ಸಿಲಿಕಾನ್ ಸಿಟಿ, ಮೆಟ್ರೋ ಸಿಟಿ, ಉದ್ಯಾನನಗರಿ ಎಂದು ಕರೆಸಿಕೊಳ್ತಿದ್ದ ಬೆಂಗಳೂರು ಈಗ ಟ್ರಾಫಿಕ್ ಸಿಟಿಯಾಗಿ ಬದಲಾಗಿದೆ. ಟ್ರಾಫಿಕ್ ಅಂದ್ರೆ ಮೊದಲು ನೆನಪಾಗೋದೇ ಬೆಂಗಳೂರು ಎನ್ನುವಂತಾಗಿದೆ. ಅಷ್ಟೊಂದು ಪ್ರಸಿದ್ಧಿಯಾಗಿದೆ ನಮ್ಮ ಬೆಂಗಳೂರು. ಸಾವಿರಾರು ಜನರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕುವ ಪರಿಸ್ಥಿತಿ ಸಾಮಾನ್ಯವಾಗಿದೆ. ಆದರೆ ಅಕ್ಟೋಬರ್ 1ರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಯಾಕೆ ಅಂತೀರಾ? ಮುಂದೆ ಓದಿ ಎನೆಲ್ಲಾ ಪ್ರಾಬ್ಲೆಮ್ಸ್ ಬರಬೋದು ಅಂತ.

ಕಂಪನಿಗಳ ನಿರ್ಧಾರದಿಂದ ರಸ್ತೆಗಳಲ್ಲಿ ವಾಹನಗಳ ಏರಿಕೆ:
ಔಟರ್ ರಿಂಗ್ ರೋಡ್ (ORR) ಭಾಗದಲ್ಲಿರುವ ಹಲವಾರು ಐಟಿ ಮತ್ತು ಖಾಸಗಿ ಕಂಪನಿಗಳು ಇತ್ತೀಚೆಗೆ ದೊಡ್ಡ ನಿರ್ಧಾರ ತೆಗೆದುಕೊಂಡಿವೆ. ಮನೆಯಿಂದ ಕೆಲಸ (WFH) ಮತ್ತು ಹೈಬ್ರಿಡ್ ಮಾದರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿ, ಎಲ್ಲಾ ಉದ್ಯೋಗಿಗಳು ಕಚೇರಿಯಿಂದಲೇ ಪೂರ್ಣ ಸಮಯ ಕೆಲಸ ಮಾಡಬೇಕು ಎಂದು ತಿಳಿಸಿವೆ. ಕಂಪನಿಗಳ ಪ್ರಕಾರ, ಇದರಿಂದ ಉತ್ಪಾದಕತೆ ಹೆಚ್ಚುತ್ತದೆ ಮತ್ತು ಉದ್ಯೋಗಿಗಳ ಕಾರ್ಯ ವೃದ್ಧಿಯಾಗುತ್ತದೆ.
ಆದರೆ ಈ ನಿರ್ಧಾರವು ಈಗಾಗಲೇ ಒತ್ತಡದಲ್ಲಿರುವ ಬೆಂಗಳೂರಿನ ರಸ್ತೆಗಳಿಗೆ ಮತ್ತಷ್ಟು ಹೊರೆ ತರಲಿದೆ. ಸಾವಿರಾರು ಮಂದಿ ಪ್ರತಿದಿನ ಕಚೇರಿಗೆ ಹೋಗಬೇಕಾದರೆ ವಾಹನಗಳ ಸಂಖ್ಯೆ ತೀವ್ರವಾಗಿ ಏರಲಿದೆ. ಇದರಿಂದ ಸಂಚಾರ ಸಮಸ್ಯೆ ಹೆಚ್ಚುವುದು ಖಚಿತ.
ಸಂಚಾರ ಇಲಾಖೆಯ ಎಚ್ಚರಿಕೆ:
ಬೆಂಗಳೂರು ಸಂಚಾರ ಪೊಲೀಸ್ (BTP) ದತ್ತಾಂಶ ಪ್ರಕಾರ, ORR ಬಳಿ ಇರುವ 26 ಪ್ರಮುಖ ಟೆಕ್ ಪಾರ್ಕ್‌ಗಳಲ್ಲಿ ಕಳೆದ ಜೂನ್ ತಿಂಗಳಿಗೆ ಹೋಲಿಸಿದರೆ ವಾಹನ ಸಂಚಾರ 45% ಹೆಚ್ಚಾಗಿದೆ. ಜೂನ್ 2024ರಲ್ಲಿ ಒಂದೇ ದಿನದಲ್ಲಿ ಸರಾಸರಿ 82,000 ವಾಹನಗಳು ಸಂಚರಿಸಿದ್ದರೆ, ಈಗ 1,20,000ಕ್ಕೂ ಹೆಚ್ಚು ವಾಹನಗಳು ಬಳಕೆಯಲ್ಲಿವೆ. ಅಕ್ಟೋಬರ್ 1ರಿಂದ ಈ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತರ ಮಾರ್ಗಗಳಲ್ಲಿಯೂ ಸಂಚಾರ ತೊಂದರೆ:
ORR ಮಾತ್ರವಲ್ಲದೆ, ಸರ್ಜಾಪುರ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಮಾರ್ಗಗಳಲ್ಲಿಯೂ ಸಂಚಾರ ತೊಂದರೆ ಹೆಚ್ಚಾಗುವ ಸಾಧ್ಯತೆಯಿದೆ. ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಪೂರ್ಣ ಸಮಯ ಕಚೇರಿಗೆ ಕರೆಯುತ್ತಿರುವುದರಿಂದ, ಈ ಮಾರ್ಗಗಳಲ್ಲಿ ವಾಹನಗಳ ಸಾಂದ್ರತೆ ಹೆಚ್ಚುವುದು ಖಚಿತ.
