ಮಳೆ.. ಮಳೆ ಎಂದು ಹೇಳುತ್ತಿದ್ದ ಜನ ಇದೀಗ ಚಳಿ.. ಚಳಿ ಹೇಳುವಂತಾಗಿದೆ. ರಾತ್ರಿ-ಬೆಳಗಾದರೆ ಸಾಕು ಮೈಕೊರೆಯುವಷ್ಟು ಚಳಿ ಆವರಿಸಿಬಿಡುತ್ತೆ. ಅದರಲ್ಲೂ ಬೆಂಗಳೂರಿನಲ್ಲಂತೂ ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ಶೀತ ಗಾಳಿ ಕೂಡಾ ಬೀಸುತ್ತಿದೆ. ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಾಗಿದ್ದು, ಮುಂಜಾನೆಯ ತಾಪಮಾನವಂತೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಚಳಿಗಾಲದ ತೀವ್ರತೆ ಹೇಗಿದೆ ಎಂದು ಅರಿಯಬಹುದು. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಕೆಲವು ದಿನಗಳವರೆಗೆ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 12 ರಿಂದ 17 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹೇಳಲಾಗಿದೆ. ಶುಕ್ರವಾರ, ಏರ್‌ಪೋರ್ಟ್ ಪ್ರದೇಶದಲ್ಲಿ 12.9°C ತಾಪಮಾನ ದಾಖಲಾಗಿದೆ. ಹಗಲಿನ ಗರಿಷ್ಠ ತಾಪಮಾನ 26-27°C ಆಸುಪಾಸಿನಲ್ಲಿತ್ತು ಎಂದು ಹೇಳಲಾಗಿದೆ.

ವೀಕೆಂಡ್ ವಾತಾವರಣ:
ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ಇಡೀ ದಿನ ಬಿಸಿಲಿನ ವಾತಾವರಣವಿರಲಿದ್ದು, ಚಳಿಯೂ ಹೆಚ್ಚಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ದಿನಗಳಲ್ಲಿ ಗರಿಷ್ಠ ತಾಪಮಾನ 26-27°C ಆಸುಪಾಸಿನಲ್ಲಿರಲಿದ್ದು, ಕನಿಷ್ಠ ತಾಪಮಾನ 12-15°C ಗೆ ಇಳಿಯಲಿದೆ. ಇದು ಹಗಲು-ರಾತ್ರಿ ತಾಪಮಾನದ ನಡುವೆ ಗಣನೀಯ ವ್ಯತ್ಯಾಸವನ್ನು ಸೃಷ್ಟಿಸುತ್ತದೆ.
ಈ ವಾರಾಂತ್ಯದಲ್ಲಿ ಸರಾಸರಿ ಗಾಳಿಯ ವೇಗ ಗಂಟೆಗೆ ಸುಮಾರು 16 ಕಿ.ಮೀ ಇರಲಿದೆ ಎನ್ನಲಾಗಿದೆ. ಮುಂಜಾನೆ ಮತ್ತು ಸಂಜೆ ವೇಳೆಗೆ ಜನರು ಜಾಕೆಟ್‌ಗಳು ಅಥವಾ ಸ್ವೆಟರ್‌ಗಳನ್ನು ಧರಿಸಿದರೆ ಒಳ್ಳೆಯದು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಆರೋಗ್ಯದ ಸಮಸ್ಯೆಯಲ್ಲಿದ್ದ
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 76-85 ರಷ್ಟಿದ್ದು, ಪ್ರಸ್ತುತ ಬೆಂಗಳೂರು ವಾಯುಗುಣಮಟ್ಟದಲ್ಲಿ 'ಮಧ್ಯಮ' ಶ್ರೇಣಿಯಲ್ಲಿದೆ. ಇದು ಉತ್ತರ ಭಾರತದ ನಗರಗಳ ತೀವ್ರ ಮಾಲಿನ್ಯಕ್ಕಿಂತ ಗಣನೀಯವಾಗಿ ಉತ್ತಮವಾಗಿದೆ. PM2.5 ಕಣಗಳ ಮಟ್ಟವು 99.78 µg/m³ ಹಾಗೂ PM10 ಮಟ್ಟವು 107 µg/m³ ರಷ್ಟಿದ್ದು, ಎರಡೂ ಸದ್ಯಕ್ಕೆ ಸಮಾನ್ಯವಾಗಿದೆ.
ಮುಂಜಾನೆಯ ವೇಳೆಯಲ್ಲಿ ಮಂಜು ಮತ್ತು ಇಬ್ಬನಿ ಆವರಿಸುವ ಸಾಧ್ಯತೆ ಹೆಚ್ಚಿದ್ದು, ಇದು ಸೂರ್ಯೋದಯದ ನಂತರದ ಮೊದಲ ಕೆಲವು ಗಂಟೆಗಳಲ್ಲಿ ಕಡಿಮೆಯಾಗಲಿದೆ. ಆದರೂ ಪ್ರಯಾಣದ ವೇಳೆ ಅಡ್ಡಿಯಾಗಬಹುದು ಎಂದು ಹೇಳಲಾಗಿದೆ. ಆರೋಗ್ಯದಲ್ಲಿ ಸಮಸ್ಯೆ ಇದ್ದವರು, ಆದಷ್ಟು ಈ ಸಂದರ್ಭದಲ್ಲಿ ಹೊರಹೋಗದಿದ್ದರೆ ಒಳ್ಳೆಯದು.
ಡಿಸೆಂಬರ್ ವಾತಾವರಣ
ಡಿಸೆಂಬರ್ ತಿಂಗಳು ಬೆಂಗಳೂರಿನಲ್ಲಿ ತಂಪಾದ ಮತ್ತು ಒಣ ಹವಾಮಾನದಿಂದ ಕೂಡಿರಲಿದೆ ಎಂದು ಹೇಳಲಾಗಿದೆ. ಆದರೆ ತಿಂಗಳ ಅಂತ್ಯದ ವೇಳೆಗೆ ತಾಪಮಾನವು ಸುಮಾರು 27°C ತಲುಪುವ ನಿರೀಕ್ಷೆಯಿದೆ. ಈ ಡಿಸೆಂಬರ್‌ನಲ್ಲಿ ಅಂದಾಜು 8 ದಿನ ಮಳೆಯಾಗಲಿದೆ ಎಂದು ವರದಿಯಾಗಿದೆ.
ಇನ್ನು ಮುಂದಿನ 2 ದಿನಗಳಲ್ಲಿ ಕರ್ನಾಟಕದಾದ್ಯಂತ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಶೀತ ಅಲೆಗಳು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಚಳಿ ವಾತಾವರಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಬೆಳಗ್ಗೆ ಮನೆಯಿಂದ ಹೊರಗೆ ಹೋಗೋದೆ ಕಷ್ಟವಾಗಿಬಿಟ್ಟಿದೆ.


Click it and Unblock the Notifications