ₹1,000 ದಂಡ ಪಾವತಿಸಬೇಕಿತ್ತು. ಆದರೆ ಹೊಸ ದಂಡದ ನಿಯಮ ಪ್ರಕಾರ ₹10,000 ದಂಡ ವಿಧಿಸಲಾಗುತ್ತದೆ.
ಅಪ್ರಾಪ್ತರು ವಾಹನ ಚಲಾಯಿಸಿದರೆ:
ಅಪ್ರಾಪ್ತರು..ಅಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ಮೊದಲು, ₹2,500 ವಿಧಿಸಲಾಗುತ್ತಿತ್ತು. ಆದರೆ ಹೊಸ ದಂಡದ ನಿಯಮದ ಪ್ರಕಾರ ₹25,000 ದಂಡ, 3 ವರ್ಷ ಜೈಲುಶಿಕ್ಷೆ, 1 ವರ್ಷಕ್ಕೆ ವಾಹನ ನೋಂದಣಿ ರದ್ದು ಹಾಗೂ 25ನೇ ವಯಸ್ಸು ಮುಟ್ಟುವವರೆಗೆ ಲೈಸೆನ್ಸ್ ಪಡೆಯಲು ಅನರ್ಹತೆ ಎಂದು ಪರಿಗಣಿಸಲಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ರೇಸಿಂಗ್:
ಸಾರ್ವಜನಿಕ ರಸ್ತೆಯಲ್ಲಿ ಸ್ಪೀಡಿಂಗ್ ಅಥವಾ ರೇಸಿಂಗ್ ಮಾಡಿದರೆ ಮೊದಲು ₹500 ದಂಡ ಪಾವತಿಸಬೇಕಿತ್ತು. ಆದರೆ ಹೊಸ ದಂಡ ನಿಯಮದ ಪ್ರಕಾರ ₹5,000 ದಂಡ ವಿಧಿಸಬೇಕಾಗುತ್ತದೆ.
ಅತಿಯಾದ ಲೋಡ್ ಹಾಕಿ ವಾಹನ:
ವಾಹನಗಳಲ್ಲಿ ಅತಿಯಾದ ಲೋಡ್ ಹಾಕಿ ಚಲಾಯಿಸಿದರೆ ಮೊದಲು ₹2,000 ದಂಡ ಪಾವತಿಸಬೇಕಿತ್ತು. ಆದರೆ ಹೊಸ ದಂಡದ ನಿಯಮದ ಪ್ರಕಾರ ಹತ್ತು ಪಟ್ಟು ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅಂದರೆ ₹20,000 ದಂಡ ಪಾವತಿಸಬೇಕಾಗುತ್ತದೆ.
ಸಿಗ್ನಲ್ ಜಂಪ್ ಮಾಡುವುದು:
ಒಂದು ವೇಳೆ ಸಿಗ್ನಲ್ ಜಂಪ್ ಮಾಡಿ ವಾಹನ ಚಲಿಸಿದರೆ ಮೊದಲು ₹500 ದಂಡ ಪಾವತಿಸಬೇಕಿತ್ತು. ಆದರೆ ಹೊಸ ದಂಡದ ನಿಯಮದ ಪ್ರಕಾರ ₹5,000 ದಂಡ ಪಾವತಿಸಬೇಕಾಗುತ್ತದೆ.
ಈ ಹೊಸ ಟ್ರಾಫಿಕ್ ನಿಯಮಗಳು ಸಾರ್ವಜನಿಕರ ಹಿತಾಸಕ್ತಿ ಮತ್ತು ಅವರ ಸುರಕ್ಷತೆಗೆ ಜಾರಿ ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್ ಹಬ್ ಆಗಿರುವುದರಿಂದ ಇಲ್ಲಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿರುತ್ತವೆ. ಹೀಗಾಗಿ ಆಗಾಗ ಟ್ರಾಫಿಕ್ ನಿಯಮಗಳು ಹೊಸ ರೂಪದಲ್ಲಿ ಬರುತ್ತಿರುತ್ತವೆ. ಹಾಗೆಯೇ ಈ ಬಾರಿ ಕೂಡ ಈ ಹೊಸ ನಿಯಮ ಜಾರಿಗೆ ಬಂದಿದೆ.
ಇನ್ನು ಎಂಥದ್ದೇ ನಿಯಮಗಳು ಜಾರಿಗೆ ತಂದರೂ ವಾಹನ ಸವಾರರು ನಿಯಮ ಉಲ್ಲಂಘಿಸುತ್ತಲೇ ಇರುತ್ತಾರೆ. ಹೀಗಾಗಿ ದಂಡವೇ ಸರಿಯಾದ ಮಾರ್ಗವೆಂದು ಹೊಸ ಟ್ರಾಫಿಕ್ ನಿಯಮಗಳನ್ನು ತರಲಾಗಿದೆ. ಈ ಹೆಚ್ಚುವರಿ ದಂಡದ ಬಿಸಿಯಿಂದಾದರೂ ಟ್ರಾಫಿಕ್ ನಿಯಯ ಪಾಲನೆಯಾಗುತ್ತದಾ ಎಂದು ಕಾದುನೋಡಬೇಕಿದೆ. ಏಕೆಂದರೆ ಬೆಂಗಳೂರಿನಲ್ಲಿ ಟ್ರಾಫಿಕ್ ದಿನೇ ದಿನೆ ಹೆಚ್ಚುತ್ತಿದೆ. ಇದರಿಂದ ಪಾದಾಚಾರಿಗಳು ಧೈರ್ಯವಾಗಿ ಓಡಾಡುವುದೂ ಕೂಡ ಕಷ್ಟವಾಗುತ್ತಿದೆ. ಅದರಲ್ಲೂ ಸ್ಪೀಡ್ ಆಗಿ ಬೈಕ್ ಓಡಿಸುವ ಯುವಕರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆಲ್ಲ ಒಂದೇ ಮಾರ್ಗವೆಂದರೆ ಟ್ರಾಫಿಕ್ ನಿಯಮಗಳಲ್ಲಿ ಹೆಚ್ಚುವರಿ ದಂಡ ವಿಧಿಸುವುದು.
ವಾಹನ ಸವಾರರು ಈಗಲಾದರೂ ನಿಯಮಗಳನ್ನು ಪಾಲನೆ ಮಾಡಿ. ನಿಯಮ ಪಾಲಿಸುವ ಮೂಲಕ ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ, ಜೇಬು ರಕ್ಷಿಸಿಕೊಳ್ಳಿ. ನಿಮ್ಮ ಜೀವ, ನಿಮ್ಮ ಜೇಬು, ನಿಮ್ಮ ಪ್ರೀತಿಯವರ ಸುರಕ್ಷತೆಯ ಬಗ್ಗೆ ನೀವೇ ಕಾಳಜಿ ವಹಿಸಬೇಕಾಗಿರುತ್ತದೆ. ಬೆಂಗಳೂರಿನ ರಸ್ತೆಗಳಲ್ಲಿ ಜವಾಬ್ದಾರಿಯುತ ಚಾಲಕರು ಆಗುವ ಮೂಲಕ ಮಾತ್ರ ನಿಮ್ಮ ಜೀವ ರಕ್ಷಣೆ ಸಾಧ್ಯವಾಗಿರುತ್ತದೆ.


Click it and Unblock the Notifications