ವಾರದ ಮಧ್ಯದಲ್ಲಿ ಹೆಚ್ಚು ಟ್ರಾಫಿಕ್:
ಸಂಚಾರ ಇಲಾಖೆ ಪ್ರಕಾರ, ವಾರದ ಮಧ್ಯದಲ್ಲಿ, ವಿಶೇಷವಾಗಿ ಬುಧವಾರದಂದು ಸಂಚಾರ ತೊಂದರೆ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ಐಟಿ ಕಂಪನಿಗಳಿಗೆ ವಿಶೇಷ ಸಲಹೆ ನೀಡಲಾಗಿದೆ. ವಾರದ ಮಧ್ಯದಲ್ಲಿ ಕನಿಷ್ಠ ಒಂದು ದಿನ ಮನೆಗಳಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸಂಚಾರ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಅದರ ಜೊತೆಗೆ, ಕಚೇರಿ ಸಮಯವನ್ನು ಬೆಳಿಗ್ಗೆ 7:30ರ ಸುಮಾರಿಗೆ ಪ್ರಾರಂಭಿಸಿ, ಸಂಜೆ ಗರಿಷ್ಠ ಸಂಚಾರಕ್ಕೂ ಮುಂಚಿತವಾಗಿ ಕೆಲಸ ಮುಗಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಪೀಕ್ ಅವರ್‌ನಲ್ಲಿ ವಾಹನ ಸಂಚಾರ ಕಡಿಮೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಣ ಸಮಯದಲ್ಲಿ ಏರಿಕೆ:
2025ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಕಚೇರಿಗೆ ಹೋಗಲು ಸರಾಸರಿ 63 ನಿಮಿಷಗಳು ಬೇಕಾಗುತ್ತಿದೆ. ಈ ಸಮಯದಲ್ಲಿ ಜನರು ಸುಮಾರು 19 ಕಿಮೀ ಪ್ರಯಾಣಿಸುತ್ತಾರೆ. ಇದು ಕಳೆದ ವರ್ಷಕ್ಕಿಂತ 16% ಹೆಚ್ಚು. ಮುಂಬೈನಲ್ಲಿ 25 ಕಿಮೀ ಪ್ರಯಾಣಕ್ಕೆ 66 ನಿಮಿಷ, ದೆಹಲಿ NCR ಪ್ರದೇಶದಲ್ಲಿ 26 ಕಿಮೀ ಪ್ರಯಾಣಕ್ಕೆ 65 ನಿಮಿಷ ಬೇಕಾಗುತ್ತಿದೆ. ಚೆನ್ನೈನಲ್ಲಿ 22 ಕಿಮೀ ಪ್ರಯಾಣಕ್ಕೆ 63 ನಿಮಿಷ ಹಿಡಿಯುತ್ತಿದೆ. ಹೈದರಾಬಾದ್‌ನಲ್ಲಿ 23 ಕಿಮೀ ಪ್ರಯಾಣಕ್ಕೆ 58 ನಿಮಿಷಗಳು ಬೇಕಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಯಾಣ ಸಮಯ ಹೆಚ್ಚಳವೇ ಹೆಚ್ಚು ತಲೆನೋವಾಗಿ ಪರಿಣಮಿಸಿದೆ.
ಉದ್ಯೋಗ ಭದ್ರತೆಗಾಗಿ ಕಚೇರಿಯ ಹಾಜರಾತಿ:
AI ತಂತ್ರಜ್ಞಾನ ಅಳವಡಿಕೆಯ ನಂತರ ಉದ್ಯೋಗ ಕಳೆದುಕೊಳ್ಳುವ ಭಯ ಹೆಚ್ಚಾಗಿದೆ. ಅನೇಕ ಉದ್ಯೋಗಿಗಳು ಕಚೇರಿಯಲ್ಲಿ ಹಾಜರಿರುವುದೇ ಕೆಲಸದ ಭದ್ರತೆಗೆ ಮುಖ್ಯ ಎನ್ನುತ್ತಾರೆ. ಈ ಕಾರಣದಿಂದ ಪ್ರತಿದಿನ ಕಚೇರಿಗೆ ಹೋಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ಸಂಚಾರ ತೊಂದರೆ ಹೆಚ್ಚುತ್ತಿದೆ.
ಸಂಚಾರ ಇಲಾಖೆ, ಕಂಪನಿಗಳು ಮತ್ತು ನಾಗರಿಕರು ಒಟ್ಟಾಗಿ ಪ್ರಯತ್ನಿಸಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅಕ್ಟೋಬರ್ 1 ನಂತರ ಬೆಂಗಳೂರಿನ ರಸ್ತೆಗಳು ಇನ್ನಷ್ಟು ದಟ್ಟವಾಗಿ, ಜನರಿಗೆ ಪ್ರತಿದಿನದ ಪ್ರಯಾಣವೇ ದೊಡ್ಡ ಸವಾಲಾಗುವ ಪರಿಸ್ಥಿತಿ ಎದುರಾಗಬಹುದು.


Click it and Unblock the Notifications